Advertisement

ಮೈತ್ರಿ ಸರ್ಕಾರದಿಂದ ರೈತರ ಸಾಲ ಮನ್ನಾ ಇಲ್ಲ

01:15 PM Jul 08, 2019 | Suhan S |

ಮಾಗಡಿ: ಮೈತ್ರಿ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದು, ಎಲ್ಲರಿಗೂ ಋಣ ಮುಕ್ತ ಪತ್ರ ನೀಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ತಾಲೂಕಿನ ಒಬ್ಬ ರೈತರಿಗೂ ಋಣಮುಕ್ತ ಪತ್ರ ನೀಡಿದಿದ್ದರಿಂದ ಬ್ಯಾಂಕ್‌ಗಳು ನೋಟಿಸ್‌ ಮೇಲೆ ನೋಟಿಸ್‌ ಜಾರಿ ಮಾಡುತ್ತಿವೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಗೋವಿಂದರಾಜು ದೂರಿದರು.

Advertisement

ಪಟ್ಟಣದ ತಿರುಮಲೆ ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸ್ಪಷ್ಟಪಡಿಸಿ: ಸುಮ್ಮನೆ ರೈತರನ್ನು ದಾರಿತಪ್ಪಿಸುತ್ತಿರುವ ಮೈತ್ರಿ ಸರ್ಕಾರ ಯಾರಿಗೆ ಋಣ ಮುಕ್ತ ಪತ್ರ ನೀಡಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಆಗ್ರಹಿಸಿದರು.

ನೀರಾವರಿ ಯೋಜನೆ ಅನುಷ್ಠಾನವಿಲ್ಲ: ಇನ್ನೊಂದು ವರ್ಷದೊಳಗೆ ಮಾಗಡಿ ತಾಲೂಕಿನ 86 ಕೆರೆಗಳಿಗೆ ಶ್ರೀರಂಗ ಏತ ನೀರಾವತಿ ಯೋಜನೆ ಅನುಷ್ಠಾನಗೊಳಿ ಸಲು ಅನುದಾನ ಬಿಡುಗಡೆ ಮಾಡಿದ್ದಾಗಿ ಕೆಂಪೇಗೌಡ ಕೋಟೆ ಮೈದಾನ ದಲ್ಲಿ ತಿಳಿಸಿದ ಅಂದಿನ ಸಿಎಂ ಸಿದ್ದರಾಮಯ್ಯ ಅವರು, 2 ವರ್ಷಗಳು ಕಳೆದರೂ ಹನಿ ನೀರು ಮಾಗಡಿ ಕೆರೆಗಳಿಗೆ ಹರಿದಿಲ್ಲ. ಕನಿಷ್ಟ ನೀರಿನ ಪೈಪ್‌ ಅಳವಡಿಸಲು ರೈತರ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ರೈತರ ಮರ ಗಿಡಗಳಿಗೆ ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ಸಂಬಂಧಪಟ್ಟ ಎಂಜಿನಿಯರ್‌ ಬಳಿ ಎಡತಾಕಿದರೂ ಪ್ರಯೋಜನವಾಗಿಲ್ಲ. ಕಾಮಗಾರಿಯೂ ಸ್ಥಗಿತಗೊಂಡಿದೆ. ಇತ್ತ ನೀರು ಇಲ್ಲ, ರೈತರಿಗೆ ಪರಿಹಾರವೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಬಗ್ಗೆ ಕಾಳಜಿ ಇಲ್ಲ:ಮಳೆ ಬೀಳದೆ ಬರಗಾಲಕ್ಕೆ ತುತ್ತಾಗಿದ್ದೇವೆ. ನೀರಾವರಿ ಯೋಜನೆ ತಂದೇ ತರುತ್ತೇನೆ ಎಂದು ಎ.ಮಂಜು ಮತ ಹಾಕಿಸಿಕೊಂಡು ಶಾಸಕರಾದರು. ಈಗ ಅವರದ್ದೇ ಸರ್ಕಾರ, ಜಿಲ್ಲೆಯವರೇ ಸಿಎಂ. ಆದರೂ ಕಾಳಜಿ ವಹಿಸುತ್ತಿಲ್ಲ. ಕೊಟ್ಟ ಮಾತಿನಂತೆ ವರ್ಷದಲ್ಲಿ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸದಿದ್ದರೆ ಚುನಾವಣೆ ವೇಳೆ ರೈತರೇ ನಿಮ್ಮ ಬುಡಕ್ಕೆ ನೀರುಬಿಡುತ್ತಾರೆ ಎಂದು ಆಗಿನ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಹೇಳಿದ್ದರು. ಈಗ ರೈತರು ನೀರು ಬಿಡುವ ಕಾಲ ಸಮೀಪಿಸಿದೆ. ಇನ್ನಾದರೂ ರಾಜಕಾರಣಿಗಳು ಮುಗ್ದ ರೈತರಿಗೆ ಮಾತಿನ ಮೋಡಿ ಮಾಡಿ ದಿಕ್ಕುತಪ್ಪಿಸುವ ಕೆಲಸ ಬಿಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next