Advertisement

4 ವರ್ಷಗಳಿಂದ ಪುಟಾಣಿಗಳಿಗೆ ಬಯಲಲ್ಲೇ ಶೌಚ ಮಾಡುವ ಗತಿ …!

12:26 AM Nov 21, 2019 | Team Udayavani |

ಮಲ್ಪೆ: ವಡಭಾಂಡೇಶ್ವರ ವಾರ್ಡ್‌ನ ತೊಟ್ಟಂ ಮಂಜುನಾಥೇಶ್ವರ ಭಜನ ಮಂದಿರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶೌಚಾಲಯ ಇಲ್ಲದೆ ಇಲ್ಲಿನ ಪುಟಾಣಿಗಳು ಬಯಲನ್ನೇ ಶೌಚಗೃಹವಾಗಿ ಬಳಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳಿಗೆ ಈ ವಿಚಾರ ಗೋಚರಿಸದಿರುವುದು ಅಚ್ಚರಿ ಮೂಡಿಸಿದೆ.

Advertisement

ಉಡುಪಿ ನಗರಸಭೆ 2005-06ನೇ ಸಾಲಿನ ಶೇಕಡಾ 18ರ ನಿಧಿಯಿಂದ ಅಂಗನವಾಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು 2009ರಿಂದ ಶಾಲೆ ಆರಂಭವಾಗಿತ್ತು.
ಕಳೆದ ನಾಲ್ಕು ವರ್ಷದ ಹಿಂದೆ ಶೌಚಗೃಹದ ಕಟ್ಟಡ ಗಾಳಿ ಮಳೆಗೆ ಮಾಡಿನ ಶೀಟು ಸಂಪೂರ್ಣ ಒಡೆದು ಹೋಗಿದೆ. ಬಾಗಿಲೂ ಕೂಡ ಮುರಿದು ಬಿದ್ದಿದ್ದು, ಒಳಗಿರುವ ವಸ್ತುಗಳೆಲ್ಲ ಒಡೆದು ಪುಡಿಯಾಗಿದೆ. ಈ ಬಗ್ಗೆ ದುರಸ್ತಿಗಾಗಿ ಇಲ್ಲಿನ ಶಿಕ್ಷಿಕಿ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಹಾಗಾಗಿ ನಾಲ್ಕು ವರ್ಷಗಳಿಂದ ಶೌಚಗೃಹ ಇಲ್ಲದೆ ಈ ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ.

ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 22 ಮಕ್ಕಳು, ಓರ್ವ ಶಿಕ್ಷಕಿ ಹಾಗೂ ಓರ್ವ ಸಹಾಯಕಿ ಇದ್ದಾರೆ. ಮಕ್ಕಳು ಅಂಗನವಾಡಿ ಕೇಂದ್ರದ ಪಕ್ಕದ ಬಯಲಿನಲ್ಲಿ ಶೌಚ ಮಾಡುತ್ತಾರೆ ಅಕ್ಕ ಪಕ್ಕ ಮನೆಗಳಿವೆಯಾದರೂ, ಪ್ರತಿಸಲವೂ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುವುದು ಸಹಾಯಕಿಯರಿಗೆ ಕಷ್ಟಸಾಧ್ಯ. ಜತೆಗೆ ಮನೆಯವರಿಗೂ ಇದೊಂದು ಸಮಸ್ಯೆಯಾಗಿದ್ದರಿಂದ ಮಕ್ಕಳಿಗೆ ಬಯಲೇ ಗತಿ ಎಂಬಂತಾಗಿದೆ. ಇದು ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕಿ ಹಾಗೂ ಸಹಾಯಕಿಯರಿಗೂ ಸಮಸ್ಯೆಯಾಗುತ್ತಿದೆ,

ಶೀಘ್ರ ಕಾಮಗಾರಿ ಆರಂಭ
ಪ್ರಕೃತಿ ವಿಕೋಪದಡಿ ಅನುದಾನ ಒದಗಿಸಲು ಈಗಾಗಲೇ ಕಾಮಗಾರಿ ಂದಾಜು ಮೊತ್ತ ಮಾಡಿ ಶಾಸಕರಿಗೆ ಕಳುಹಿಸಿಕೊಡಲಾಗಿದೆ. ಆದಷ್ಟು ಶೀಘ್ರದಲ್ಲಿ ಪ್ರಕ್ರಿಯೆಗಳು ಮುಗಿದು ಕಾಮಗಾರಿ ಆರಂಭವಾಗಲಿದೆ.
ರಾಜಶೇಖರ್‌, ಕಿರಿಯ ಅಭಿಯಂತರರು,
ಉಡುಪಿ ನಗರಸಭೆ

ಸ್ಪಂದನೆ ದೊರೆತಿಲ್ಲ
ಕಳೆದ ಒಂದು ವರ್ಷದಿಂದ ಅಂಗನವಾಡಿಯ ಶೌಚಾಲಯ ದುರಸ್ತಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಇದುವರೆಗೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ಹಿಂದಿನ ಎರಡೂ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರ್ಷದ 1.35 ಲಕ್ಷ ರೂ. ಗೆ ಅಂದಾಜು ಮೊತ್ತ ಮಾಡಿ ಹೋಗಿದ್ದರು. ಇನ್ನೂ ಕಾರ್ಯಗತವಾಗಿಲ್ಲ.
-ಯೋಗೀಶ್‌ ಸಾಲ್ಯಾನ್‌, ನಗರಸಭಾ ಸದಸ್ಯರು,
ವಡಭಾಂಡೇಶ್ವರ ವಾರ್ಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next