Advertisement
ಅವತ್ಯಾಕೋ ಮನಸ್ಸು ಸೋಮಾರಿಯಾಗಿತ್ತು. ಪ್ರತಿದಿನ ಇರೋ ಕಾಲೇಜೇ ಅಲ್ಲವೆ? ಅದೇ ಮೇಷ್ಟ್ರು, ಅದೇ ಸ್ನೇಹಿತರು, ಅವೇ ಪಾಠಗಳು.. ಎಂದೆನಿಸಿ ಇವತ್ತು ಕಾಲೇಜಿಗೆ ಹೋಗಬಾರದೆಂದು ನಿರ್ಧರಿಸಿದೆ. ನಿದ್ದೆ ಬರದಿದ್ದರೂ, ಹಗಲುಗನಸು ಕಾಣುತ್ತಾ, ಮಂಚದ ಮೇಲೆ ಒದ್ದಾಡುತ್ತಿದ್ದೆ. ಹಾಗೇ ಸ್ವಲ್ಪ ಸಮಯ ಕಳೆದ ನಂತರ, ನನ್ನ ಸ್ನೇಹಿತ ಫೋನ್ ಮಾಡಿ “ಯಾಕ್ ಮಗಾ? ಕಾಲೇಜಲ್ಲಿ ಕಾಣಿಸ್ತಿಲ್ಲ, ಎಲ್ಲಿದ್ದೀಯ?’ ಎಂದ. ನಾನಿವತ್ ಕಾಲೇಜ್‌ಗೆ ಬರಲ್ಲ ಅಂದು ಮುಸುಕೆಳೆದುಕೊಂಡೆ. ಅವನು, ನಮ್ ಕಾಲೇಜಿನ ಇಂಜಿನಿಯರಿಂಗ್ ಡಿಪಾರ್ಟ್ಮೆಂಟ್‌ನವ್ರು ಇವತ್ ಫ್ರೆಶರ್ಸ್ ಡೇ ಮಾಡ್ತಿದಾರೆ. ಮಧ್ಯಾಹ್ನ ಊಟಾನೂ ಇದೆ. ಬರೋದಾದ್ರೆ ಬಾ ಎಂದ. ಇಂಜಿನಿಯರಿಂಗ್ ಹುಡ್ಗಿರು ಸೂಪರ್ ಆಗಿದಾರೆ ಮಗಾ ಅಂತ ಒಂದು ವಾಕ್ಯವನ್ನೂ ಜೊತೆಗೆ ಸೇರಿಸಿದ್ದ. ಕಡೆಯ ಮಾತು ಕೇಳುತ್ತಿದ್ದಂತೆಯೇ ಸೋಮಾರಿತನ ಓಡಿ ಹೋಗಿ, ಹುಮ್ಮಸ್ಸು ಜೊತೆಯಾಯಿತು. ಎರಡೇ ನಿಮಿಷದಲ್ಲಿ ರೆಡಿಯಾದೆ. ಸ್ನೇಹಿತ ಹೇಳಿದಂತೆ, ಹುಡುಗಿಯರದ್ದೇ ದರ್ಬಾರು ಎದ್ದು ಕಾಣಿಸುತ್ತಿತ್ತು. ಆದರೆ ನನಗೆ ಯಾರೊಬ್ಬರೂ ವಿಶೇಷವಾಗಿ ಕಾಣಿಸಲಿಲ್ಲ. ಸ್ವಲ್ಪ ಹೊತ್ತಿಗೆಲ್ಲಾ ಫಂಕ್ಷನ್ ಬೋರ್ ಅನ್ನಿಸಿ, ರೂಮಿಗೆ ವಾಪಸ್ ಹೋಗೋಣ ಅಂತ ಹಿಂದಿಂದೆ ಹೆಜ್ಜೆ ಹಾಕುತ್ತಾ, ಕಿಕ್ಕಿರಿದು ತುಂಬಿದ್ದ ಜನರ ಮಧ್ಯೆ ಜಾಗ ಮಾಡಿಕೊಂಡು ನಡೆಯುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಯಾರನ್ನೋ ಗುದ್ದಿಬಿಟ್ಟೆ, ಯಾರೆಂದು ತಿರುಗಿ ನೋಡಿದರೆ, ಹುಡುಗಿ!ಸಾರಿ, ಗೊತ್ತಾಗಲಿಲ್ಲ ಅಂತ ಕೇಳಬೇಕು ಅನ್ನುವಷ್ಟರಲ್ಲಿ ಅವಳೇ “ಸಾರಿ’ ಕೇಳಿದಳು. “ಅರ್ಧದಲ್ಲೇ ಫಂಕ್ಷನ್ ಬಿಟ್ಟು ಹೋಗ್ತಾ ಇದ್ದೀರ, ಮುಂದಿನ ಡ್ಯಾನ್ಸ್ ಚೆನ್ನಾಗಿದೆ’ ಅಂದಳು. “ಓಹ್, ಹೌದಾ’ ಅಂತ ಪೆದ್ದು ನಗೆ ಬೀರಿದೆ. ಅವಳೇ ಮುಂದಾಗಿ, “ಬನ್ನಿ, ಇಲ್ಲೇ ಕುರ್ಚಿ ಖಾಲಿ ಇದೆಯಲ್ಲ, ಕೂತ್ಕೊಳ್ಳಿ’ ಎಂದಳು. ಅವಳು ಒತ್ತಾಯಿಸಿದಳಲ್ಲ ಅಂತ, ಕುಳಿತುಕೊಂಡೆ. ಫಂಕ್ಷನ್ ಮುಗಿಯುವವರೆಗೂ ಪಕ್ಕ ಕುಳಿತು, ಅದೇನೇನೋ ಮಾತಾಡುತ್ತಿದ್ದಳು. ನಾನು ಎಲ್ಲಾ ಮರೆತು ಅವಳನ್ನೇ ನೋಡುತ್ತಾ ಕುಳಿತುಬಿಟ್ಟೆ. ನನ್ನ ಹೆಸರು ಕೂಡಾ ಅವಳಿಗೆ ತಿಳಿದಿರಲಿಲ್ಲ. ಆದರೂ ಅವಳು ನನ್ನ ಬಳಿ ನಡೆದುಕೊಂಡ ರೀತಿಗೆ ನಾನು ಸೋತು ಹೋಗಿದ್ದೆ.
ಸುಮ್ಮನೆ ಅವಳನ್ನೇ ನೋಡುತ್ತಿದ್ದೆ. ಅವಳು ನಕ್ಕಾಗ ವಜ್ರಗಳ ಮಳೆಯೇ ಸುರಿದಂತೆ ಅನ್ನಿಸುತ್ತಿತ್ತು. ಅವಳ ಕಣ್ಣನ್ನು ನೋಡುತ್ತಲೇ, ಜೀವಮಾನವಿಡೀ ಕಳೆಯಬಹುದಿತ್ತು. ಅವಳು ಎಲ್ಲಾ ವಿಷಯಗಳಲ್ಲೂ ನನಗೆ ವಿಶೇಷವಾಗಿ ಕಂಡಳು. ಮೊದಲ ನೋಟದಲ್ಲೇ ಮನಸ್ಸನ್ನು ಕದ್ದ ಮಾಯಾವಿ ಹುಡುಗಿ ಆಕೆ.