Advertisement

ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ: ಸಿಎಂ ಸಿದ್ದರಾಮಯ್ಯ

06:36 PM Aug 05, 2023 | Team Udayavani |

ಕಲಬುರಗಿ: ಐದು ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಮುಂದುವರೆಯಲಿದ್ದು, ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ, ಸಾಂಕೇತಿಕವಾಗಿ ಶೂನ್ಯ ದರದ ವಿದ್ಯಾರ್ಥಿ ದರದ ಬಿಲ್ ವಿತರಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು. ನುಡಿದಂತೆ ನಡೆಯುತ್ತೇವೆ ಎಂದು ಪುನರುಚ್ಚರಿಸಿದರು.

ವಿರೋಧ ಪಕ್ಷದವರು ಅದರಲ್ಲೂ ಬಿಜೆಪಿಯವರು ಐದು ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ. ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಈಗ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೇ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಟೀಕಿಸಿದ್ದಾರೆ. ಆದರೆ ಹಣದ ಕೊರತೆಯಿಲ್ಲ. ಎಂದಿನಂತೆ ಅಭಿವೃದ್ಧಿ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಘೋಷಿಸಿದರು.

ತಾಕತ್ತಿದ್ದರೆ ದೇಶಾದ್ಯಂತ ಜಾರಿ ತರಲಿ: ತಾಕತ್ತಿದ್ದರೆ ಕೇಂದ್ರ ಸರ್ಕಾರ ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ನಾವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ನಾವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲಿ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನವನ್ನೂ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಅವರು ಹೇಳಿರುವಂತೆ, ಯೋಜನೆಗಳನ್ನು ಜಾರಿ ತಂದು ನಾವು ದಿವಾಳಿ ಆಗುವುದಿಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ರಾಜ್ಯ ದಿವಾಳಿಯಾಗಿ, ನಿರುದ್ಯೋಗ ಸಮಸ್ಯೆ ಹೆಚ್ಚಿತ್ತು. ಈಗ ನಾವು ಜಾರಿಗೊಳಿಸಿರುವಂಥ ಗ್ಯಾರಂಟಿಗಳನ್ನು ಇಡೀ ದೇಶದಲ್ಲಿ ಜಾರಿ ತನ್ನಿ ಎಂದು ಪ್ರಧಾನಿಗೆ ಸವಾಲು ಹಾಕುತ್ತೇನೆ. ಗುಜರಾತ್‌ ಮಾಡಲ್ ಎಂದು ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ, ನಮ್ಮ ರಾಜ್ಯವನ್ನು ಗುಜರಾತ್ ಮಾಡಲು ನಾವು ಬಿಡುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾಡಲ್ ಮಾಡಿದ್ದೇವೆ. ನುಡಿದಂತೆ ನಡೆಯುವುದೇ ಕರ್ನಾಟಕ ಮಾಡಲ್”ಎಂದರು.

Advertisement

ಇದನ್ನೂ ಓದಿ:ಮಾಜಿ ಗೆಳೆಯನ ಜತೆ ಓಡಾಟ,ಲಲಿತ್‌ ಮೋದಿ ಸಂಬಂಧ: Gold digger ಟ್ರೋಲ್‌ಗೆ ಸುಶ್ಮಿತಾ ರಿಯಾಕ್ಟ್

ಇಂಧನ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ಭಾರತ್ ಜೋಡೋ ಯಾತ್ರೆ ವೇಳೆ ನಾಡಿನ ಜನ ಸಂಕಷ್ಟ ಅರಿತು ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ 5 ಗ್ಯಾರಂಟಿ ಕೊಟ್ಟೆವು. ಅಂದು ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ ಇದೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನಮ್ಮ ಯೋಜನೆಗಳು ನೆಮ್ಮದಿ ತಂದಿವೆ,” ಎಂದು ಇಂಧನ ಸಚಿವ ಜಾರ್ಜ್‌ ಹೇಳಿದರು.

“ಉಚಿತ ವಿದ್ಯುತ್‌ ಯೋಜನೆಯಿಂದ ಹಲವಾರು ಲಾಭಗಳಿವೆ. ತಮ್ಮ ಉಳಿತಾಯದ ಹಣವನ್ನು ಜನ ಶಿಕ್ಷಣ, ಆರೋಗ್ಯಕ್ಕೆ ಬಳಸುತ್ತಾರೆ. ಹೆಚ್ಚಿನ ಜನ ಶಿಕ್ಷಿತರಾಗಿ ನಿರುದ್ಯೋಗ ಸಮಸ್ಯೆಯೂ ನೀಗುತ್ತದೆ, ತೆರಿಗೆ ಕಟ್ಟುವವರ ಸಂಖ್ಯೆಯೂ ಹೆಚ್ಚುತ್ತದೆ. ಇದೆಲ್ಲದರ ಮೂಲಕ ಸಾಮಾಜಿಕ ಆರ್ಥಿಕ ಪ್ರಗತಿಯಾಗಿ, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಧಿಸಲಾಗುವುದು,”ಎಂದು ಅವರು ತಿಳಿಸಿದರು.

ದೇಶವೇ ಸ್ತುತಿ: ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡ ಜನರಿಗಾಗಿ ಕಾರ್ಯಕ್ರಮಗಳನ್ನು ಜಾರಿ ತರುತ್ತದೆ. ನಾವು ಈಗ ಕೊಟ್ಟಿರುವ 5 ಗ್ಯಾರಂಟಿಗಳನ್ನು ಇಡೀ ದೇಶವೇ ಮೆಚ್ಚಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಇತ್ತೀಚೆಗೆ ನನ್ನ ಭೇಟಿಯಾಗಿ ಕೇಳಿದ ಮೊದಲ ಪ್ರಶ್ನೆ, 5 ಗ್ಯಾರಂಟಿಗಳನ್ನು ಹೇಗೆ ಅನುಷ್ಠಾನಗೊಳಿಸುವಿರಿ ಎಂದು. ಮನಸ್ಸಿದ್ದಲ್ಲಿ ಮಾರ್ಗ ಇರುತ್ತದೆ, ದುಡ್ಡು ಹುಡುಕಿ ಅನುಷ್ಠಾನ ಮಾಡುತ್ತಾರೆ ಎಂದು ಉತ್ತರಿಸಿದೆ. ಅದನ್ನು ಸಿದ್ದರಾಮಯ್ಯ, ಶಿವಕುಮಾರ್, ಜಾರ್ಜ್ ಅವರು ಮಾಡಿ ತೋರಿಸಿದ್ದಾರೆ,”ಎಂದು ಮಲ್ಲಿಕಾರ್ಜುನ್ ಖರ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.‌ಶಿವಕುಮಾರ ಮಾತನಾಡಿ, ಜೀವನ ಬೆಳಗಿದ್ದೇವೆ. “ಜ.11ರಂದು ಪ್ರಜಾಧ್ವನಿ ಯಾತ್ರೆ ನಡೆಸಿ, ಬಡ ಜನರ ಕಣ್ಣೀರು ಒರೆಸಲು ನಾವು ಗ್ಯಾರಂಟಿಗಳನ್ನು ಕೊಟ್ಟೆವು. ನಿಮ್ಮ ಮನೆಯ ದೀಪ ಬೆಳೆಗಿಸುವ ಮೂಲಕ ಜನರ ಜೀವನ ಬೆಳಗಲು ಮುಂದಾಗಿದ್ದೇವೆ. ಪ್ರಿಯಾಂಕಾ ಗಾಂಧಿಯವರು ಪ್ರತಿ ಮನೆಯೊಡತಿಗೆ 2000ರೂ. ನೀಡುವ ಗೃಹ ಲಕ್ಷ್ಮಿ ಗ್ಯಾರಂಟಿ ನೀಡಿದರು. ಈ ಎರಡು ಯೋಜನೆಗಳ ಚೆಕ್‌ ಮೇಲೆ ನಾನು ಮತ್ತು ಮುಖ್ಯಮಂತ್ರಿ ಸಹಿ ಮಾಡಿದ್ದೆವು. ಅದರಂತೆ ಈಗ ನಾವೀಗ ನಡೆದುಕೊಳ್ಳುತ್ತಿದ್ದೇವೆ,”ಎಂದುಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಸರ್ಕಾರದ ಬೊಕ್ಕಸದ ಬಹುಪಾಲನ್ನು ಬಡಜನರಿಗೆ ತಲುಪಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಮಾತಿನಂತೆ ನಡೆಯುವ ಕೆಲಸ ಮಾಡುತ್ತಿದ್ದೇವೆ. ಐದು ಗ್ಯಾರಂಟಿಗಳ ಜತೆ ಪಾರದರ್ಶಕ ಆಡಳಿತ ನಾವು ಕೊಡುತ್ತೇವೆ. ಕರ್ನಾಟಕದ ಅಭಿವೃದ್ಧಿಯೇ ನಮ್ಮ ವಾಗ್ದಾನ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next