Advertisement

ತ್ಯಾಜ್ಯ ವಿಂಗಡಣೆಯಲ್ಲಿ ವಿನಾಯ್ತಿಯಿಲ್ಲ

04:15 AM Feb 07, 2019 | Team Udayavani |

ಬೆಂಗಳೂರು: ಸಮರ್ಪಕ ತ್ಯಾಜ್ಯ ವಿಲೇವಾರಿಗೆ ವಾರ್ಡ್‌ವಾರು ಆಹ್ವಾನಿಸಿದ ಟೆಂಡರ್‌ನಲ್ಲಿರುವ ಕೆಲ ಅಂಶಗಳನ್ನು ಬದಲಿಸಲು ನಿರ್ಧರಿಸಿದ್ದು, ತ್ಯಾಜ್ಯ ವಿಂಗಡಣೆ ವಿಚಾರದಲ್ಲಿ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದರು.

Advertisement

ವಾರ್ಡ್‌ವಾರು ತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿರುವ ಅಂಶಗಳ ಕುರಿತು ಸಲಹೆ ನೀಡಲು ಪಾಲಿಕೆ ನೇಮಿಸಿರುವ ಸಮಿತಿಯೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಸಮರ್ಪಕವಾಗಿ ತ್ಯಾಜ್ಯ ವಿಂಗಡಣೆಯಾಗದ ಹೊರತು ನಗರದಲ್ಲಿನ ತ್ಯಾಜ್ಯ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹೀಗಾಗಿ ತ್ಯಾಜ್ಯ ವಿಂಗಡಣೆ ವಿಚಾರದಲ್ಲಿ ವಿನಾಯಿತಿ ನೀಡುವುದಿಲ್ಲ ಎಂದರು.

ಟೆಂಡರ್‌ ಅವಧಿ ಕೇವಲ ಒಂದು ವರ್ಷ ಮಾತ್ರವಿರುವ ಕಾರಣ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದು, ಮೂರು ವರ್ಷಗಳಿಗೆ ಒಂದು ಬಾರಿ ಟೆಂಡರ್‌ ಕರೆಯಬೇಕೆಂಬ ಮನವಿ ಕೇಳಿಬಂದಿದೆ. ಆದರೆ, ಹೈಕೋರ್ಟ್‌ ಆದೇಶದಂತೆ ಮೂರು ವರ್ಷಗಳಿಗೆ ಟೆಂಡರ್‌ ಆಹ್ವಾನಿಸುವಂತಿಲ್ಲ. ಹೀಗಾಗಿ ಒಂದು ವರ್ಷದ ಅವಧಿಯ ಬಳಿಕ ಎರಡು ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪಾಲಿಕೆಯಿಂದ ಹಸಿ ಹಾಗೂ ಸ್ಯಾನಿಟರಿ ತ್ಯಾಜ್ಯ ವಿಲೇವಾರಿಗೆ ಮಾತ್ರ ಟೆಂಡರ್‌ ಆಹ್ವಾನಿಸಿದೆ. ಒಣ ತ್ಯಾಜ್ಯವನ್ನು ಸ್ವಯಂ ಸೇವಕ ಸಂಘಗಳು, ಎನ್‌ಜಿಒಗಳು ಹಾಗೂ ಚಿಂದಿ ಆಯುವವರಿಗೆ ನೀಡಲಾಗುತ್ತದೆ. ಜತೆಗೆ ಅವರ ಅನುಕೂಲಕ್ಕಾಗಿ ಪ್ರತಿ ವಾರ್ಡ್‌ಗೆ ಮೂರು ಆಟೋ ಟಿಪ್ಪರ್‌ಗಳನ್ನು ಪಾಲಿಕೆಯಿಂದಲೇ ಖರೀದಿಸಿ ಕೊಡಲಾಗುವುದು ಎಂದು ಮಾಹಿತಿ ನೀಡಿದರು.

ತ್ಯಾಜ್ಯ ವಿಲೇವಾರಿಗೆ ಹೊಸ ವಾಹನಗಳ ಬಳಸುವ ನಿಯಮ ಸಡಿಲಿಸಬೇಕೆಂದು ಸಮಿತಿ ಕೋರಿದ್ದು, ಅದರಂತೆ ಸಾರಿಗೆ ಇಲಾಖೆಯ ಅಧಿಕಾರಿಗಳ ಮೂಲಕ ಪರಿಶೀಲಿಸಿ ವಾಹನಗಳು ಉತ್ತಮವಾಗಿದ್ದರೆ ನಾಲ್ಕು ವರ್ಷದೊಳಗಿನ ವಾಹನಗಳನ್ನು ವಿಲೇವಾರಿಗೆ ಬಳಸಲು ಅವಕಾಶ ನೀಡಲಾಗುವುದು. ಟೆಂಡರ್‌ ಸಲ್ಲಿಸುವ ಕೊನೆಯ ದಿನಾಂಕವನ್ನು 15 ದಿನಗಳು ವಿಸ್ತರಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

Advertisement

ಟೆಂಡರ್‌ ಪ್ರಕ್ರಿಯೆಯಲ್ಲಿ ಹೊಸಬರು ಭಾಗವಹಿಸಬೇಕೆಂಬ ಉದ್ದೇಶದಿಂದ ಒಂದು ವರ್ಷಕ್ಕೆ ಟೆಂಡರ್‌ ಆಹ್ವಾನಿಸಿದ್ದು, ಒಬ್ಬರು ಗುತ್ತಿಗೆದಾರರಿಗೆ ಕೇವಲ ಒಂದು 5 ವಾರ್ಡ್‌ಗಳನ್ನು ನೀಡಲಾಗುತ್ತದೆ. ಸದಸ್ಯರು ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಬೇಕೆಂದು ಕೋರಿದರೂ, ಹೈಕೋರ್ಟ್‌ ಆದೇಶದಂತೆ ಒಬ್ಬ ಗುತ್ತಿಗೆದಾರರಿಗೆ ಐದು ವಾರ್ಡ್‌ಗಳನ್ನು ಮಾತ್ರ ನೀಡಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಪಾಲಿಕೆಯಿಂದ 750 ಮನೆಗಳಿಗೆ ಒಂದು ಆಟೋ ಟಿಪ್ಪರ್‌ ನಿಯೋಜಿಸಿರುವ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದು, ಈ ಬಗ್ಗೆ ಮರು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜತೆಗೆ ಪಾಲಿಕೆಯ ವೈದ್ಯಾಧಿಕಾರಿಗಳನ್ನು ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷ ನಾಯಕ ಅಬ್ದುಲ್‌ ವಾಜೀದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

ಬಿಲ್‌ ಪಾವತಿಗೆ ಪ್ರತ್ಯೇಕ ಖಾತೆ
ತ್ಯಾಜ್ಯ ಗುತ್ತಿಗೆದಾರರಿಗೆ ಪ್ರತಿಯೊಂದು ಬಿಲ್‌ ಪಾವತಿಸಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲು ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ ಬರುವ ಹಾಗೂ ಪಾಲಿಕೆಯಿಂದ ಮೀಸಲಿಟ್ಟರುವ ಅನುದಾನ ನೇರವಾಗಿ ಖಾತೆಗೆ ಹೋಗಲಿದ್ದು, ಜಿಪಿಎಸ್‌ ಹಾಗೂ ಆರ್‌ಐಎಫ್ಡಿಗಳನ್ನು ಪರಿಶೀಲಿಸಿ ಪ್ರತಿ ತಿಂಗಳು ಬಿಲ್‌ ಪಾವತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.

ಸಗಟು ಉತ್ಪಾದಕರ ಪರಿಶೀಲನೆ
ನಗರದಲ್ಲಿ 50 ಯೂನಿಟ್‌ಗಳಿಗಿಂತ ಹೆಚ್ಚಿರುವ ಅಪಾರ್ಟ್‌ಮೆಂಟ್ ಹಾಗೂ 10 ಕಿಲೋ ಗ್ರಾಂಗಿಂತಲೂ ಹೆಚ್ಚಿನ ತ್ಯಾಜ್ಯ ಉತ್ಪಾದನೆ ಮಾಡುವಂತಹ ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸಲು ಕೆಲವೊಂದು ಏಜೆನ್ಸಿಗಳನ್ನು ಗುರುತಿಸಲಾಗಿದೆ. ಆದರೆ, ಏಜೆನ್ಸಿಗಳು ಅಪಾರ್ಟ್‌ಮೆಂಟ್ ಹಾಗೂ ಮಳಿಗೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಪಾಲಿಕೆಯ ಸಂಸ್ಕರಣಾ ಘಟಕಗಳು ಹಾಗೂ ಕ್ವಾರಿಗಳಿಗೆ ನೀಡುತ್ತಿದ್ದಾರೆಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಗುರುತಿಸಿರುವ ಏಜೆನ್ಸಿಗಳನ್ನು ಪರಿಶೀಲಿಸಲಾಗುವುದು ಎಂದರು.

ರಸ್ತೆ ಗುಡಿಸಲು 100 ಯಂತ್ರಗಳು
ಪಾಲಿಕೆಯ ವ್ಯಾಪ್ತಿಯಲ್ಲಿ ಸದ್ಯ 9 ಯಾಂತ್ರಿಕೃತ ಕಸ ಗುಡಿಸುವ ಯಂತ್ರಗಳಿದ್ದು, ಪಾಲಿಕೆಯಿಂದ 17 ಹಾಗೂ ಗುತ್ತಿಗೆದಾರರ ಮೂಲಕ 17 ಯಂತ್ರಗಳ ಸೇವೆ ಪಡೆಯಲು ನಿರ್ಧರಿಸಲಾಗಿದೆ. ಆದರೆ, ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನಗರದ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಕನಿಷ್ಠ 100 ಯಂತ್ರಗಳ ಅಗತ್ಯವಿದೆ ಎಂದು ಆಯುಕ್ತರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ 1000 ಆಟೋ
ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದಲೇ ಒಂದು ಸಾವಿರ ಆಟೋ ಟಿಪ್ಪರ್‌ಗಳು ದೊರೆಯಲಿವೆ. ಆದರೆ, ಆಟೋ ನಿರ್ವಹಣೆಯನ್ನು ಗುತ್ತಿಗೆದಾರರೇ ನೋಡಿಕೊಳ್ಳಬೇಕಾಗುತ್ತದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next