Advertisement

ತಿಂಗಳಿನಿಂದ ಬೈಂದೂರಿನಲ್ಲಿ ತಹಶೀಲ್ದಾರ್‌ ಇಲ್ಲ!

11:50 AM Jul 24, 2022 | Team Udayavani |

ಕುಂದಾಪುರ/ಬೈಂದೂರು: ಜಿಲ್ಲೆಯಲ್ಲಿ ಆತ್ಯಂತ ಹೆಚ್ಚು ಮಳೆಗೆ ಹಾನಿಯಾದ, ಕಡಲ್ಕೊರೆತಕ್ಕೆ ತುತ್ತಾದ ತಾಲೂಕುಗಳಲ್ಲಿ ಬೈಂದೂರಿಗೆ ಮೊದಲ ಸ್ಥಾನ. ಈ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ, ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ಸಿಗುವಂತೆ ಮಾಡುವ ಮಹತ್ತರ ಹೊಣೆಗಾರಿಕೆ ತಹಶೀಲ್ದಾರ್‌ ಅವರದು. ಆದರೆ ಹೊಸ ತಾಲೂಕಾಗಿರುವ ಬೈಂದೂರಿನ ತಹಶೀಲ್ದಾರ್‌ ಹುದ್ದೆ ತಿಂಗಳಿನಿಂದ ಖಾಲಿಯಿದೆ. ಈಗ ಕುಂದಾಪುರ ತಹಶೀಲ್ದಾರ್‌ ಅವರಿಗೆ ಪ್ರಭಾರ ಹೊಣೆ ವಹಿಸಲಾಗಿದ್ದರೂ ಪೂರ್ಣ ಪ್ರಮಾಣದ ತಹಶೀಲ್ದಾರ್‌ ನೇಮಕವಾಗಿಲ್ಲ.

Advertisement

2021ರ ಮೇಯಲ್ಲಿ ಬೈಂದೂರು ತಹಶೀಲ್ದಾರ್‌ ಆಗಿ ಶೋಭಾಲಕ್ಷ್ಮೀ ಅವರು ಅಧಿಕಾರ ವಹಿಸಿಕೊಂಡಿದ್ದು, ಕಳೆದ ಜೂನ್‌ 24ರಂದು ಅವರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಹಶೀಲ್ದಾರ್‌ ಆಗಿ ವರ್ಗಾವಣೆ ಮಾಡಲಾಗಿದೆ. ಆಗ ಕುಂದಾಪುರ ತಹಶೀಲ್ದಾರ್‌ ಆಗಿರುವ ಕಿರಣ್‌ ಜಿ. ಗೌರಯ್ಯ ಅವರಿಗೆ ಬೈಂದೂರು ತಹಶೀಲ್ದಾರ್‌ ಹುದ್ದೆಯ ನಿರ್ವಹಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿತ್ತು.

98 ಗ್ರಾಮಗಳು...

ಈಗ ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕುಗಳ ತಹಶೀಲ್ದಾರ್‌ ಕೆಲಸವನ್ನು ಕಿರಣ್‌ ಜಿ. ಗೌರಯ್ಯ ಅವರು ನಿರ್ವಹಿಸುತ್ತಿದ್ದು, ಹೆಚ್ಚಿನ ಗ್ರಾಮಗಳು ಇರುವುದರಿಂದ ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಕುಂದಾಪುರ ತಾಲೂಕಿನಲ್ಲಿ 72 ಗ್ರಾಮಗಳು ಹಾಗೂ ಬೈಂದೂರು ತಾಲೂಕಿನಲ್ಲಿ 26 ಗ್ರಾಮಗಳು ಸೇರಿದಂತೆ ಒಟ್ಟು 98 ಗ್ರಾಮಗಳು ಇವರ ವ್ಯಾಪ್ತಿಯಲ್ಲಿವೆ.

ಕಚೇರಿ ಕೆಲಸ ವಿಳಂಬ

Advertisement

ಸರಕಾರಿ ಸೇವೆ ಸಾರ್ವಜನಿಕರಿಗೆ ತ್ವತರಿಗತಿಯಲ್ಲಿ ನೀಡಬೇಕು ಎನ್ನುವ ಉದ್ದೇಶದಿಂದ ತಹಶೀಲ್ದಾರ್‌ ಹುದ್ದೆ ಪ್ರತೀ ತಾಲೂಕಿನಲ್ಲಿ ಮಹತ್ತರ ಹುದ್ದೆಯಾಗಿದೆ. ಆದರೆ ಬೈಂದೂರಲ್ಲಿ ತಹಶೀಲ್ದಾರ್‌ ಹುದ್ದೆ ಖಾಲಿ ಇರುವುದರಿಂದ ಸಾರ್ವಜನಿಕರಿಗೆ ಆಸ್ತಿ ನೋಂದಣಿ, ಆದಾಯ ಸರ್ಟಿಫಿಕೆಟ್‌, ಜಾಗದ ಕನ್ವರ್ಶನ್‌ ಮತ್ತಿತರ ಕೆಲಸ ಕಾರ್ಯಗಳಿಗೆ ವಿಳಂಬವಾಗಿದೆ. ಇನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆಗಳಲ್ಲಿ ಈ ಬಾರಿಯ ಮಳೆಯಿಂದಾಗಿ ನೆರೆಗೆ ತುತ್ತಾಗಿದ್ದು, ಇಲ್ಲಿಗೆ ಪ್ರಾಕೃತಿಕ ವಿಕೋಪದಡಿ ತ್ವರಿತಗತಿಯಲ್ಲಿ ಪರಿಹಾರ ಒದಗಿಸುವ ಕೊಡುವ ನಿಟ್ಟಿನಲ್ಲಿಯೂ ತಹಶೀಲ್ದಾರ್‌ ಹುದ್ದೆ ಖಾಲಿ ಇರುವುದು ತೊಡಕಾಗಿ ಪರಿಣಮಿಸಿದೆ. ಇನ್ನು ಕಡಲ್ಕೊರೆತದಿಂದಾಗಿ ಮರವಂತೆಯಿಂದ ಬೈಂದೂರು, ಶಿರೂರುವರೆಗಿನ ಕರಾವಳಿಯುದ್ದಕ್ಕೂ ಅಪಾರ ಹಾನಿಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸುವ ಕಾರ್ಯವೂ ತಹಶೀಲ್ದಾರ್‌ರದ್ದಾಗಿದೆ.

ಪಟ್ಟಣ ಪಂ. ವ್ಯಾಪ್ತಿಗೂ ತೊಂದರೆ

ಬೈಂದೂರು ಪ.ಪಂ. ರಚನೆಯಾಗಿದ್ದರೂ, ಇನ್ನೂ ಆಡಳಿತ ಮಂಡಳಿ ಇಲ್ಲದಿರುವುದರಿಂದ ಸದ್ಯ ಬೈಂದೂರು ತಹಶೀಲ್ದಾರ್‌ ಅವರೇ ಪ.ಪಂ. ಆಡಳಿತಾಧಿಕಾರಿಯಾಗಿದ್ದಾರೆ. ಪ್ರತಿಯೊಂದು ಅಭಿವೃದ್ಧಿ ಕಾರ್ಯ, ಕಾಮಗಾರಿಗೆ ತಹಶೀಲ್ದಾರ್‌ ಸಹಿ ಅಗತ್ಯವಾಗಿರುತ್ತದೆ. ಆದರೆ ಈಗಿರುವ ತಹಶೀಲ್ದಾರ್‌ ಇಲ್ಲಿನ ಕಚೇರಿಯಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಸಿಗುವುದರಿಂದ ಸಮಸ್ಯೆಯಾಗುತ್ತಿದೆ.

ಶೀಘ್ರ ನೇಮಿಸಿ

ಬೈಂದೂರಲ್ಲಿ ಪೂರ್ಣ ಪ್ರಮಾಣದ ತಹಶೀಲ್ದಾರ್‌ ಇಲ್ಲದೇ ಗ್ರಾಮೀಣ ಭಾಗದಿಂದ ಕಚೇರಿ ಕೆಲಸಕ್ಕೆಂದು ಬರುವ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ 30-40 ಕಿ.ಮೀ. ದೂರದಿಂದ ಬಂದು ತಹಶೀಲ್ದಾರ್‌ ಇಲ್ಲದೆ ವಾಪಾಸು ಹೋಗಬೇಕಾಗಿದೆ. ಆದ್ದರಿಂದ ಆದಷ್ಟು ಬೇಗ ಇಲ್ಲಿಗೆ ಹೊಸ ತಹಶೀಲ್ದಾರ್‌ ನೇಮಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೀಘ್ರ ನೇಮಕ: ಬೈಂದೂರಿಗೆ ಹೊಸ ತಹಶೀಲ್ದಾರ್‌ ನೇಮಕ ಕುರಿತಂತೆ ಈಗಾಗಲೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ನೇಮಕ ಮಾಡಿಕೊಡುವುದಾಗಿ ಹೇಳಿದ್ದಾರೆ. ಇನ್ನೊಮ್ಮೆ ಈ ಬಗ್ಗೆ ಗಮನಹರಿಸಲಾಗುವುದು. – ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next