Advertisement

ದೇವರ ಹೆಸರಲ್ಲಿ ಕಲಹ ಬೇಡ; ಒಂದಾಗಿ ಬಾಳಿ; ಕುಮಾರೇಂದ್ರ ಸ್ವಾಮಿ

05:53 PM Mar 24, 2022 | Team Udayavani |

ಗೋಕಾಕ: ದೇವನೊಬ್ಬ ನಾಮ ಹಲವು. ನಾಮದ ಹೆಸರಿನಲ್ಲಿ ಕಲಹಗಳಾಗದೇ ಪ್ರೀತಿ, ನೀತಿ, ರೀತಿಯಿಂದ ಬಾಳಬೇಕು. ಇರುವುದೊಂದೇ ಬದುಕು. ಜಾತಿ-ಮತವ ಮರೆತು ಒಂದಾಗಿ ಬಾಳಬೇಕು ಎಂದು ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.

Advertisement

ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕುಂದರನಾಡೋತ್ಸವ-2022 ಉದ್ಘಾಟನೆ ಹಾಗೂ ಭಾವೈಕ್ಯ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನು ನಡೆ-ನುಡಿ ಒಂದಾಗಿ ಬಾಳಿದರೆ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ. ನಡೆ ನುಡಿ ವ್ಯತ್ಯಾಸವಾದಲ್ಲಿ ಬದುಕು ಭಾರವಾಗುತ್ತೆ. ಯಾವುದೇ ಧಾರ್ಮಿಕ ಆಚರಣೆಗಳು ಆತ್ಮೋದ್ಧಾರವಾಗಿರಬೇಕೆ ವಿನಃ ಡಾಂಭಿಕ ಆಚರಣೆಯಾಗಿರಬಾರದು. ಶ್ರೀಮಠದ ಪೂಜ್ಯರು ಕಿರಿಯ ವಯಸ್ಸಿನಲ್ಲಿ ಈ ಭಾಗದಲ್ಲಿ ಹಲವಾರು ಸಾಮಾಜಿಕ-ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.

ಶೂನ್ಯ ಸಂಪಾದನಮಠದ ಮುರುಘ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಸರ್ವ ಧರ್ಮದವರನ್ನು ಏಕತೆಯಿಂದ ಕಾಣುವ ಏಕೈಕ ದೇಶ ನಮ್ಮ ಭಾರತ. ನಮ್ಮ ಧರ್ಮವನ್ನು ಪ್ರೀತಿಸಿ, ಅನ್ಯ ಧರ್ಮದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಮಾಜದಲ್ಲಿ ದುಃಖದಲ್ಲಿರುವವರು, ಸಮಸ್ಯೆಯಲ್ಲಿರುವವರನ್ನು ಮೇಲಕ್ಕೆ ಎತ್ತುವುದೇ ನಿಜವಾದ ಧರ್ಮ ಎಂದರು. ಕಾರ್ಮಿಕ ಮುಖಂಡ ಅಂಬಿರಾವ್‌ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮಿಗಳು, ಪಾಶ್ಚಾಪುರದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಮೂಲಗದ್ದೆಯ ಚನ್ನಬಸವ ಸ್ವಾಮಿಗಳು, ವಿಶ್ವನಾಥ ದೇವರು ಚರಂತಿಮಠ ಕುಂದರಗಿ, ಮೌಲಾನಾ ಅಲ್ಲಮಖಾನ ದೇಸಾಯಿ, ಸಿಸ್ಟರ್‌ ಫಾತೀಮಾ ಡೇವಿಡ್‌, ರಾಜಕೀಯ ಮುಖಂಡರಾದ ಭೀಮನಗೌಡ ಪೋಲಿಸ್‌ಗೌಡ್ರು ಸೇರಿದಂತೆ ಭಕ್ತಾದಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next