Advertisement

ಕರ್ನಾಟಕ ಸೇರಿದಂತೆ ದೇಶದ ಯಾವ ಭಾಗದಲ್ಲೂ ರಸಗೊಬ್ಬರ ಕೊರತೆಯಿಲ್ಲ: ಸದಾನಂದ ಗೌಡ

07:46 PM Aug 21, 2020 | Mithun PG |

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿಯೇ ರಸಗೊಬ್ಬರ ಪೂರೈಕೆ ಮಾಡುತ್ತಿದೆ. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಕಾಳಸಂತೆ, ಕೃತಕ ಅಭಾವ ಸೃಷ್ಟಿಯಾಗುತ್ತಿರುವ ಬಗ್ಗೆ ವರದಿಯಾಗಿದೆ. ರಾಜ್ಯ ಸರ್ಕಾರಗಳು ಈ ಬಗ್ಗೆ ತಕ್ಷಣವೇ ಗಮನ ಹರಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಆಗ್ರಹಿಸಿದ್ದಾರೆ.

Advertisement

ಮುಂಗಾರು ಹಂಗಾಮಿನಲ್ಲಿ ಬೇರೆ ಬೇರೆ ರಾಜ್ಯಗಳ ಯೂರಿಯಾ ಮತ್ತಿತರ ನಮೂನೆಯ ರಸಗೊಬ್ಬರಗಳ ಬೇಡಿಕೆ ಹಾಗೂ ಆಯಾ ರಾಜ್ಯಗಳಿಗೆ ಪೂರೈಸಲಾಗಿರುವ ರಸಗೊಬ್ಬರ ಪ್ರಮಾಣಗಳ ವಿವರಗಳುಳ್ಳ ಮಾಧ್ಯಮ ಹೇಳಿಕೆಯೊಂದನ್ನು ಕೇಂದ್ರ ಸಚಿವರು ದಾಖಲೆ ಸಮೇತ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ಆಯಾ ರಾಜ್ಯಗಳು ತಮಗೆ ಯಾವ ಹಂಗಾಮಿಗೆ ಯಾವ ನಮೂನೆಯ ರಸಗೊಬ್ಬರಗಳು ಎಷ್ಟೆಷ್ಟು ಬೇಕು ಎಂಬ ಬಗ್ಗೆ ಅಂದಾಜು ಮಾಡಿ ಮೊದಲೇ ತಿಳಿಸುತ್ತವೆ. ಅದರ ಪ್ರಕಾರ ನಮ್ಮ ರಸಗೊಬ್ಬರ ಇಲಾಖೆಯು ಸಾಕಷ್ಟು ಮುಂಚಿತವಾಗಿಯೇ ಕಾರ್ಖಾನೆಗಳು, ದಾಸ್ತಾನು ಕೇಂದ್ರಗಳು ಹಾಗೂ ಬಂದುರುಗಳಿಂದ ಆಯಾ ರಾಜ್ಯಗಳ ಗೋದಾಮು, ಡೆಲಿವರಿ ಕೇಂದ್ರಗಳಿಗೆ ರಸಗೊಬ್ಬರ ಪೂರೈಕೆ ಮಾಡುತ್ತದೆ. ಇದಾದ ನಂತರ ಆಯಾ ರಾಜ್ಯಗಳಲ್ಲಿ ಆಂತರಿಕ ವಿತರಣೆಯ ಸಂಪೂರ್ಣ ಜವಾಬ್ಧಾರಿ ರಾಜ್ಯ ಸರ್ಕಾರಗಳಿಗೆ ಸೇರಿದ್ದು ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಮುಂಜಾಗ್ರತಾ ದೃಷ್ಟಿಯಿಂದ ಕೇಂದ್ರವು ಎಲ್ಲ ರಾಜ್ಯಗಳಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿಯೇ ರಸಗೊಬ್ಬರ ಪೂರೈಕೆ ಇರುವಂತೆ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಮುಂದಿನ ಒಂದೆರಡು ತಿಂಗಳಿಗೆ ಸಾಕಾಗುವಷ್ಟು ಲಭ್ಯತೆ ಇರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಇಂದಿನಿಂದ ಸೆಪ್ಟೆಂಬರ್‌ 30ರ ತನಕ (ಖಾರೀಫ್‌ ಹಂಗಾಮು ಅಂತ್ಯ) 58.3 ಸಾವಿರ ಟನ್‌ ಯೂರಿಯಾ ಬೇಕು. ನಿನ್ನೆವರಿಗಿನ ಲೆಕ್ಕದಂತೆ ಕರ್ನಾಟಕದಲ್ಲಿ 2.04 ಲಕ್ಷ ಟನ್‌ ಯೂರಿಯಾ ದಾಸ್ತಾನಿದೆ. ಕರ್ನಾಟಕದಲ್ಲಿ ಮುಂದಿನ 40 ದಿನಗಳಲ್ಲಿ ಅಂದರೆ ಈ ಹಂಗಾಮಿನ ಕೊನೆಯವರೆಗೆ 14.2 ಸಾವಿರ ಟನ್‌ ಡಿ.ಎ.ಪಿ. ಮಾದರಿ ರಸಗೊಬ್ಬರ ಬೇಕು. ಆದರೆ ಈಗಾಗಲೇ 1.87 ಲಕ್ಷ ಟನ್‌ ಡಿ.ಎ.ಪಿ. ಗೊಬ್ಬರ ರಾಜ್ಯದಲ್ಲಿ ಲಭ್ಯವಿದೆ.

ಹಾಗೆಯೇ ರಾಜ್ಯಕ್ಕೆ ಈ ಅವಧಿಯಲ್ಲಿ 25.2 ಸಾವಿರ ಟನ್‌ ಎನ್‌.ಪಿ.ಕೆ.ಎಸ್‌. ಮಾದರಿ ರಸಗೊಬ್ಬರ ಅಗತ್ಯವಿದೆ. ಲಭ್ಯತೆ ಪ್ರಮಾಣ 4.8 ಲಕ್ಷ ಟನ್‌ ಇದೆ. ಇದು ಬೇಡಿಕೆಗಿಂತ ಹಲವು ಪಟ್ಟು ಜಾಸ್ತಿ. ಅದೇ ರೀತಿ, ರಾಜ್ಯಕ್ಕೆ ಸೆಪ್ಟೆಂಬರ್ ಕೊನೆತನಕ 59.6 ಸಾವಿರ ಟನ್ ಎಂ.ಓ.ಪಿ. ಮಾದರಿ ಗೊಬ್ಬರ ಬೇಕು. ಸಂತೋಷದ ವಿಚಾರವೇನೆಂದರೆ ರಾಜ್ಯದಲ್ಲಿ ಇಂದು 1.11 ಲಕ್ಷ ಟನ್‌ ಎಂ.ಓ.ಪಿ. ದಾಸ್ತಾನು ಇದೆ. ರಸಗೊಬ್ಬರ ಪೂರೈಕೆ ನಿರಂತರ ಪ್ರಕ್ರಿಯೆ. ಪ್ರತಿನಿತ್ಯ ರಾಜ್ಯಕ್ಕೆ ಸರಾಸರಿ ಐದರಿಂದ ಆರು ಗೂಡ್ಸ್‌ ಟ್ರೇನುಗಳು ಬೇರೆ ಬೇರೆ ಕಡಗಳಿಂದ ರಸಗೊಬ್ಬರ ಹೊತ್ತು ಬರುತ್ತಿರುತ್ತವೆ. ಕರ್ನಾಟಕಕ್ಕೆ ಆಗಸ್ಟ್‌ ತಿಂಗಳಲ್ಲಿ ನಿನ್ನೆವರೆಗೆ 110 ರೇಕ್ಸ್‌ (ಒಂದು ರೇಕ್‌ ಅಂದರೆ ಒಂದು ಗೂಡ್ಸ್‌ ಟ್ರೇನ್) ಅಂದಾಜು 3.5 ಲಕ್ಷ ಟನ್‌ ರಸಗೊಬ್ಬರ ಪೂರೈಕೆಯಾಗಿದೆ.

Advertisement

ಕಲ್ಬುರ್ಗಿ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ರಸಗೊಬ್ಬರ ಕೊರತೆಯಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನಮ್ಮಲ್ಲಿರುವ ಅಧಿಕೃತ ದಾಖಲೆಗಳ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ. ಉದಾಹರಣೆಗೆ ಕಲ್ಬುರ್ಗಿಯಲ್ಲಿ ನಿನ್ನೆ ಸಾಯಂಕಾಲದವರೆಗಿನ ಲೆಕ್ಕದ ಪ್ರಕಾರ 10,175 ಟನ್‌ ಯೂರಿಯಾ ಲಭ್ಯತೆಯಿದೆ. 16,352 ಟನ್‌ ಡಿ.ಎ.ಪಿ. ಇದೆ. ಒಟ್ಟು 36,629 ಟನ್‌ ವಿವಿಧ ನಮೂನೆಗಳ ರಸಗೊಬ್ಬರ ಲಭ್ಯತೆಯಿದೆ. ಧಾರವಾಡದಲ್ಲಿ ನಿನ್ನೆ ಸಂಜೆತನಕ ಒಟ್ಟು 25,903 ಟನ್‌ ರಸಗೊಬ್ಬರ ಲಭ್ಯತೆಯಿದೆ (ವಿವಿರವಾದ ಪಟ್ಟಿಗಳನ್ನು ಲಗತ್ತಿಸಿದೆ). ಆದಾಗ್ಯೂ ರೈತರಿಗೆ ಗೊಬ್ಬರ ಸಿಗುತ್ತಿಲ್ಲ ಅಂದರೆ ಕೃತಕ ಅಭಾವ ಇದ್ದಂತಿದೆ. ಹಾಗೆಯೇ ಹೆಚ್ಚುವರಿ ಬೆಲೆ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇವೆಲ್ಲದರ ವಿರುದ್ಧ ಕಠಿಣ ಕ್ರಮ ಜರುಗಿಸುವ ಅಗತ್ಯವಿದೆ. ಈಗಾಗಲೇ ಈ ಬಗ್ಗೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಸರ್ಕಾರವು ಅಕ್ರಮ ದಾಸ್ತಾನುಗಳ ಮೇಲೆ ಈಗಾಗಲೇ ದಾಳಿ ಮಾಡಿ ಹಲವು ಟ್ರೇಡ್‌ ಲೈಸನ್ಸ್‌ಗಳನ್ನು ರದ್ದುಗೊಳಿಸಿರುವುದು ಶ್ಲಾಘನೀಯವಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.

ಸ್ಥಳೀಯವಾಗಿ ಅಂದರೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ರಸಗೊಬ್ಬರ ಹಂಚಿಕೆ ನಿರ್ವಹಣೆಯನ್ನು ಪಾರದರರ್ಶಕವಾಗಿ ಹಾಗೂ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ನಮ್ಮ ರಸಗೊಬ್ಬರ ಇಲಾಖೆಯ ಆನ್ ಲೈನ್  ಡ್ಯಾಶ್‌ಬೋರ್ಡ್ (https://urvarak.nic.in/getStateWiseStockAsOnMapToday?struts.token.name=token&) ಮಾದರಿಯಲ್ಲಿ ಡಿಜಿಟಲ್‌ ಪ್ಲಾಟ್‌ಫಾರ್ಮ್ ಸಿದ್ದಪಡಿಸಿಕೊಳ್ಳುವಂತೆ ತಾವು ರಾಜ್ಯಗಳಿಗೆ ಸಲಹೆ ನೀಡುವುದಾಗಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದ ಗೌಡ ಅವರು ತಿಳಿಸಿದರು.

ದೇಶದಲ್ಲಿ ಪ್ರಸ್ತುತ ಎಲ್ಲ ನಮೂನೆಯ ಗೊಬ್ಬರ ದಾಸ್ತಾನು ತೃಪ್ತಿಕರವಾಗಿದೆ. ಸದ್ಯ 47 ಲಕ್ಷ ಟನ್‌ ಯೂರಿಯಾ, 45 ಲಕ್ಷ ಟನ್‌ ಡಿ.ಎ.ಪಿ., 36 ಲಕ್ಷ ಟನ್‌ ಎನ್.ಪಿ.ಕೆ.ಎಸ್. ಹಾಗೂ 16.9 ಲಕ್ಷ ಎಂ.ಓ.ಪಿ. ರಸಗೊಬ್ಬರ ಸಂಗ್ರಹವಿದೆ. ಇದರ ಮಧ್ಯೆಯೇ 9.52 ಲಕ್ಷ ಟನ್‌ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next