Advertisement

ಮನೆ ಮುಂದೆ ನದಿ ಹರಿಯುತ್ತಿದ್ದರೂ ಕುಡಿಯಲು ನೀರಿಲ್ಲ!

01:31 AM May 05, 2019 | sudhir |

ಉಪ್ಪು³ಂದ: ಬಿಜೂರು ಗ್ರಾ.ಪಂ.ನ 1ನೇ ವಾರ್ಡ್‌ ನವಗ್ರಾಮ ಕಾಲನಿಯಲ್ಲಿನ ಮನೆಗಳಿಗೆ ಬವಳಾಡಿಯಲ್ಲಿರುವ ಟ್ಯಾಂಕ್‌ನಿಂದ 2 ದಿನಗಳಿಗೊಮ್ಮೆ ನಳ್ಳಿ ನೀರು ನೀಡಲಾಗುತ್ತಿದೆ. ಬಾವಿಯಲ್ಲಿ ನೀರು ಕಡಿಮೆಯಾದಲ್ಲಿ ಟ್ಯಾಂಕ್‌ ನೀರಿನ ದಾರಿಯನ್ನು ಕಾಯಬೇಕು. ಗರಡಿ, ಕಳಿಸಾಲು, ದೊಂಬ್ಲಿಕೇರಿ ಪ್ರದೇಶದಲ್ಲಿ, ನಿಸರ್ಗಕೇರಿ, ಕಳಿನಬಾಗಿಲು, ಸಾಲಿಮಕ್ಕಿ ಇಲ್ಲಿ ನದಿ ಮನೆಗಳ ಎದುರಿನಲ್ಲೇ ಹರಿಯುತ್ತಿದ್ದರೂ ಉಪ್ಪು ನೀರಾದ್ದರಿಂದ ಉಪಯೋಗಿಸಲು ಯೋಗ್ಯವಾಗಿಲ್ಲ. ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಳ್ಳಿಗಳ ಮೂಲಕ ನೀರು ಬರುವ ಸೂಚನೆಯಂತೂ ಇಲ್ಲ. ಇಲ್ಲಿನ ನಿವಾಸಿಗಳು ನಳ್ಳಿಗಳ ಮುಂದೆ ಕೊಡಪಾನ ಇಟ್ಟು ಯಾವ ಸಮಯದಲ್ಲಿ ನೀರು ಬಿಡಬಹುದೊ ಎಂದು ಕಾಯುತ್ತಾ ಕುಳಿತುಕೊಳ್ಳುವುದು ರೂಢಿಯಾಗಿದೆ. ಅರ್ಧ ಗಂಟೆ ನೀರು ಬಂದರೆ ಹೆಚ್ಚು.

Advertisement

ಬಾವಿ ಇದ್ದರೂ ನೀರಿಲ್ಲ
ಬೀಜೂರು ಗ್ರಾಮ ಪಂಚಾಯತ್‌ ವ್ಯಾಪ್ತಿ ಯಲ್ಲಿ ಅಂತರ್ಜಲ ತೀವ್ರ ಕುಸಿತಗೊಂಡಿ ರುವುದು ಕಂಡುಬರುತ್ತದೆ. ಕಂಚಿಕಾನ್‌, ಬಿಜೂರು ಶಾಲಾ ವಠಾರದ ನಿವಾಸಿಗಳು ಟ್ಯಾಂಕ್‌ ನೀರು ನೀಡುವಂತೆ ಗ್ರಾ.ಪಂ.ನ ಮೊರೆಹೋಗಿವೆ. ನಮ್ಮಲ್ಲಿ ಬಾವಿ ಇದೆ ಆದರೆ ಈಗ ಪೂರ್ಣ ಬತ್ತಿ ಹೋಗಿದ್ದು ನೀರು ನೀಡುವಂತೆ ಜನರು ಕೇಳುತ್ತಿದ್ದಾರೆ.

ದಾರಿ ಕಾಯಬೇಕು
3ನೇ ವಾರ್ಡ್‌ನ ನಿಸರ್ಗಕೇರಿ, ಕಳಿನ ಬಾಗಿಲು ಹಾಗೂ ಕಳಿಸಾಲು ಪ್ರದೇಶದಲ್ಲಿ ನೀರಿನ ಬರ ವ್ಯಾಪಿಸಿದೆ. ನಳ್ಳಿಯ ಮೂಲಕ ನೀರು ಬರುವ ಖಾತರಿ ಇಲ್ಲ. ಎರಡು ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಬಿಡಲಾಗುತ್ತಿದೆ. ಇದಕ್ಕೆ ಸಮಯ ನಿಗದಿ ಇಲ್ಲ. 10 ಕೊಡಪಾನ ನೀರು ಕೊಟ್ಟರೆ ಹೆಚ್ಚು ಎನ್ನುತ್ತಾರೆ ಇಲ್ಲಿನ ನಿವಾಸಿ ಅಕ್ಕಮ್ಮ.

ನೀರು ಸಾಲುತ್ತಿಲ್ಲ
ಸ್ಥಳೀಯಾಡಳಿತ ಟ್ಯಾಂಕರ್‌ ಮೂಲಕ ಪ್ರತಿ ಮನೆಗೆ ಲೀ. 250ಕ್ಕೂ ಹೆಚ್ಚು ನೀರು ನೀಡುತ್ತಿದ್ದೇವೆ ಎನ್ನುತ್ತಿದೆ. ಪ್ರತಿದಿನ 4 ಸಾವಿರ ಲೀ. ನೀರು ಸರಬರಾಜು ಮಾಡುತ್ತಿದ್ದು, ಅಗತ್ಯ ಮನಗಂಡು ನೀರು ನೀಡಿ ಸಮಸ್ಯೆ ಪರಿಹಾರ ಮಾಡುವುದಾಗಿ ಹೇಳುತ್ತದೆ. ಆದರೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.

ನದಿ ನೀರನ್ನು ಉಪಯೋಗಿಸಲು ಯೋಜನೆ ರೂಪಿಸಿ
ಬಿಜೂರು ಗ್ರಾಮದ ಪೂರ್ವ ದಿಕ್ಕಿನಲ್ಲಿ ಸುಮನಾವತಿ ನದಿ ಹರಿಯುತ್ತದೆ. ನದಿಯ ನೀರು ಹರಿದು ಸಮುದ್ರ ಸೇರಿ ವ್ಯರ್ಥವಾಗುತ್ತದೆ. ಈಗ ಇಲ್ಲಿ ಕೃಷಿಗೆ ಸಹಾಯಕವಾಗಲೆಂದು ಸ್ವಯಂ ಚಾಲಿತ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿಸ್ತರಿತ ಯೋಜನೆ ರೂಪಿಸಿ ನೀರನ್ನು ಸಂಸ್ಕರಿಸಿ ಸಾರ್ವಜನಿಕರಿಗೆ ನೀಡುವ ಯೋಜನೆ ರೂಪಿಸಿದರೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ಸಾಧ್ಯವಿದೆ.

Advertisement

ಜನರ ಬೇಡಿಕೆಗಳು
– ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ
– ಸಮಯಕ್ಕೆ ಸರಿಯಾಗಿ ಟ್ಯಾಂಕರ್‌ ನೀರು ಬರಲಿ
– ಅಗತ್ಯ ಇರುವಷ್ಟು ನೀರು ನೀಡಬೇಕು
– ಅಂತರ್ಜಲ ಕುಸಿತ ತಡೆಗೆ ಕ್ರಮ ಅಗತ್ಯ

ಅವಶ್ಯ ಇರುವಷ್ಟು ಕೊಡಲಿ
ಎರಡು ದಿನಗಳಿಗೆ ಒಮ್ಮೆ ನೀರು ಕೊಡುತ್ತಾರೆ. ಅದು ಎಷ್ಟು ಹೊತ್ತಿಗೆ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಸಿಕ್ಕಿದಷ್ಟು ನೀರಿನಲ್ಲೇ ಎರಡು ದಿನ ಕಳೆಯಬೇಕು. ಅವಶ ಇರುವಷ್ಟು ಆದರೂ ನೀರು ನೀಡಲು ಗ್ರಾಮ ಪಂಚಾಯತ್‌ ಮುಂದಾಗಬೇಕು.
– ಕೇಶವ ಬಿಜೂರು, ಸ್ಥಳೀಯರು

ಟ್ಯಾಂಕರ್‌ ಮೂಲಕ ನೀರು
ಬಿಜೂರು ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತಗೊಂಡಿದೆ. ಬಾವಿಗಳಲ್ಲಿ ನೀರು ಬತ್ತಿ ಹೋಗಿದೆ. ನಮಗೂ ಟ್ಯಾಂಕರ್‌ ನೀರು ನೀಡಬೇಕು ಎನ್ನುವ ಮನವಿಗಳು ಬರುತ್ತಿವೆ. ಟ್ಯಾಂಕರ್‌ ಮೂಲಕ ನೀರು ನೀಡಲು ಕ್ರಮ ಕೈಗೊಂಡಿದ್ದೇವೆ.
-ಮಾಧವ ದೇವಾಡಿಗ, ಕಾರ್ಯದರ್ಶಿ ಪಂಚಾಯತ್‌

ನೀರಿನ ಉಪಯೋಗವಾಗಲಿ
ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯತ್‌ ವತಿಯಿಂದ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾವಿ ನಿರ್ಮಿಸಲಾಗಿದೆ. ಸುಮಾರು. 2.5 ಸಾವಿರ ಮೀಟರ್‌ ಪೈಪ್‌ಲೈನ್‌ ಕೂಡ ಮಾಡಲಾಗಿದ್ದರು ಸಹ ನೀರಿನ ಸಮಸ್ಯೆಗೆ ಮುಕ್ತಿ ದೊರಕಿಲ್ಲ. ಜಿಲ್ಲಾ ಪಂಚಾಯತ್‌ ಅನುದಾನದಲ್ಲಿ ನಿರ್ಮಿಸಿರುವ ಕಟ್ಟೆಮನೆ ದಾಸೋಡಿಮನೆ ಬಳಿಯ ಬಾವಿಯಲ್ಲಿ ನೀರಿದ್ದರೂ ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸದಿರುವುದು ಸ್ಥಳೀಯಾಡಳಿತದ ನಿರ್ಲಕ್ಷ್ಯ ತೋರಿಸುತ್ತದೆ.

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next