Advertisement

75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್‌ ಇಲ್ಲ

11:05 PM Apr 05, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ 75 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಟಿಕೆಟ್‌ ನೀಡಬಾರದು ಎಂದು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. “ದ ವೀಕ್‌’ ಆಂಗ್ಲ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿಗೆ ಟಿಕೆಟ್‌ ನೀಡದೇ ಇರುವುದರ ಬಗ್ಗೆ ಮಾಧ್ಯಮಗಳು ವಿವಾದ ಎಬ್ಬಿಸುತ್ತಿವೆ. ಆದರೆ 75 ವರ್ಷಕ್ಕಿಂತ ಮೇಲ್ಪಟ್ಟವರ್ಯಾರೂ ಈ ಬಗ್ಗೆ ಆಕ್ಷೇಪಿಸುತ್ತಿಲ್ಲ ಎಂದರು. 25 ವರ್ಷಗಳಿಂದಲೂ ನಾನು ಶಾಸಕನಾಗಿದ್ದೆ. ಎಂದಿಗೂ ಜನರ ಮಧ್ಯೆಯೇ ಇರುವ ರಾಜಕೀಯ ವ್ಯಕ್ತಿ ನಾನು. ನನ್ನ ವಿಧಾನಸಭೆ ಸದಸ್ಯತ್ವ ಮುಕ್ತಾಯವಾದ ನಂತರ ಲೋಕಸಭೆ ಚುನಾವಣೆ ಇರಲಿಲ್ಲ. ಹೀಗಾಗಿ ರಾಜ್ಯಸಭೆಗೆ ಆಯ್ಕೆಯಾದೆ. ಆದರೆ ಜನರಿಂದಲೇ ಆಯ್ಕೆಯಾಗಿ ಸಂಸತ್‌ಗೆ ಹೋಗಬೇಕು ಎಂದು ನಾನು ಬಯಸಿದ್ದೆ. ಇದಕ್ಕೆ ಪಕ್ಷವೂ ಸಮ್ಮತಿಸಿತು ಎಂದು ಶಾ ಹೇಳಿದ್ದಾರೆ.

Advertisement

ಅಲ್ಲದೆ, ಗಾಂಧಿನಗರದಿಂದ ಸ್ಪರ್ಧಿಸುತ್ತಿರುವ ನೀವು ಮುಂದಿನ ಬಾರಿ ಸಚಿವರಾಗುತ್ತೀರಾ ಎಂಬ ಪ್ರಶ್ನೆ ನೇರ ಉತ್ತರ ನೀಡದೆ, “ರಾಜ್ಯಸಭೆ ಸದಸ್ಯನಾಗಿಯೂ ನಾನು ಮಂತ್ರಿಯಾಗಬಹುದಿತ್ತು. ಅಂತಹ ಯಾವುದೇ ನಿರೀಕ್ಷೆ ನನಗೆ ಇಲ್ಲ’ ಎಂದಿದ್ದಾರೆ. ಅಲ್ಲದೆ, ನಾವು ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಏರ್‌ ಸ್ಟ್ರೈಕ್‌ ಮಾಡಿದ್ದು, ಇದರಿಂದ ಜನರಲ್ಲಿ ದೇಶದ ಬಗ್ಗೆ ಹೆಮ್ಮೆ ಮೂಡಿದೆ. ನಮ್ಮ ಸೇನೆಯ ಯೋಧರನ್ನು ಹತ್ಯೆಗೈದರೆ ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಅಮೆರಿಕ, ಇಸ್ರೇಲ್‌ಗೆ ಮಾತ್ರವಲ್ಲ, ಭಾರತಕ್ಕೂ ಸಾಧ್ಯವಿದೆ ಎಂಬುದನ್ನು ನಾವು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇವೆ ಎಂದೂ ಅವರು ಈ ವೇಳೆ ಹೇಳಿದ್ದಾರೆ.

ಅಡ್ವಾಣಿ-ಜೋಶಿ ಭೇಟಿ
ಕೇಂದ್ರ ಮಾಜಿ ಸಚಿವ ಡಾ.ಮುರಳೀ ಮನೋಹರ ಜೋಶಿ ಶುಕ್ರವಾರ ಹೊಸದಿಲ್ಲಿ ಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರನ್ನು ಭೇಟಿಯಾಗಿದ್ದರು. ಗುರುವಾರವಷ್ಟೇ ಅವರು ಐದು ವರ್ಷಗಳ ಬಳಿಕ ಬ್ಲಾಗ್‌ನಲ್ಲಿ ಬಿಜೆಪಿ ರಾಜಕೀಯ ವಿರೋಧಿಗಳನ್ನು ಯಾವತ್ತೂ ರಾಷ್ಟ್ರವಿರೋಧಿಗಳು ಅಥವಾ ವೈರಿಗಳು ಎಂದು ಪರಿಗಣಿಸಿಲ್ಲ ಎಂದು ಬರೆದುಕೊಂಡಿದ್ದರು. ಇಬ್ಬರು ಹಿರಿಯ ನಾಯಕರ ನಡುವೆ ಯಾವ ವಿಚಾರ ಚರ್ಚೆಯಾಗಿದೆ ಎಂಬ ಬಗ್ಗೆ ಯಾರೂ ಸ್ಪಷ್ಟನೆ ನೀಡಿಲ್ಲ. ಅಡ್ವಾಣಿ ಮತ್ತು ಜೋಶಿ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿಲ್ಲ.

ಮಣಿಪುರದಲ್ಲಿ ದಿಗ್ಬಂಧನಕ್ಕೆ ತಡೆ
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಶುಕ್ರವಾರ ಪ್ರಚಾರ ನಡೆಸಿದ್ದಾರೆ. ಇಂಫಾಲದಲ್ಲಿ ಮಾತನಾಡಿದ ಅವರು, ಮಣಿಪುರದಲ್ಲಿ ಉಂಟಾಗುತ್ತಿದ್ದ ಪದೇ ಪದೆ ದಿಗ್ಬಂಧನಗಳು ಈಗ ನಿಂತಿವೆ ಎಂದಿದ್ದಾರೆ. ಎಲ್‌ಒಸಿಯ ಗಡಿದಾಟಿ ಉಗ್ರರ ಶಿಬಿರಗಳನ್ನು ಸದೆಬಡಿಯಲು ಆದೇಶ ನೀಡಿದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ ಎಂದು ಕೊಂಡಾಡಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ನೇತೃತ್ವದ ಸರಕಾರ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ. ಜತೆಗೆ ಶಾಂತಿ-ನೆಮ್ಮದಿ ನೆಲೆಸಲೂ ಆದ್ಯತೆ ನೀಡಿದೆ ಎಂದಿದ್ದಾರೆ. ಅಸ್ಸಾಂನಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರಬೇಕು ಎಂಬ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಒಮರ್‌ ಅಬ್ದುಲ್ಲಾ ಹೇಳಿಕೆ ಬಗ್ಗೆ ರಾಹುಲ್‌ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲ್ಲ: ಸುಮಿತ್ರಾ
ಮುಂದಿನ ವಾರ (ಎ. 12) 76 ವರ್ಷ ಪೂರ್ಣಗೊಳ್ಳಲಿರುವ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂದೋರ್‌ ಕ್ಷೇತ್ರದಿಂದ ಎಂಟು ಬಾರಿ ಆಯ್ಕೆಯಾಗಿರುವ ಅವರು, ಬಿಜೆಪಿ ವರಿಷ್ಠರು ತಮ್ಮ ಸ್ಥಾನದಲ್ಲಿ ಹೊಸಬರಿಗೆ ಅವಕಾಶ ಕೊಡಲು ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. “ಬಿಜೆಪಿ ಇದುವರೆಗೆ ಇಂದೋರ್‌ ಕ್ಷೇತ್ರಕ್ಕಾಗಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಇಂಥ ಗೊಂದಲ ಏಕೆ? ಪಕ್ಷ ಅಭ್ಯರ್ಥಿಯನ್ನು ಪ್ರಕಟಿಸಲು ಹಿಂದೇಟು ಹಾಕುತ್ತಿರಬಹುದು. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಯಾವುದೇ ಸಂಕೋಚ ವಿಲ್ಲದೆ, ಪಕ್ಷದ ವರಿಷ್ಠರು ಹೊಸ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಬಹುದು’ ಎಂದು ಹೇಳಿದ್ದಾರೆ. 1989ರಲ್ಲಿ ಇಂದೋರ್‌ನಿಂದ ಮೊದಲ ಬಾರಿಗೆ ಸ್ಪರ್ಧಿಸಿದಾಗಲೂ ನಾನು ಆಕಾಂಕ್ಷಿಯಾಗಿ ರಲಿಲ್ಲ. ಪಕ್ಷವೇ ನನ್ನನ್ನು ಅಭ್ಯರ್ಥಿಯನ್ನಾಗಿಸಿ, ಗೆಲ್ಲಿಸಿತ್ತು ಎಂದು ಸುಮಿತ್ರಾ ಮಹಾಜನ್‌ ಮಂಗಳವಾರ ಹೇಳಿದ್ದರು. ಬಿಜೆಪಿಯ ಹಿರಿಯ ನಾಯಕರಾಗಿರುವ ಎಲ್‌.ಕೆ.ಅಡ್ವಾಣಿ, ಮುರಳೀ ಮನೋಹರ ಜೋಶಿ, ಶಾಂತಕುಮಾರ್‌ ಸೇರಿದಂತೆ ಹಲವು ಪ್ರಮುಖರಿಗೆ ವಯಸ್ಸಿನ ಕಾರಣದಿಂದ ಸ್ಪರ್ಧೆಗೆ ಅನುವು ಮಾಡಿಕೊಟ್ಟಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next