ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಜತೆಗಿನ ಮೈತ್ರಿ ಮುಂದುವರಿಯಲಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ. ಕುಮಾರಸ್ವಾಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜಕೀಯ ಚರ್ಚೆ ಮಾಡಿಲ್ಲ. ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಇಡಲಿಲ್ಲ. ಅಂತಹ ಮಾತುಗಳು ಶುದ್ಧ ಸುಳ್ಳು ಎಂದರು.
“ಪ್ರಧಾನಿ ಭೇಟಿ ಸಂದರ್ಭದಲ್ಲಿ ನಾನೂ ಇದ್ದೆ. ರಾಜ್ಯದ ಅಭಿವೃದ್ಧಿ, ಬರ ಪರಿಹಾರಕ್ಕೆ ಅನುದಾನ ನೀಡುವ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡಲಾಯಿತು. ರಾಜ್ಯ ಮೈತ್ರಿ ಸರ್ಕಾರಕ್ಕೆ ಯಾವುದೇ ಹಾನಿಯಾಗುವುದಿಲ್ಲ’ ಎಂದು ಹೇಳಿದರು.
ಹಾಸನದಲ್ಲಿ ಪ್ರಜ್ವಲ್ ಕನಿಷ್ಠ ಎರಡು ಲಕ್ಷ ಲೀಡ್‌ನಲ್ಲಿ ಗೆಲ್ಲುತ್ತಾರೆ. ದೇವೇಗೌಡರೆ ನಿಂತಿದ್ದರೆ ಐದು ಲಕ್ಷ ಲೀಡ್ ಬರುತ್ತಿತ್ತು. ತುಮಕೂರು ಮತ್ತು ಮಂಡ್ಯದಲ್ಲೂ ನಾವೇ ಗೆಲ್ಲೋದು. ಮಂಡ್ಯದಲ್ಲಿ ನಮ್ಮ ಎಂಟು ಶಾಸಕರನ್ನು ಇಟ್ಟುಕೊಂಡು ಜೆಡಿಎಸ್ ಅಭ್ಯರ್ಥಿ ಗೆಲ್ಲೋದಿಲ್ಲ ಅಂದರೆ ಏನರ್ಥ.
ಜೆಡಿಎಸ್ ಮತ್ತು ಕಾಂಗ್ರೆಸ್‌ನ ಪಾರಂಪರಿಕ ಓಟ್‌ಗಳು ಯಾವಾಗಲೂ ಬದಲಾಗಲ್ಲ. ಕಾಂಗ್ರೆಸ್-ಜೆಡಿಎಸ್ ಸೇರಿ 20 ಸ್ಥಾನ ಗೆಲ್ಲಲಿದ್ದೇವೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಈ ಹಿಂದೆಯೂ ನಾನು ಹೇಳಿದ್ದೆ. ಅದು ನಿಜವಾಗಿತ್ತು. ಈಗ ಹೇಳುತ್ತಿರುವುದು ನಿಜ. ನಮ್ಮ ಸರ್ಕಾರ ಸೇಫ್. ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ 6 ಸ್ಥಾನ ಗೆಲ್ಲಲಿದೆ ಎಂದರು.
ಬಿಜೆಪಿಯವರು ಇಪ್ಪತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಅಷ್ಟು ಜನ ಇದ್ದಿದ್ದರೆ ಮೊದಲೇ ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಬೇಕಿತ್ತಲ್ಲವೇ? ಯಡಿಯೂರಪ್ಪ ಅವರದು ಒಂದು ರೀತಿಯಲ್ಲಿ ಹಗಲು ಕನಸು. ಫಲಿತಾಂಶದ ನಂತರ ಅವರೇ ಎಲ್ಲಿರುತ್ತಾರೋ ಎಂದು ಲೇವಡಿ ಮಾಡಿದರು.