Advertisement
ಸಿದ್ಧಗಂಗಾ ಮಠಕ್ಕೆ ಗುರುವಾರ ಭೇಟಿ ನೀಡಿದ ಸಿಎಂ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, “ಮುಖ್ಯಮಂತ್ರಿ ಪದವಿಯ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಹೆಜ್ಜೆ, ಹೆಜ್ಜೆಗೆ ತೊಂದರೆ ಎದುರಾಗಲಿದೆ ಎನ್ನುವುದೂ ಗೊತ್ತಿದೆ. ಆದರೂ, ಹೊಗಳಿಕೆ-ತೆಗಳಿಕೆಯನ್ನು ಸಮಚಿತ್ತದಲ್ಲಿ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಡಳಿತ ನೀಡುತ್ತೇನೆ. ಐದು ವರ್ಷಗಳ ಕಾಲ ಸುಭದ್ರ ಸರ್ಕಾರದ ಆಡಳಿತ ನೀಡಬೇಕು ಎಂದುಕೊಂಡಿದ್ದೇನೆ. ಆದರೆ, ಕಾಂಗ್ರೆಸ್ ನಾಯಕರ ನಿಲುವು ಹಾಗೂ ನಡೆಗಳ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ’ ಎಂದು ಹೇಳಿದರು.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ರಾಜಿ ಸರಕಾರವಾಗುವುದಿಲ್ಲ. ಶುಕ್ರವಾರದ ವಿಶ್ವಾಸ ಮತಯಾಚನೆ ವೇಳೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ರಾಜ್ಯದ ಎಲ್ಲ ಪ್ರಜೆಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಸರಕಾರದ ಕಾರ್ಯದ ಬಗ್ಗೆ ಉತ್ತರಿಸುತ್ತೇನೆ. ಕಳೆದ ಚುನಾವಣೆ ವೇಳೆ ನಾನು ಯಾವುದೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿರುವುದು ಕೇವಲ ರಾಜ್ಯದ ಅಭಿವೃದ್ಧಿಯ ಬಗ್ಗೆ. ಎತ್ತಿನಹೊಳೆ ಸೇರಿ ಇನ್ನುಳಿದ ಯೋಜನೆಗಳಲ್ಲಿ ಅಕ್ರಮಗಳಾಗಿದ್ದರೆ ನಿಲ್ಲಿಸುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದರು. ಚುನಾವಣಾಪೂರ್ವ ಹೇಳಿಕೆಗೆ ಮಹತ್ವ ಬೇಡ:
ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ಆಡಿದ ಮಾತುಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಚುನಾವಣೆ ವೇಳೆಯಲ್ಲಿ ಈ ರೀತಿಯ ಪರ ವಿರೋಧಗಳು ಬರುತ್ತವೆ. ನಾನು ಅನಿವಾರ್ಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿದ್ದೇನೆ. ಅಟ್ಟಹಾಸದಿಂದ ಮೆರೆಯಲು ಮುಖ್ಯಮಂತ್ರಿಯಾಗಿಲ್ಲ. ನನ್ನ ಕಾಲಾವಧಿಯಲ್ಲಿ ಜನರಿಗೆ ಉತ್ತಮ ಸೇವೆ ಮಾಡಲು ಮುಖ್ಯಮಂತ್ರಿಯಾಗಿದ್ದೇನೆ ಎಂದರು.
Related Articles
ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಮಧ್ಯಾಹ್ನ 1.05ಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಡಿ.ಸಿ.ಗೌರಿಶಂಕರ್ ಮತ್ತು ಮಾಜಿ ಶಾಸಕರೊಂದಿಗೆ ಆಗಮಿಸಿದ ಕುಮಾರಸ್ವಾಮಿ, ಶ್ರೀಗಳಿಗೆ ಶಾಲು, ಹಾರ ಹಾಕಿ, ಫಲ ನೀಡಿ ಗೌರವಿಸಿ, ಶ್ರೀಗಳ ಪಾದಕ್ಕೆ ನಮಸ್ಕರಿಸಿದರು. ಶ್ರೀಗಳು ಮಠದಿಂದ ಸಿಎಂಗೆ ಶಾಲು, ಹಾರ ಹಾಕಿ, ತಲೆಯ ಮೇಲೆ ಮಂತ್ರಾಕ್ಷತೆ ಹಾಕಿ ಆಶೀರ್ವಾದ ಮಾಡಿದರು.
Advertisement
ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ, ಸ್ವಾಮೀಜಿ ಜತೆ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ, ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಹಾಜರಿದ್ದರು. ಬಳಿಕ, ಸಿದ್ದಲಿಂಗ ಸ್ವಾಮೀಜಿ ಕಚೇರಿಗೆ ತೆರಳಿ ಅವರಿಂದಲೂ ಆಶೀರ್ವಾದ ಪಡೆದು, ಕೆಲಕಾಲ ಮಾತುಕತೆ ನಡೆಸಿದರು.