Advertisement

ಜಿಲ್ಲಾಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚುಮದ್ದೇ ಇಲ್ಲ!

05:06 PM Dec 12, 2019 | Suhan S |

ಮಂಡ್ಯ: ಹಲವಾರು ದಿನಗಳಿಂದ ನಾಯಿ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದೇ ಸಿಗುತ್ತಿಲ್ಲ. ನಾಯಿ ಕಡಿತಕ್ಕೊಳಗಾದವರು ಖಾಸಗಿ ಔಷಧ ಅಂಗಡಿಗಳಿಗೆ ಮೊರೆ ಹೋಗಿದ್ದು, ದುಬಾರಿ ಬೆಲೆ ಕೊಟ್ಟು ಚುಚ್ಚುಮದ್ದು ಖರೀದಿಸುವಂತಾಗಿದೆ.

Advertisement

ರೇಬಿಸ್‌ ಚುಚ್ಚುಮದ್ದಿನ ಅಭಾವವನ್ನು ಅರಿತ ಖಾಸಗಿಯವರು ದುಪ್ಪಟ್ಟು ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ನಾಯಿ ಕಡಿತಕ್ಕೊಳಗಾಗಿ ನಿತ್ಯವೂ ಕನಿಷ್ಠ 50 ರಿಂದ 60 ಜನರು ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ಬರುತ್ತಿದ್ದಾರೆ. ನೋವಿನಿಂದ ನರಳುತ್ತಿರುವವರಿಗೆ ಸಕಾಲದಲ್ಲಿ ಚುಚ್ಚುಮದ್ದು ಸಿಗದಿರುವುದು ಅವರ ಬಾಧೆಯನ್ನು ಹೆಚ್ಚಿಸಿದೆ. ಖಾಸಗಿಯಾಗಿ ಅಧಿಕ ಬೆಲೆ ಕೊಟ್ಟು ಚುಚ್ಚುಮದ್ದು ಖರೀದಿಸುವ ಸಂಕಷ್ಟ ಸ್ಥಿತಿಗೆ ಸಿಲುಕಿದ್ದಾರೆ.

ರಾಜ್ಯದಲ್ಲೇ ಅಭಾವ: ಇಡೀ ರಾಜ್ಯದಲ್ಲೇ ರೇಬಿಸ್‌ ಚುಚ್ಚುಮದ್ದಿಗೆ ಕೊರತೆ ಎದುರಾಗಿದ್ದು, ಔಷಧ ಪೂರೈಸುವ ವೇರ್‌ಹೌಸ್‌ನಲ್ಲೇ ದಾಸ್ತಾನು ಇಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದು ನಾಯಿ ಕಡಿತಕ್ಕೆ ಒಳಗಾದವರ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸೋಂಕು ತಡೆಗೆ: ನಾಯಿ ಕಡಿತಕ್ಕೆ ಒಳಗಾಗುತ್ತಿರುವವರಲ್ಲೇ ಗ್ರಾಮೀಣ ಪ್ರದೇಶದ ಜನರೇ ಶೇ.60ರಷ್ಟು ಇದ್ದಾರೆ. ನಾಯಿಗಳಿಂದ ಪರಚಿದ ಇಲ್ಲವೇ ಸಣ್ಣ ಪ್ರಮಾಣದಲ್ಲಿ ಕಚ್ಚಿದ ಪ್ರಕರಣಗಳಿಗೆ ರೇಬಿಸ್‌ ವ್ಯಾಕ್ಸಿನ್‌ ಚುಚ್ಚುಮದ್ದು ನೀಡಲಾಗುತ್ತದೆ. ಗಂಭೀರ ಸ್ವರೂಪದ ಗಾಯಗಳಾಗಿದ್ದಾಗ ಮಾತ್ರ ರೇಬಿಸ್‌ ಮೇಧಸ್‌ ಎಂಬ ಚುಚ್ಚುಮದ್ದು ನೀಡಲಾಗುತ್ತದೆ. ರೇಬಿಸ್‌ ಮೇಧಸ್‌ ಎನ್ನುವುದು ನಾಯಿ ಕಡಿತದ ಸೋಂಕು ನರಗಳಿಗೆ ಹರಡದಂತೆ ತಡೆಯುವುದಕ್ಕಾಗಿ ನೀಡುವ ಚುಚ್ಚುಮದ್ದಾಗಿದೆ.

ಪ್ರತಿಕ್ರಿಯೆ ಬಂದಿಲ್ಲ: ರೇಬಿಸ್‌ ವ್ಯಾಕ್ಸಿನ್‌ ಹಾಗೂ ರೇಬಿಸ್‌ ಮೇಧಸ್‌ ಚುಚ್ಚುಮದ್ದು ಕೊರತೆಯಾಗಿರುವ ವಿಷಯವನ್ನು ವೈದ್ಯಕೀಯ ಇಲಾಖೆಯವರ ಗಮನಕ್ಕೆ ತರಲಾಗಿದೆ. ಆದರೆ, ಇದುವರೆಗೂ ಆವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಔಷಧ ಉತ್ಪಾದನೆ ಹಾಗೂ ಸರಬರಾಜು ಮಾಡುವವರ ನಡುವೆ ಉಂಟಾಗಿರುವ ಸಂಪರ್ಕ ಕೊರತೆಯಿಂದ ರೇಬಿಸ್‌ ಚುಚ್ಚುಮದ್ದಿಗೆ ಅಭಾವ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಔಷಧ ತಯಾರಿಕಾ ಕಂಪನಿಗಳು ಹೆಚ್ಚು ಬೆಲೆ ನೀಡುವವರಿಗೆ ಮಾತ್ರ ವ್ಯಾಕ್ಸಿನ್‌ಗಳನ್ನು ಪೂರೈಕೆ ಮಾಡುತ್ತಿದ್ದು, ಟೆಂಡರ್‌ ಹಾಕುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಖಾಸಗಿಯವರಿಂದ ಔಷಧ ದುಪ್ಪಟ್ಟುದರಕ್ಕೆ ಮಾರಾಟ ;  ನಾಯಿ ಕಡಿತಕ್ಕೊಳಗಾದವರಿಗೆ ಆಸ್ಪತ್ರೆ ವೈದ್ಯರು ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ಔಷಧ ಅಂಗಡಿಯವರು ರೇಬಿಸ್‌ ವ್ಯಾಕ್ಸಿನ್‌ಗೆ ಕನಿಷ್ಠ 350 ರೂ. ಹಾಗೂ ರೇಬಿಸ್‌ ಮೇಧಸ್‌ಗೆ 1000 ರೂ.ವರೆಗೂ ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ.

ಬೇಡಿಕೆ ಸೃಷ್ಟಿ: ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ಔಷಧ ಸಿಗದಿರುವುದು ಹಾಗೂ ನಾಯಿ ಕಡಿತಕ್ಕೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಔಷಧಕ್ಕೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಖಾಸಗಿಯವರು ಔಷಧವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಾ ಜನರಿಂದ ಹಣ ಲೂಟಿ ಮಾಡುತ್ತಿದ್ದಾರೆ.

ಸಮರ್ಪಕ ಮಾಹಿತಿಯೂ ಇಲ್ಲ: ನಾಯಿ ಕಡಿತದ ಬಾಧೆ ಹಾಗೂ ಮುಂದಾಗುವ ಅಪಾಯದಿಂದ ಪಾರಾಗುವ ಸಲುವಾಗಿ ಜನರು ಹೆಚ್ಚಿನ ಹಣ ನೀಡಿಯಾದರೂ ಔಷಧ ಖರೀದಿಸಿ ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿದ್ದಾರೆ. ಎಷ್ಟು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ ಎನ್ನುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಮಾಹಿತಿ ಕೊರತೆ: ಸರ್ಕಾರಿ ಆಸ್ಪತ್ರೆಗಳಿಗೆ ನಾಯಿ ಕಡಿತದ ಚುಚ್ಚು ಮದ್ದು ಯಾವಾಗ ಪೂರೈಕೆಯಾಗಲಿದೆ ಎನ್ನುವುದು ಆಸ್ಪತ್ರೆ ವೈದ್ಯಾಧಿ ಕಾರಿಗಳಿಗೇ ಗೊತ್ತಿಲ್ಲವೆಂತೆ. ಆರೋಗ್ಯ ಇಲಾಖೆಯಿಂದಲೂ ಸಮರ್ಪಕ ಮಾಹಿತಿ ದೊರಕುತ್ತಿಲ್ಲ. ಇದರ ನಡುವೆ ನಾಯಿ ಕಡಿತಕ್ಕೆ ಒಳಗಾದವರ ಪರಿಸ್ಥಿತಿ ಹೇಳತೀರದಾಗಿದೆ.

 

-ಮಂಡ್ಯ ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next