Advertisement

ಪುಸ್ತಕ ಖರೀದಿಗೆ ಪ್ರತ್ಯೇಕ ಅನುದಾನವಿಲ್ಲ

05:59 PM Aug 20, 2017 | |

ಚಿತ್ರದುರ್ಗ: ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಶ್ರೀಕಂಠ ಕೂಡಿಗೆ
ಭೇಟಿ ನೀಡಿ, ಗ್ರಂಥಾಲಯದ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿದ
ಸಂದರ್ಭದಲ್ಲಿ ಓದುಗರನ್ನು ಮಾತನಾಡಿಸಿದ ಅವರು, ಗ್ರಂಥಾಲಯ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಕೆಲವು ಓದಗರು, ಗ್ರಂಥಾಲಯಕ್ಕೆ ಯಾವ್ಯಾವ ಪುಸ್ತಕಗಳು ಬೇಕು ಎಂಬ ಪಟ್ಟಿಯನ್ನು ಅಧ್ಯಕ್ಷರಿಗೆ ನೀಡಿ ಪೂರೈಸುವಂತೆ ಮನವಿ ಮಾಡಿಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರವರೆಗೆ ಬಾಕಿ ಇದ್ದ ಎಲ್ಲ ಪುಸ್ತಕಗಳ ಖರೀದಿಯನ್ನು ಕ್ಲಿಯರ್‌ ಮಾಡಲಾಗಿದೆ. ಪುಸ್ತಕ ಖರೀದಿಗೆ ಸರ್ಕಾರ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಹಾಗಾಗಿ ಗ್ರಂಥಾಲಯ ಕರದಿಂದಲೇ ಖರೀದಿಸಬೇಕು. ಆದರೆ, ಬೆಂಗಳೂರು ಮಹಾನಗರ ಪಾಲಿಕೆಯಿಂದ 10-12 ವರ್ಷಗಳಿಂದ 23 ಕೋಟಿ ರೂ.ಸೆಸ್‌ ಬಾಕಿ ಬರಬೇಕು. ರಾಜ್ಯದ ಬೇರೆ ಬೇರೆ ಕಡೆಗಳಿಂದ ಕೋಟ್ಯಂತರ ರೂ. ಸೆಸ್‌ ಹಣ ಬಂದರೆ, ಹೆಚ್ಚಿನ ಪುಸ್ತಕಗಳ ಖರೀದಿಗೂ ಸುಲಭವಾಗಲಿದೆ ಎಂದರು. ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಕೊಟ್ಟರೆ, ಆಯಾ ವರ್ಷ ಆಯ್ಕೆಯಾದ ಪುಸ್ತಕಗಳನ್ನು ಆಯಾ ವರ್ಷವೇ ಖರೀದಿಸಬಹುದು. ಪ್ರತಿ ವರ್ಷ ಕನ್ನಡದಲ್ಲಿ 7 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಅದರಲ್ಲಿ ಉತ್ತಮವಾದ ಕೃತಿಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡುತ್ತದೆ. ಸೆನ್ಸಾರ್‌ ಮಾಡುತ್ತೆ. ಅದರಲ್ಲಿ ಒಳ್ಳೆಯ ಪುಸ್ತಕಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಆಯ್ಕೆ ಸಮಿತಿಯಲ್ಲಿ ಸಾಹಿತ್ಯ, ಪ್ರಕಾಶನ, ಲೇಖಕರು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿನ 20ಕ್ಕೂ ಹೆಚ್ಚು ಸದಸ್ಯರಿದ್ದಾರೆ. ನಾವೆಲ್ಲ ಸೇರಿ ಉತ್ತಮವಾದ ಪುಸ್ತಕವನ್ನು ಆಯ್ಕೆ ಮಾಡುತ್ತಿದ್ದೇವೆ. ಈಗ 2013, 2014ವರೆಗೆ ಪುಸ್ತಕ ಆಯ್ಕ ಮತ್ತು ಖರೀದಿ ಮುಗಿದಿದೆ. 2015 ಆಯ್ಕೆ ಪಟ್ಟಿಯನ್ನು ಜಾಲತಾಣಕ್ಕೆ ಅಪ್‌ ಲೋಡ್‌ ಮಾಡಿಸಬೇಕು. ನಂತರ, ಲೇಖಕರು, ಪ್ರಕಾಶಕರು ಸಲ್ಲಿಸುವ ಪುನರ್‌ ಪರಿಶೀಲನಾ ಅರ್ಜಿ ಪರಿಶೀಲಿಸಬೇಕಿದೆ ಎಂದರು. ಪುಸ್ತಕ ಖರೀದಿ ನಂತರ ಹಣವನ್ನು ಚೆಕ್‌ ಮೂಲಕ ಪಾವತಿಸುವ ವಿಚಾರದಲ್ಲಿ ಲಂಚ ಕೇಳುತ್ತಾರೆ ಪರ್ಸೆಂಟೇಜ್‌ ಕೊಡಿ ಎಂದು ಸತಾಯಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ವಿಷಯವನ್ನು ಸಚಿವರ ಜತೆ ಚರ್ಚಿಸಿ, ಪುಸ್ತಕ ಖರೀದಿಸಿದ ಹಣವನ್ನು ನೇರವಾಗಿ, ಸಂಬಂಧಿಸಿದವರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಜಾರಿಗೆ ತರಲಾಯಿತು ಎಂದರು. ಲೇಖಕರು ಅಥವಾ ಪ್ರಕಾಶಕರು ಪುಸ್ತಕವನ್ನು ಕೊಡುವಾಗಲೇ, ಅವರಿಂದ ಐಎಫ್‌ ಎಸ್‌ ಸಿ ಕೋಡ್‌, ಬ್ಯಾಂಕ್‌ ಖಾತೆ ಸಂಖ್ಯೆ, ಪಾನ್‌ಕಾರ್ಡ್‌ ಸಲ್ಲಿಸುವಂತೆ
ಮಾಡಿದ್ದೇವೆ. ಈಗ ಬಹುತೇಕರು ಖುಷಿಯಾಗಿದ್ದಾರೆ. ಬೇನಾಮಿ ಹೆಸರಲ್ಲಿ ಪ್ರಕಾಶನ ಮಾಡಿಕೊಂಡಿರುವವರಿಗೆ ಮಾತ್ರ ಬೇಸರವಾಗಿದೆ ಎಂದು ತಿಳಿಸಿದರು.  ಗ್ರಂಥಾಲಯದ ಅಭಿವೃದ್ಧಿ, ಪುಸ್ತಕ ಖರೀದಿ ಮತ್ತು ನಿರ್ವಹಣೆಗಾಗಿ ಬಜೆಟ್‌
ನಲ್ಲಿ ಪ್ರತ್ಯೇಕ ಹಣ ತೆಗೆದಿಡಬೇಕೆಂದು ಸರ್ಕಾರದ ಮೇಲೆ ಸಾಕಷ್ಟು ಬಾರಿ ಒತ್ತಾಯ ಹಾಕಿದ್ದೇವೆ. ಮಾಜಿ ಸಚಿವ
ಕಿಮ್ಮನೆ ರತ್ನಾಕರ್‌ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಈ ಸಲಹೆ ಕೊಟ್ಟಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಅವರು ಸೆಸ್‌ ಮೂಲಕವೇ ಇವೆಲ್ಲ ಸರಿಪಡಿಸಿಕೊಳ್ಳಬೇಕು ಎನ್ನುತ್ತಾರೆ ಎಂದು ತಿಳಿಸಿದರು. ಪುಸ್ತಕಗಳ ಖರೀದಿಸಲು ಪ್ರತಿ ವರ್ಷ ಕನಿಷ್ಠ 12 ರಿಂದ 13 ಕೋಟಿ ರೂ. ಬೇಕು. ಗ್ರಂಥಾಲಯಗಳಲ್ಲಿ ಪುಸ್ತಕ ಜೋಡಿಸಲು ಜಾಗವೇ ಇಲ್ಲ. ಹೆಚ್ಚುವರಿ ಕಟ್ಟಡಗಳ ಅಗತ್ಯವಿದೆ. ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ತುಂಬಿದ್ದೇವೆ. ಬೆಂಗಳೂರಿನ ಶೇಷಾದ್ರಿ ಅಯ್ಯರ್‌ ಸೆಂಟ್ರಲ್‌ ಲೈಬ್ರರಿಗೆ 103 ವರ್ಷ ತುಂಬಿದೆ. ಅದರ ಸಾಮರ್ಥ್ಯ 15 ಲಕ್ಷ ಪುಸ್ತಕ ಹಿಡಿಯುತ್ತದೆ. ಈಗ 22 ಲಕ್ಷ ಪುಸ್ತಗಳು ಅಲ್ಲಿವೆ. ಹೆಚ್ಚುವರಿ ಪುಸ್ತಕಗಳನ್ನು ಶೌಚಾಲಯಕ್ಕೆ ಹೋಗುವ ಜಾಗದಲ್ಲೆಲ್ಲ ಜೋಡಿಸುವ ಪರಿಸ್ಥಿತಿ ಇದೆ ಎಂದು ತಿಳಿಸಿದರು. ಗ್ರಂಥಾಲಯ ಸುಧಾರಣೆಯಾಗಬೇಕು. ಇ-ಗ್ರಂಥಾಲಯ, ಡಿಜಿಟಲ್‌ ಲೈಬ್ರರಿಯಂತಹ ವ್ಯವಸ್ಥೆಯಾಗಬೇಕು. ಇದಕ್ಕೆ ಸರ್ಕಾರ ಬಜೆಟ್‌ ನಲ್ಲಿ ಪ್ರತ್ಯೇಕ ಅನುದಾನ ನೀಡಬೇಕು. ಹಾಗೆಯೇ, ಸ್ಥಳೀಯ ಶಾಸಕರು, ಸಂಸದರು ತಮ್ಮ ತಮ್ಮ ಅನುದಾನವನ್ನು ಮೂಲ ಸೌಲಭ್ಯ ಅಭಿವೃದ್ಧಿಗೆ ಉದಾರವಾಗಿ ನೀಡುವಂತಾಗಬೇಕು ಎಂದರು. ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ, ಚಿತ್ರದುರ್ಗ ಮೂಲದ ರಾಜಸ್ತಾನದ ಕೇಂದ್ರೀಯ ವಿಶ್ವವಿದ್ಯಾಲಯದ ಲೈಬ್ರರಿಯನ್‌ ಎಂ. ವಿಜಯಕುಮಾರ್‌, ನಿವೃತ್ತ ಪ್ರಾಚಾರ್ಯ ಪ್ರೊ| ಸಿ. ಲಿಂಗಪ್ಪ, ಗ್ರಂಥಾಲಯದ ಸಿಬ್ಬಂದಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next