ಮೈಸೂರು : ಪ್ರಸ್ತುತ ಜನ ತಂತ್ರ ವ್ಯವಸ್ಥೆಯಲ್ಲಿ ಜನರ ನಂಬಿಕೆಗಳು ಕುಸಿಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ಮೈಸೂರು ನಗರದ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಅಂತಹವರನ್ನು ಜೈಲಿಗೆ ಕಳುಹಿಸಬೇಕಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ತೆರಿಗೆ ಪಾವತಿಸುವರು. ಯಾವುದೋ ಒಂದು ವರ್ಗ ಮಾತ್ರ ತೆರಿಗೆ ಪಾವತಿ ಮಾಡುತ್ತಿಲ್ಲ. ಆದ್ದರಿಂದ ಒಂದು ಸಮುದಾಯದ ಮೇಲೆ ವ್ಯಾಪಾರ ನಿರ್ಬಂಧ ಹೇರುವುದು ಸಲ್ಲದು ಎಂದರು.
ಸರಕಾರ ವ್ಯವಸ್ಥೆಯಲ್ಲಿ ಲೋಪ ದೋಷಗಳನ್ನು ಗುರುತಿಸಿ ಸರಿಪಡಿಸುವಂತೆ ನಾನು ಹಲವು ಸಲ ಒತ್ತಾಯಿಸಿದ್ದೇನೆ.ಆದರೆ, ವಿಶ್ವನಾಥ್ ಮಾತಿಗೆ ಬೆಲೆಕೊಡಬೇಕಿಲ್ಲ ಎಂದು ಕಡೆಗಣಿಸುವರು. ನನ್ನ ಹೇಳಿಕೆಗೆ ಉತ್ತರ ಕೊಡುವ ವ್ಯವಧಾನ ಸರಕಾರಕ್ಕೆ ಇಲ್ಲ. ನನ್ನದು ಒಂಟಿ ಧ್ವನಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನರನ್ನು ಗಲಭೆಗೆ ಪ್ರಚೋದಿಸುವವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿಲ್ಲ. ಅವರು ಪ್ರಚೋದನೆ ಕೊಟ್ಟು ಸುರಕ್ಷಿತವಾಗಿ ಇರುವರು. ಗಲಭೆಯಲ್ಲಿ ತೊಡಗುವ ತಳಸಮುದಾಯದ ಅಥವಾ ಬಡ ಕುಟುಂಬದ ಯುವಕರು ಪ್ರಾಣ ಕಳೆದುಕೊಳ್ಳುವವರು. ಈ ಸತ್ಯವನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದರು.
ಗುರುವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಾ, ಸರಕಾರಗಳು ಮಾಡುವ ಕೆಲಸವನ್ನು ಸ್ವಾಮೀಜಿಗಳು ಮಾಡುತ್ತಾರೆ ಎಂದಿದ್ದಾರೆ. ಈ ರೀತಿಯ ಮಾತನ್ನಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿ, ಸ್ವಾಮೀಜಿಗಳು ಕೆಲಸ ಮಾಡುವುದು ಸರಕಾರ ನೀಡಿದ ಅನುದಾನದಿಂದ. ಸರಕಾರಗಳು ಮಠಗಳಿಗೆ ಹಣ ನೀಡುವ ಬದಲು, ಅದನ್ನು ಇತರ ಕಾರ್ಯಗಳಿಗೆ ಮೀಸಲಿಡಬೇಕು ಎಂದರು.