ಕಾರವಾರ: ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗ ಸೇರಿಲ್ಲ. ಜಿಲ್ಲೆಗೆ ನಿರ್ದಿಷ್ಟ ಕೊಡುಗೆಗಳೂ ಇಲ್ಲ ಎಂಬುದು ಸ್ಪಷ್ಟವಾಗಿದೆ. ರೈತರಿಗೆ, ವ್ಯಾಪಾರಿಗಳಿಗೆ ಹಾಗೂ ಮೀನುಗಾರರಿಗೆ ಘೋಷಿಸಿರುವ ಯೋಜನೆಗಳ ಲಾಭ ಜಿಲ್ಲೆಯ ಕೆಲವರಿಗೆ ಆಗಲಿದೆ. ತೆರಿಗೆ ಸಂಗ್ರಹದಲ್ಲಿ ಉತ್ತಮ ಲಕ್ಷಣಗಳಿವೆ.
ಚುನಾವಣೆಗೂ ಮುನ್ನ ಮಂಡಿಸಿದ ಮಧ್ಯಂತರ ಬಜೆಟ್‌ನ ಮುಂದುವರಿಕೆಯ ಭಾಗ ಇದಾಗಿದೆ. ಹಾಗಾಗಿ ಇದರಲ್ಲಿ ವಿಶೇಷ ಮಾರ್ಪಾಡುಗಳಿಲ್ಲ ಎಂಬುದು ಬಿಜೆಪಿಗರ ಸಮರ್ಥನೆ. ಚುನಾವಣೆಗೆ ಕೊಟ್ಟ ಆಶ್ವಾಸನೆಗಳನ್ನು ಈ ಬಜೆಟ್‌ನಲ್ಲಿ ಸೇರಿಸಲಾಗಿದೆ. ಜನಪ್ರಿಯ ಯೋಜನೆಗಳನ್ನು ಬಿಜೆಪಿ ಯಾವತ್ತು ಪೋಷಿಸುವುದಿಲ್ಲ. ಅಂಥ ಸಾಹಸಗಳಿಗೆ ಕೈ ಹಾಕುವುದಿಲ್ಲ ಎಂಬುದು ಈ ಬಜೆಟ್ನಿಂದ ಸಾಬೀತಾಗಿದೆ.
ಬಜೆಟ್ ಚೆನ್ನಾಗಿದೆ. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಮೀನುಗಾರರ ಮಾರ್ಕೆಟಿಂಗ್ ಕೌಶಲ್ಯ ಹೆಚ್ಚಿಸಲಿದೆ. ಅಲ್ಲದೇ ಮೀನು ಕೆಡದಂತೆ ಇಡಲು ಸ್ಟೋರೇಜ್ ಕ್ಯಾಪಾಸಿಟಿ ಹೆಚ್ಚಿಸಲು ಸಾಲ ಸಿಗಲಿದೆ. ಸೊಸೈಟಿಗಳನ್ನು ಸ್ಥಾಪಿಸಿಕೊಂಡು ಅಭಿವೃದ್ಧಿಗೆ ಸಾಕಷ್ಟು ಸಹಾಯ ಬಜೆಟ್‌ನಲ್ಲಿದೆ. ರೈತರಿಗೆ 6000 ರೂ.ನೆರವು ಮುಂದುವರಿದಿದೆ. ಎಲ್ಲರಿಗೂ ವಿದ್ಯುತ್, ಶೌಚಾಲಯ ಮತ್ತು ಗ್ಯಾಸ್ ಸೌಲಭ್ಯದ ಯೋಜನೆ ಮುಂದುವರಿಸಲಾಗಿದೆ. ಅಲ್ಲದೇ ವರ್ಷಕ್ಕೆ 1.50 ಕೋಟಿ ಒಳಗೆ ವ್ಯಾಪಾರ ಮಾಡುವ ವ್ಯಾಪಾರಿಗಳು ವೃತ್ತಿಯಿಂದ ನಿವೃತ್ತಿಯಾದ ಮೇಲೆ ತಿಂಗಳಿಗೆ 3 ಸಾವಿರ ಪಿಂಚಣಿ ಪಡೆಯುವ ಯೋಜನೆ ಮುಂದುವರಿಸಲಾಗಿದೆ. ಅಲ್ಲದೇ ಉಜ್ವಲಾ ಯೋಜನೆ ಮತ್ತಷ್ಟು ವಿಶಾಲಗೊಳಿಸಲಾಗಿದೆ. ರೈಲ್ವೆ ಖಾಸಗಿಕರಣಕ್ಕೆ ಸಹ ಅವಕಾಶ ಕಲ್ಪಿಸಲಾಗಿದೆ. ಮುದ್ರಣ ಕಾಗದದ ಸುಂಕ ಹೆಚ್ಚಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಾಗರ ಮಾಲಾ ಯೋಜನೆಯಲ್ಲಿ 550 ಕೋಟಿ ಮೀಸಲಿರಿಸಿದ್ದು, ಇದರ ಲಾಭ ಜಿಲ್ಲೆಯ ಕಾರವಾರ, ಬೇಲೇಕೇರಿ ಬಂದರುಗಳಿಗೆ ಆಗಲಿದೆ ಎಂಬ ಮಾತು ಕೇಳಿ ಬಂದಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಮಧ್ಯಮ ವರ್ಗ ಕಳವಳ ವ್ಯಕ್ತಪಡಿಸಿದೆ.