Advertisement

ಶೀಘ್ರ ವೆಂಟಿಲೇಟರ್‌, ಪಿಪಿಇ ಲಭ್ಯ: ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ

07:08 AM Apr 10, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೆಂದು ಕೇಂದ್ರ ಸರಕಾರವು 1.7 ಕೋಟಿ ಪಿಪಿಇ (ವೈಯಕ್ತಿಕ ಸುರಕ್ಷಾ ಸಾಧನ)ಗಳು ಮತ್ತು 49 ಸಾವಿರ ವೆಂಟಿಲೇಟರ್‌ಗಳನ್ನು ಆರ್ಡರ್‌ ಮಾಡಿದೆ, ಹಾಗಾಗಿ ಯಾರೂ ಪಿಪಿಇ ಲಭ್ಯತೆ ಕುರಿತು ಆತಂಕ ಪಡಬೇಕಾಗಿಲ್ಲ.
– ಹೀಗೆಂದು ಹೇಳಿರುವುದು ಕೇಂದ್ರ ಆರೋಗ್ಯ ಸಚಿವಾಲಯ.

Advertisement

ದೇಶದಲ್ಲಿ ವೈದ್ಯರಿಗೆ ಅಗತ್ಯವಿರುವ ಸುರಕ್ಷಾ ಸಾಧನಗಳ ಕೊರತೆ ಯಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಾಹಿತಿ ನೀಡಿದೆ. ಜತೆಗೆ, ಹೊಸ ಪಿಪಿಇ, ವೆಂಟಿಲೇಟರ್‌ಗಳು, ಎನ್‌ 95 ಮಾಸ್ಕ್ ಪೂರೈಕೆ ಈಗಾಗಲೇ ಆರಂಭವಾಗಿದೆ. ಪಿಪಿಇಗಳನ್ನು ಎಲ್ಲರೂ ಧರಿಸಲೇಬೇಕೆಂದೇನೂ ಇಲ್ಲ. ಅದನ್ನು ವಿವೇಕಯುತವಾಗಿ ಬಳಸುವ ಕುರಿತು ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ತಿಳಿಸಿದ್ದಾರೆ.

ಪಿಪಿಇ ಎಲ್ಲರಿಗೂ ಬೇಡ: ರಾಜ್ಯಗಳಿಗೂ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸುವತ್ತ ಕೇಂದ್ರ ಸರಕಾರ ಗಮನ ನೆಟ್ಟಿದೆ. ರಾಜ್ಯಗಳು ಕೂಡ ಅವುಗಳನ್ನು ವಿವೇಚನೆಯಿಂದ ಬಳಸಬೇಕು. ಪಿಪಿಇ (ಬೂಟುಗಳು, ಎನ್‌-95 ಮಾಸ್ಕ್, ಉಡುಪು ಮತ್ತು ಶಿರಸ್ತ್ರಾಣವನ್ನು ಒಳಗೊಂಡ ಕಿಟ್‌) ಎಲ್ಲರಿಗೂ ಬೇಕು ಎಂಬ ತಪ್ಪು ತಿಳಿವಳಿಕೆ ಇದೆ. ಅದು ಸುಳ್ಳು. ಎಲ್ಲರಿಗೂ ಪಿಪಿಇ ಅಗತ್ಯವಿರುವುದಿಲ್ಲ ಎಂದಿದ್ದಾರೆ ಅಗರ್ವಾಲ್‌.

ನಮ್ಮ ದೇಶಕ್ಕೆ ಎಷ್ಟು ಬೇಕೋ ಅಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧ ಲಭ್ಯವಿದೆ. ಆದರೆ, ಕೆಲವೊಂದು ಶಿಷ್ಟಾಚಾರಗಳಿಗೆ ಅನುಗುಣವಾಗಿಯೇ ಅದನ್ನು ಬಳಸಬೇಕಾಗುತ್ತದೆ. ಏಕೆಂದರೆ, ಅದು ಹೃದಯ ಸಂಬಂಧಿ ಸಮಸ್ಯೆಗಳಿಗೂ ಕೆಲವೊಮ್ಮೆ ಕಾರಣವಾಗಬಹುದು. ಯಾವ ರೋಗಿಗೆ ಅದನ್ನು ನೀಡಲು ಸೂಕ್ತವೋ ಅಂಥವರಿಗೆ ಮಾತ್ರವೇ ಈ ಔಷಧ ನೀಡಲಾಗುತ್ತದೆ ಎಂದಿದ್ದಾರೆ.

24 ಗಂಟೆಯಲ್ಲಿ 17 ಸಾವು
ದೇಶದಲ್ಲಿ ಕೋವಿಡ್ ಅಬ್ಬರ ಮಿತಿಮೀರುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 17 ಮಂದಿ ಅಸುನೀಗಿದ್ದಾರೆ. ಅಷ್ಟೇ ಅಲ್ಲ, ಒಂದೇ ದಿನ 549 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶಾದ್ಯಂತ ಮೃತರ ಸಂಖ್ಯೆ 186 ಆಗಿದ್ದು, ಸೋಂಕಿತರ ಸಂಖ್ಯೆ 6,399 ಕ್ಕೇರಿಕೆಯಾಗಿದೆ. ಈವರೆಗೆ 1.30 ಲಕ್ಷ ಸ್ಯಾಂಪಲ್‌ ಗಳನ್ನು ಪರೀಕ್ಷಿಸಲಾಗಿದ್ದು, ಕಳೆದೆರಡು ತಿಂಗಳಲ್ಲಿ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ಶೇ.3 ರಿಂದ ಶೇ.5ರಷ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next