Advertisement

ವಿಕಾಸಾಶ್ರಮ ಮಂಗಳವಾರ ಸಂತೆಗೆ ಇನ್ನಿಲ್ಲ ಗಿಜಿಗಿಜಿ

11:33 AM Jul 08, 2019 | Team Udayavani |

ಶಿರಸಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ವಿಕಾಸಾಶ್ರಮ ಬಯಲಿನಲ್ಲಿ ಮಂಗಳವಾರದ ವಾರದ ಸಂತೆಯಂದು ಇನ್ನು ತರಕಾರಿ, ಹಣ್ಣು ಹಂಪಲು ಮಾರಾಟಕ್ಕೂ, ಖರೀದಿಗೂ ಗಿಜಿ ಗಿಟ್ಟಿಯಿಲ್ಲ.

Advertisement

ಏಕೆಂದರೆ, ಅಭಿವೃದ್ಧಿ ಕಾಮಗಾರಿಯೊಂದು ಬಹುತೇಕ ಪೂರ್ಣವಾಗಿದ್ದು, ನಾಡಿದ್ದು ಮಂಗಳವಾರ ಸಂತೆಗೆ ಬಹುತೇಕ ಬಳಕೆಗೆ ಸಿಗಲಿದೆ.

ಏನಾಗಿತ್ತು ಸಮಸ್ಯೆ?: ಆರೆಂಟು ವರ್ಷಗಳ ಹಿಂದೆ ನಗರದ ಹಳೆ ಬಸ್‌ನಿಲ್ದಾಣ ಬಳಿಯ ಬಿಡಕಿ ಬಯಲು ಹಾಗೂ ಸುತ್ತಲಿನ ರಸ್ತೆ ಮೇಲೆ ಮಂಗಳವಾರದ ಸಂತೆಗೆ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಮಾರಿಕಾಂಬಾ ದೇವಿ ಜಾತ್ರೆ ವೇಳೆಗೆ ಮಾತ್ರ ಬಸ್‌ ನಿಲ್ದಾಣ ಹಾಗೂ ಸಂತೆ ವ್ಯಾಪಾರಸ್ಥರಿಗೆ ಅನುಕೂಲ ಮಾಡಲು ಸ್ಥಳಾಂತರಿಸಲಾಗುತ್ತಿದ್ದ ವಿಕಾಸಾಶ್ರಮದಲ್ಲಿ ಮಂಗಳವಾರದ ಸಂತೆ ಕಾಲಕ್ರಮೇಣ ಕಾಯಂ ಆಗಿತ್ತು.

ಮಳೆಗಾಲ ಬಂತೆಂದರೆ ಮಣ್ಣಿನ ನೆಲದಲ್ಲಿ ಹೊಂಡಗಳು ಬಿದ್ದು ಗಿಜಿಗಿಟ್ಟಿಯೂ ಆಗುತ್ತಿತ್ತು. ತರಕಾರಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಹಾಗೂ ಗ್ರಾಹಕರಿಗೂ ಖರೀದಿಸಲು ಸಮಸ್ಯೆ ಆಗುತ್ತಿತ್ತು. ಎಷ್ಟೊತ್ತಿಗೆ ಇಲ್ಲಿಂದ ಹೋಗುತ್ತೇವಪ್ಪ ಎಂಬಂತೆ ಆಗಿದ್ದವು.

ಯಾರೆಲ್ಲ ಬರ್ತಾರೆ?: ಮಂಗಳವಾರದ ಸಂತೆಗೆ ಹಾನಗಲ್, ಬಂಕಾಪುರ, ಹಾವೇರಿ ಭಾಗದ ರೈತರು, ಸಂತೆ ವರ್ತಕರು ಬರುತ್ತಾರೆ. ಬಹುತೇಕ ಬೆಳೆಗಾರರೇ ಬಂದು ಮಾರಾಟ ಮಾಡುವುದೂ ಇದೆ. ಕೊತ್ತಂಬರಿ, ಸಬ್ಬಸಿಗೆ, ಹರಿವೆ ಸೊಪ್ಪಿನಿಂದ ಮೆಣಸಿನ ತನಕ, ಮೂಲಂಗಿ, ಬೀಟ್ರೂಟ್, ಆಲೂಗಡ್ಡೆ, ತೊಂಡೆಕಾಯಿ, ಹೀರೇಕಾಯಿ, ಬೆಂಡೆಕಾಯಿ, ಸೌತೆಕಾಯಿಯಂತಹ ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ಸುಮಾರು 60 ಜನ ವಿಕಾಸಾಶ್ರಮದ ಸಂತೆ ವರ್ತಕರಿದ್ದಾರೆ. ನಗರಸಭೆ ಇವರಿಂದ ವಾರಕ್ಕೆ ಎರಡುವರೆ ಸಾವಿರ ರೂ. ಕರ ವಸೂಲಿ ಮಾಡುತ್ತದೆ. ಇಲ್ಲಿ ಈವರೆಗೆ ಬೆಳಕಿನ ವ್ಯವಸ್ಥೆ ಬಿಟ್ಟು ಬೇರೇನೂ ಇರಲಿಲ್ಲ.

Advertisement

ಸಮಸ್ಯೆ ನಿವಾರಣೆಗೆ ಯತ್ನ: ನಗರಸಭೆಯು ವಿಕಾಸಾಶ್ರಮದಲ್ಲಿ ಸಂತೆಗೆ ಅವಕಾಶ ಮಾಡಿಕೊಟ್ಟ ಬಳಿಕ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವೇನೋ ಆಯ್ತು. ಆದರೆ, ಮಳೆಗಾಲ ಬಂದರೆ ಗಿಜಿಗುಡುತ್ತಿತ್ತು. ನಗರಸಭೆ ಕರ ವಸೂಲಿ ಮಾಡಿದರೂ ವ್ಯವಸ್ಥೆ ಮಾಡಿರಲಿಲ್ಲ.

ಇದಕ್ಕೆ ಕರಾವಳಿ ಅಭಿವೃದ್ಧಿ ಪ್ರಾಕಾರಕ್ಕೆ ನಗರಸಭೆ ಮನವಿ ಸಲ್ಲಿಸಿತು. ಇದರ ಪರಿಣಾಮ ಅನುದಾನ ಕೂಡ ಮಂಜೂರಿ ಆಯ್ತು. ವಿಕಾಸಾಶ್ರಮ ಬಯಲಿಗೆ ಇಂಟರ್‌ಲಾಕ್‌ ಫೇವರ್ ಅಳವಡಿಕೆಗೆ 24.57 ಲಕ್ಷ ರೂ. ಅನುದಾನ ಬಂತು. ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಣೆ ಆರಂಭಿಸಿತು. 17 ಸಾವಿರ ಚದುರಡಿಗೆ ಇಂಟರ್‌ಲಾಕ್‌ ಫೇವರ್ ಅಳವಡಿಕೆ ಮಾಡಲಾಯಿತು. ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆದಿದ್ದು, ಮುಂದಿನ ಮಂಗಳವಾರದ ವೇಳೆಗೆ ಬಳಕೆಗೆ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು.

ಕಳೆದ ಆರೇಳು ವಾರದಿಂದ ವಿಕಾಸಾಶ್ರಮದ ಹೊರಗಡೆ ರಸ್ತೆ ಅಂಚಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದಷ್ಟು ಬೇಗ ಒಳಗಡೆ ಮಾರಾಟಕ್ಕೆ ಅನುಕೂಲ ಮಾಡಿಕೊಡಲಿ ಎಂದೂ ಈಗಾಗಲೇ ರೈತರು ಆಗ್ರಹಿಸಿದ್ದೂ ಆಗಿದೆ.

ಇನ್ನೂ ಏನಾಗಬೇಕಿದೆ?:
ದನಗಳು ಒಳಗೆ ಬಾರದಂತೆ ಕೌ ಗಾರ್ಡ್‌ ಹಾಕಬೇಕು. ವಿಕಾಸಾಶ್ರಮ ಬಯಲಿನಲ್ಲಿನ ರಂಗಮಂದಿರದ ನಿರ್ವಹಣೆ ಆಗಬೇಕು. ಹಿಂಬದಿ ಕಟ್ಟಡ ಜೀರ್ಣವಾಗಿದ್ದು, ಬಳಕೆಗೆ ಬರುವಂತೆ ನಿರ್ಮಾಣ ಮಾಡಬೇಕು. ಸಹ್ಯಾದ್ರಿ ರಂಗ ಮಂದಿರ ತೆರೆದಿದ್ದು, ಅದರಲ್ಲಿ ಅನೈತಿಕ ಚಟುವಟಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಇಡೀ ಬಯಲನ್ನು ಅಂದವಾಗಿಟ್ಟುಕೊಳ್ಳಬೇಕಿದೆ.

 

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next