Advertisement

ಕೋವಿಡ್ 19 ಉಪಕರಣ ಖರೀದಿ: ಅವ್ಯವಹಾರ ಆಗಿಲ್ಲ ; ಅಕ್ರಮ ಆರೋಪಕ್ಕೆ ಸಚಿವರ ಉತ್ತರ

02:41 AM Jul 21, 2020 | Hari Prasad |

ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಇದುವರೆಗೆ ಖರೀದಿಸಿರುವ ಉಪಕರಣಗಳ ಮೊತ್ತ 323.60 ಕೋ.ರೂ. ಮಾತ್ರ. 2,220 ಕೋ.ರೂ. ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಡಿಸಿಎಂ ಡಾ| ಅಶ್ವತ್ಥ ನಾರಾಯಣ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಪ್ರಶ್ನಿಸಿದ್ದಾರೆ.

Advertisement

ಕೋವಿಡ್ 19 ಪ್ರಾರಂಭದಲ್ಲಿ ಪರಿಕರಗ‌ಳ ಬೆಲೆ ಹೆಚ್ಚಾಗಿತ್ತು, ಅನಂತರ ಕಡಿಮೆಯಾಗಿದೆ. ಮೊದಲು ಖರೀದಿಸಿದ ದರಕ್ಕೂ ಈಗಿನ ದರಕ್ಕೂ ಹೋಲಿಕೆ ಮಾಡಿ ಆರೋಪ ಮಾಡಲಾಗುತ್ತಿದೆ. ಆದರೆ ಖರೀದಿ ಪಾರದರ್ಶಕವಾಗಿಯೇ ಆಗಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ 290.60 ಕೋ.ರೂ. ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 33 ಕೋಟಿ ರೂ. ಮೊತ್ತದ ಪರಿಕರಗಳನ್ನು ಖರೀದಿಸಲಾಗಿದೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ 2,200 ಕೋ.ರೂ. ಅವ್ಯವಹಾರ ನಡೆದಿದೆ ಎಂದು ಕಪೋಲ ಕಲ್ಪಿತ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖೆ ಅಗತ್ಯವಿಲ್ಲ
ಡಿಸಿಎಂ ಡಾ| ಸಿಎನ್‌. ಅಶ್ವತ್ಥನಾರಾಯಣ ಮಾತ ನಾಡಿ, ಪರಿಕರಗಳ ಅವ್ಯವಹಾರ ಆಗಿಲ್ಲ ಎಂದ ಮೇಲೆ ತನಿಖೆ ಅಗತ್ಯವಿಲ್ಲ. ಏನೇ ದಾಖಲೆ, ಲೆಕ್ಕ ಬೇಕಿದ್ದರೂ ಅಧಿವೇಶನದಲ್ಲಿ ಕೊಡುತ್ತೇವೆ. ಅಲ್ಲಿಯೇ ಚರ್ಚೆ ಆಗಲಿ ಎಂದು ಸವಾಲು ಹಾಕಿದರು.

ಇದುವರೆಗೆ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್‌ ಮಾತ್ರ ಖರೀದಿಸಲಾಗಿದೆ. ಪಿಪಿಇ ಕಿಟ್‌ ಖರೀದಿಗೆ 79.35 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಮಾಸ್ಕ್ ಖರೀದಿ ವಿಚಾರದಲ್ಲೂ ನಿಯಮ ಮೀರಿಲ್ಲ. ರಾಜ್ಯದ ವಿವಿಧೆಡೆ ಮಾಸ್ಕ್ ಖರೀದಿಗಾಗಿ 11.51 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದುವರೆಗೆ 2.65 ಕೋಟಿ ರೂ. ಮೊತ್ತದ ಸ್ಯಾನಿಟೈಸರ್‌ ಖರೀದಿ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದರು.

Advertisement

‘ಅವ್ಯವಹಾರ ಸಾಬೀತುಪಡಿಸಿದರೆ ರಾಜೀನಾಮೆ’
ಖರೀದಿ ಅವ್ಯವಹಾರ ಸಾಬೀತುಪಡಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ಮಾತನಾಡುವ ಭರದಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದ ಅವರು, ಖರೀದಿ ಸಂಬಂಧ ನಾನು ನೀಡಿರುವ ಅಂಕಿ-ಅಂಶಗಳಲ್ಲಿ ಒಂದು ಪದ ಸುಳ್ಳು ಎಂಬುದು ಸಾಬೀತಾದರೆ ಒಂದೇ ಒಂದು ಕ್ಷಣವೂ ಕುರ್ಚಿಯಲ್ಲಿ ಇರುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next