Advertisement

ಕಾಜಾಡಿ ಶಾಲೆಯಲ್ಲಿ ಶಿಕ್ಷಕರಿದ್ದಾರೆ, ಮಕ್ಕಳೇ ಇಲ್ಲ!

07:26 PM Jul 14, 2017 | Karthik A |

ಸಿದ್ದಾಪುರ: ಹತ್ತಾರು ವರ್ಷಗಳ ಹಿಂದೆ ಗ್ರಾಮದ ಆಸುಪಾಸಿನ ಜನತೆ ವಿದ್ಯಾವಂತರಾಗಲಿ ಎಂಬ ಮನೋಭಾವನೆಯಿಂದ ಜನಪ್ರತಿನಿಧಿಗಳ, ವಿದ್ಯಾಭಿಮಾನಿಗಳ ಹಾಗೂ ಊರ ದಾನಿಗಳ ಸಹಕಾರದಿಂದ ಗ್ರಾಮದ ಮೂಲೆ ಮೂಲೆಗಳಲ್ಲಿ ಅದೆಷ್ಟೊ ಸರಕಾರಿ ಹಾಗೂ ಅನುದಾನಿತ ಶಾಲೆಗಳು ನಿರ್ಮಾಣಗೊಂಡಿದ್ದವು. ಅಂದಿನ ದಿನಗಳಲ್ಲಿ ವಿದ್ಯಾರ್ಜನೆಗಾಗಿ ಮೈಲು ಗಟ್ಟಲೆ ಕಡಿದಾದ ಹಾದಿಯ ಕಾಡು ಮೇಡುಗಳನ್ನು ಸುತ್ತಿಕೊಂಡು ವಿದ್ಯೆ ಕಲಿಯುವ ಕಾಲವಾಗಿತ್ತು. ಆದರೆ ಈಗ ಅದೆಲ್ಲವು ಬದಲಾಗಿ ಜನರು ವಿದ್ಯಾವಂತರಾಗಿ, ಬುದ್ಧಿವಂತಾಗಿ ಹಾಗೂ ಹಣವಂತರಾಗಿದ್ದಾರೆ. ಆದರೆ ಅಂದು ವಿದ್ಯೆ ಕಲಿಸಿದ ಅನೇಕ ಸರಕಾರಿ ಶಾಲೆಗಳು ಇಂದು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತದಲ್ಲಿದೆ. ಆ ಸಾಲಿನಲ್ಲಿ ಶಂಕರನಾರಾಯಣ ಗ್ರಾಮದ ಕಾಜಾಡಿ ಸರಕಾರಿ ಶಾಲೆ ಕೂಡ ಒಂದಾಗಿದೆ.

Advertisement

ಕಾಜಾಡಿ ಶಾಲೆ 
ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕಾಜಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸುವರ್ಣ ಮಹೋತ್ಸವದ ಆಚರಣೆಯನ್ನು ಪೂರೈಸಿ ಅಮೃತಮಹೋತ್ಸವದ ಅಂಚಿನಲ್ಲಿರುವ ಶಾಲೆ ಇದಾಗಿದೆ. ಅದೆಷ್ಟೋ ಶಿಕ್ಷಕರ ಸೇವೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಾಲೆ. ಅದೆಷ್ಟೊ ಮಂದಿ ವಿದ್ಯಾರ್ಜನೆಯನ್ನು ಪೂರೈಸಿ ಹಲವಾರು ರಂಗಗಳಲ್ಲಿ ಸಾಧನೆಗೈಯಲು ನೆರವಾದ ವಿದ್ಯಾ ಸಂಸ್ಥೆ ಇದಾಗಿದೆ. ಇತಂಹ ಶಾಲೆ ಸದ್ಯಕ್ಕೆ ಒರ್ವ ಖಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೂ, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಲ್ಲ. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ 12ವಿದ್ಯಾರ್ಥಿಗಳು ದಾಖಲಾಗಿದ್ದು, ಶೈಕ್ಷಣಿಕ ಸಾಲಿನಲ್ಲಿ ಶಾಲೆಗೆ ಒರ್ವ ವಿದ್ಯಾರ್ಥಿಯೂ ಕೂಡಾ ದಾಖಲಾಗಿಲ್ಲದಿರುವುದರಿಂದ ಶಾಲೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಈಗ ಶಾಲೆಯಲ್ಲಿ ಮಕ್ಕಳೆ ಇಲ್ಲ: 
ಕಾಜಾಡಿ ಶಾಲೆಯು 1ರಿಂದ 5ನೇ ತರಗತಿಯ ತನಕ ಇರುವ ಶಾಲೆಯಾಗಿದೆ. ಹಿಂದಿನ ಶೈಕ್ಷಣಿಕ ಸಾಲಿನ ಕೇವಲ 4 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. 3ನೇ ತರಗತಿಯಲ್ಲಿ 3ವಿದ್ಯಾರ್ಥಿಗಳು ಹಾಗೂ 5ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ವಿದ್ಯೆ ಕಲಿಯುತ್ತಿದ್ದರು. ಈ ನಾಲ್ಕು ವಿದ್ಯಾರ್ಥಿಗಳು ಈ ಶಾಲೆ ಬಿಟ್ಟು ಬೇರೆ ಶಾಲೆಗಳಿಗೆ ಹೋಗುವುದರಿಂದ ಕಳೆದ ನಾಲ್ಕು ದಿನಗಳಿಂದ ಒಂದೇ ಒಂದು ವಿದ್ಯಾರ್ಥಿಯು ಇಲ್ಲ. ಶಾಲೆಗೆ ಒಬ್ಬರು ಶಿಕ್ಷಕರು, ಮತ್ತೂಬ್ಬರು ಗೌರವ ಶಿಕ್ಷಕಿ ಹಾಗೂ ಅಡುಗೆಯವರು ಶಾಲೆಗೆ ಬಂದು ಹೋಗುವ ಪರಿಸ್ಥಿತಿಯಾಗಿದೆ.

ಸರಕಾರಿ ಶಾಲೆಗಳಲ್ಲಿ ಸೌಲಭ್ಯ
ಸರಕಾರಿ ಶಾಲೆಗಳಿಗೆ ಸರಕಾರದಿಂದ ಅಷ್ಟೊಂದು ಸೌಲಭ್ಯಗಳು ಬರುತ್ತಿವೆ. ನೂರಿತ ಶಿಕ್ಷಕ ವೃಂದ, ನಲಿಕಲಿ, ಬಿಸಿ ಊಟ ಹೀಗೆ ಅನೇಕ ಸೌಲಭ್ಯಗಳು ಸರಕಾರಿ ಶಾಲೆಯಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಿಗೆ ಸರಕಾರ, ಊರ ದಾನಿಗಳ ಹಾಗೂ ವಿದ್ಯಾಭಿಮಾನಿಗಳಿಂದ ಉತ್ತಮ ಸೌಲಭ್ಯಗಳು ಹಾಗೂ ಕೊಡುಗೆಗಳು ಬರುತ್ತಿವೆ. ಆದರೂ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.

ಸಮಿತಿಗಳ ಜವಾಬ್ದಾರಿ
ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಗಳು, ಹಳೆ ವಿದ್ಯಾರ್ಥಿಗಳು ಶ್ರಮಿಸುತ್ತಿವೆ. ಶಾಲೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯದೊಂದಿಗೆ ಗ್ರಾಮಸ್ಥರ ಸಹಕಾರದಿಂದ ಶಾಲೆಗಳಿಗೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಮಿತಿಗಳು ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಹರಸಾಹಸ ಪಡುತ್ತಿವೆ.

Advertisement

ಕಾಜಾಡಿ ಸರಕಾರಿ ಶಾಲೆಯನ್ನು ಯಾವ ಕಾರಣಕ್ಕೂ ಮುಚ್ಚುವ ಬಗ್ಗೆ ಚಿಂತನೆ ಇಲಾಖೆಗೆ ಇಲ್ಲ. ಶೈಕ್ಷಣಿಕ ಸಾಲಿನ ಶಾಲೆಯ ಪ್ರಾರಂಭದ ದಿನಗಳಲ್ಲಿ 4 ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಆದರೆ ಇರುವ ನಾಲ್ಕು ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳಿಸುವುದರಿಂದ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಸರಕಾರಿ ಶಾಲೆ ಉಳಿಸುವ ಬಗ್ಗೆ  ಸ್ಥಳೀಯರು, ಸ್ಥಳೀಯ ಆಡಳಿತ, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಮಕ್ಕಳ ಹೆತ್ತವರು ಪ್ರಯತ್ನಿಸಬೇಕು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಲ್ಲದಿದ್ದರೂ ಕೂಡ ಓರ್ವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
– ಸೀತಾರಾಮ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

ಕಾಜಾಡಿ ಸರಕಾರಿ ಶಾಲೆಯಲ್ಲಿ ಮಕ್ಕಳು ಇಲ್ಲದೆ ಮುಚ್ಚುವ ಹಂತದಲ್ಲಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಗ್ರಹಾರದ ಶಾಲೆ ಕೂಡ ಇದೆ ರೀತಿಯಲ್ಲಿ ಇದೆ. ಆದರೆ ಮಕ್ಕಳು ಶಾಲೆಗೆ ಬರದಿರುವುದರಿಂದ ಗ್ರಾ. ಪಂ. ಏನೂ  ಮಾಡಲು ಸಾಧ್ಯವಿಲ್ಲ. ಕಾಜಾಡಿ ಸರಕಾರಿ ಶಾಲೆಯ ಸೊತ್ತುಗಳು ಹಾಳಾಗಬಾರದು ಹಾಗೂ ಬೇರೆಯವರು ಅತಿಕ್ರಮಣ ಮಾಡಬಾರದು ಎನ್ನುವ ದೃಷ್ಟಿಯಲ್ಲಿ ಶಂಕರನಾರಾಯಣಕ್ಕೆ ಮಂಜೂರಾಗಿರುವ ಅಂಬೇಡ್ಕರ್‌ ವಸತಿ ಶಾಲೆಯನ್ನು ಕಾಜಾಡಿ ಶಾಲೆಯಲ್ಲಿ ಮಾಡುವ ಬಗ್ಗೆ ಚಿಂತನೆ ಇದೆ.
– ಸದಾಶಿವ ಶೆಟ್ಟಿ, ಶಂಕರನಾರಾಯಣ ಗ್ರಾ. ಪಂ. ಅಧ್ಯಕ್ಷ

– ಸತೀಶ್‌ ಆಚಾರ್‌ ಉಳ್ಳೂರ್‌

Advertisement

Udayavani is now on Telegram. Click here to join our channel and stay updated with the latest news.

Next