Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸದನ ನಾಯಕರ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಆಯೋಗದ ವರದಿ ಬರುವವರೆಗೆ ಜಿಲ್ಲಾ, ತಾಲೂಕು ಪಂಚಾಯತ್ ಮತ್ತು ಬಿಬಿಎಂಪಿ ಚುನಾವಣೆ ನಡೆಸದಿರಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
Related Articles
Advertisement
ಪತ್ರ ಬರೆಯಲಾಗಿತ್ತು:
ಗ್ರಾ.ಪಂ. ಚುನಾವಣೆ ಮುಗಿಯುತ್ತಿದ್ದಂತೆ ತಾಲೂಕು ಮತ್ತು ಜಿ.ಪಂ. ಚುನಾವಣೆ ನಡೆಸಲು ನಾವು ಸಿದ್ಧ ಎಂದು ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದೆವು. ಆಯೋಗ ಮಾಡಿದ್ದ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿ ಹಂಚಿಕೆಯಲ್ಲಿ ತಪ್ಪುಗಳಾಗಿವೆ ಎಂದು 2,600ಕ್ಕೂ ಹೆಚ್ಚು ಆಕ್ಷೇಪಗಳು ಬಂದಿದ್ದವು. ಆಯೋಗ ಅವುಗಳನ್ನು ಪರಿಗಣಿಸದೆ ಚುನಾವಣೆ ನಡೆಸಲು ಮುಂದಾಗಿತ್ತು. ಹೀಗಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಲಾಗಿತ್ತು. ಅದರ ಮಾಹಿತಿ ಪಡೆದು ವರದಿ ಕೊಡುವ ಸಮಯದಲ್ಲಿ ಒಬಿಸಿ ಮೀಸಲಾತಿ ಖಚಿತ ಪಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು. ಹೀಗಾಗಿ ಆಯೋಗ ರಚನೆ ತೀರ್ಮಾನ ಮಾಡಲಾಗಿದೆ. ಆದಷ್ಟು ಶೀಘ್ರ ಆಯೋಗ ರಚಿಸಿ ರಾಜಕೀಯ ಮೀಸಲಾತಿ ಬಗ್ಗೆ ಅಭಿಪ್ರಾಯ ಪಡೆದು ಚುನಾವಣೆ ನಡೆಸಲಾಗುವುದು ಎಂದರು. ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶಂಪೂರ್, ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್ ಇದ್ದರು.
ಸಿದ್ದರಾಮಯ್ಯ ಸಹಮತ :
ಮೀಸಲು ಸೌಲಭ್ಯ ಕಲ್ಪಿಸದೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಹಿಂ. ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂ. ವರ್ಗಗಳಿಗೆ ಮೀಸಲು ಸೌಲಭ್ಯ ಒದಗಿಸುವ ಮುನ್ನ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ಹಿಂದಿನ ಆಯೋಗದ ವರದಿಯನ್ನು ಪರಿಗಣಿಸುವ ಸಾಧ್ಯತೆ ಕುರಿತಾಗಿಯೂ ಪರಿಶೀಲನೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮತ್ತೂಂದು ಆಯೋಗ ರಚಿಸಿ ಸಮೀಕ್ಷೆ ನಡೆಸುವುದು ಸೂಕ್ತ. ಅಲ್ಲಿಯ ವರೆಗೆ ಚುನಾವಣೆ ನಡೆಸಬಾರದು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಆಗುತ್ತದೆ. ಹಿಂದುಳಿದ ವರ್ಗದವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿ ಚುನಾವಣೆ ನಡೆಸಬಾರದು ಎಂದರು.
ಒಬಿಸಿಗೆ ಮೀಸಲಾತಿ ಕಲ್ಪಿಸಲು ವರದಿ ನೀಡಲು ಆಯೋಗ ರಚನೆಗೆ ನಿರ್ಧರಿಸಲಾಗಿದೆ. ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ವರದಿ ಪಡೆದು ಕಾನೂನು ಮಿತಿಯೊಳಗೆ ಕ್ರಮ ಕೈಗೊಳ್ಳಲಾಗುವುದು.– ಜೆ.ಸಿ. ಮಾಧುಸ್ವಾಮಿ, ಕಾನೂನು ಸಚಿವ
ಯಾವುದೇ ಕಾರಣಕ್ಕೂ ಒಬಿಸಿಗೆ ಅನ್ಯಾಯವಾಗಬಾರದು. ಸರಕಾರ ಆಯೋಗ ರಚನೆ ಮಾಡಲು ನಮ್ಮ ಸಹಮತವಿದೆ. ಸರಕಾರ ಹಿಂದುಳಿದ ವರ್ಗಗಳ ಹಿತ ಕಾಪಾಡಬೇಕು. ಒಬಿಸಿ ಮೀಸಲಾತಿ ನೀಡದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬಾರದು.-ಬಂಡೆಪ್ಪ ಕಾಶಂಪೂರ್, ವಿಧಾನಸಭೆಯ ಜೆಡಿಎಸ್ ಉಪ ನಾಯಕ