ಬೆಳಗ್ಗೆ 8 ಗಂಟೆಗೆ ಪೊಲೀಸ್ ಜೀಪ್ ಬಂದೇ ಬಿಟ್ಟಿತು. ವಾರ್ಡನ್ ಹೇಳಿದಂತೆ ಚಿರತೆಯಂಥ ನಾಯಿಯನ್ನ ಇಬ್ಬರು ಪೊಲೀಸರು ಹಿಡಿದುಕೊಂಡು ಒಳ ಹೊಕ್ಕರು. ಪೊಲೀಸ್ ನಾಯಿ ನಮ್ಮ ಬಳಿ ಬರಬಾರದೆಂದು ಮೊದಲೇ ಯೋಚಿಸಿ, ಒಂದು ಕಲ್ಲಿನ ಗುಡ್ಡೆಯ ಮೇಲೆ ನಿಂತು ಎಲ್ಲವನ್ನೂ ನೋಡುತ್ತಿದ್ದೆವು. ನಮ್ಮ ವಾಸನೆ ಕಂಡು ಹಿಡಿದಂತೆ ಅದು ನಮ್ಮ ಕಡೆ ಚಿರತೆಯಂತೆ ಹಾರಿ, ನಮ್ಮ ಮುಂದೆ ನಿಂತು ಬಿಡುವುದೇ!
ನಾನಾಗ ಒಂಭತ್ತನೇ ತರಗತಿಯಲ್ಲಿದ್ದೆ. ಬ್ಯಾಂಕ್, ನಮ್ಮ ಹಾಸ್ಟೆಲ್‌ಗೆ ಹೊಂದಿಕೊಂಡಂತೆಯೇ ಇತ್ತು. ನಾವು ಮೂರು ಜನ ಸ್ನೇತರು ಪ್ರತಿನಿತ್ಯ ಓದು, ಬರಹಕ್ಕಿಂತ ಹೆಚ್ಚಾಗಿ ಬ್ಯಾಂಕ್‌ನಲ್ಲಿ ನೋಟ್‌ಅನ್ನು ಹೇಗೆ ಪ್ರಿಂಟ್ ಮಾಡ್ತಾರೆ ಎಂಬುದನ್ನ ನೋಡಬೇಕು ಅನ್ನೋ ಮಹಾದಾಸೆಯ ಹಿಂದೆ ಬಿದ್ದಿದ್ವಿ. ಅದನ್ನು ತಿಳಿಯಲಿಕ್ಕಾಗಿಯೇ ಬ್ಯಾಂಕ್‌ನ ಅಟೆಂಡರ್ ಶಿವಣ್ಣನನ್ನು ಬುಕ್ ಮಾಡಿಕೊಂಡಿದ್ದೆವು. ಅದು ಹೇಗೆ ಅಂತೀರಿ? ಅವನಿಗೆ 30ನೇ ನಂಬರ್ ಬೀಡಿಯ ಕಟ್ಟನ್ನ ತಂದು ಕೊಟ್ಟೂ, ಕೊಟ್ಟು ಸ್ನೇಹ ಗಳಿಸಿಕೊಂಡಿದ್ದೆವು. ಆದರೂ, ಆತ ನಮ್ಮನ್ನ ಒಳಗಡೆ ಮಾತ್ರ ಬಿಟ್ಟು ಕೊಂಡಿರಲಿಲ್ಲ. ನಮಗೋ, ಈ ಸಲ ಬಿಡಬಹುದು, ಮುಂದಿನ ಸಲ ಬಿಡಬಹುದು ಅನ್ನೋ ನಂಬಿಕೆ.
ಒಂದು ದಿನ ಬೆಳಗಿನ ಜಾಮಾ ಐದು ಗಂಟೆ ಸಮಯದಲ್ಲಿ ಗೆಳೆಯ ಚನ್ನಬಸವ ನನ್ನನ್ನ ಚಿವುಟಿ ಎಚ್ಚರಗೊಳಿಸಿದ. “ನೋಡು, ಇವತ್ತು ಅಟೆಂಡರ್ ಶಿವಣ್ಣ ಬ್ಯಾಂಕಿನ ಹಿತ್ತಲ ಬಾಗಿಲು ಹಾಕೇ ಇಲ್ಲ. ಇದು ಒಳ್ಳೆ ಅವಕಾಶ ಕಣೋ.. ಬ್ಯಾಂಕ್ ಒಳಗೋಗಿ, ನೋಟ್ ಹೇಗೆ ಪ್ರಿಂಟ್ ಮಾಡ್ತಾರೆ ಅಂತ ಎಲ್ಲಾ ನೋಡಿಕೊಂಡು ಬರೋಣ ಬನ್ರೊ ‘ಎಂದ. ಎಂಥ ಸದಾವಕಾಶ ಅಂದುಕೊಂಡ ನಾವು ಅಲ್ಲಿಯೇ ಇದ್ದ ಬ್ಯಾಟರಿಯನ್ನು ತೆಗೆದುಕೊಂಡು ಮೂವರೂ ಬ್ಯಾಂಕ್ ಅನ್ನು ಹೊಕ್ಕೆವು.
ಅಲ್ಲಿ ನೋಡಿದರೆ, ಕುರ್ಚಿ, ಟೇಬಲ್ ಮತ್ತು ಫೈಲ್‌ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬ್ಯಾಂಕ್ ಅನ್ನು ಇಷ್ಟೊಂದು ಅವ್ಯವಸ್ಥೆಯಾಗಿ ಇಡಲು ಸಾಧ್ಯವಾ? ಅನಿಸಿ ನಮಗೆ ಭಯವಾಯಿತು. ಕಾರಣ ಏನೆಂದರೆ, ಇದು ಕಳ್ಳರ ಕೈಚಳಕವೇ? ಅನ್ನೋ ಅನುಮಾನ ಶುರುವಾಗಿ, ಭಯವೂ ಜೊತೆಯಾಯಿತು. ಒಂದು ಪಕ್ಷ ಕಳ್ಳರು ಹೀಗೆ ಮಾಡಿದ್ದರೆ, ಆಗ ಒಳಗೆ ಬಂದ ನಮ್ಮನ್ನೇ ಕಳ್ಳರು ಅಂದುಕೊಂಡರೆ..ಹೀಗೆ ಏನೇನೋ ಯೋಚನೆಗಳು. ಇವನ್ನೆಲ್ಲಾ ಊಹಿಸಲಾರದ ವಯಸ್ಸೇನೂ ನಮ್ಮದಾಗಿರಲಿಲ್ಲ. ಹೀಗೆ ಭಯ ಪೀಡಿತರಾಗಿಯೇ ಬ್ಯಾಂಕ ಅನ್ನು ಸುತ್ತು ಹಾಕುತ್ತಿರುವಾಗ ಪ್ರಕಾಶನ ಬಾಯಿಂದ ಸತ್ಯ ಹೊರಬಿತ್ತು. “ಪ್ರಿಂಟ್ ಮಾಡಿ ಒಣಗಿ ಹಾಕಿದ ದುಡ್ಡನ್ನೆಲ್ಲಾ ಹಾರಿಸಿಕೊಂಡು ಹೋಗಿದ್ದಾರೆ. ಕಳ್ ನನ್ಮಕ್ಕಳು… ಬನ್ರೊ ಹೋಗೋಣ’ ಅಂದ. ತಕ್ಷಣವೇ ಮೂವರೂ ಓಡಿ ಬಂದು ಹಾಸ್ಟಲ್‌ನಲ್ಲಿ ಮಲಗಿದೆವು.
ಬೆಳಗ್ಗೆ ಬೆಳಗ್ಗೇನೇ “ವಾರ್ಡನ್ ಸಾರ್ ಕರಿತಾ ಇದ್ದಾರೆ. ಎಲ್ಲರೂ ಬರಬೇಕಂತೆ’ ಎಂದು ಹುಡುಗ ಕೂಗು ಹಾಕಿದ. ಆಗಲೂ ಸ್ವಲ್ಪ ಭಯವಾಯಿತು. ರಾತ್ರಿ ನಾವು ಹೋಗಿದ್ದು ವಾರ್ಡನ್‌ಗೆ ಗೊತ್ತಾಯೊ ಏನೋ ಅಂತ. ಅದರೂ, ನಮಗೇನೂ ಗೊತ್ತೇ ಇಲ್ಲ ಎಂಬಂತೆ ಸೋಗಿನಲ್ಲಿ ಹೋಗಿ ಕುಳಿತೆವು. ವಾರ್ಡನ್ ಹೇಳಲು ಶುರುಮಾಡಿದ- “ನೋಡಿ, ರಾತ್ರಿ ಬ್ಯಾಂಕ್‌ನಲ್ಲಿ ಕಳ್ಳತನವಾಗಿದೆ. ಈಗ ಪೊಲೀಸರು ಬರ್ತಾರೆ. ಅವರ ಜೊತೆ ನಾಯಿನೂ ಬರುತ್ತೆ. ಬೆಳಗ್ಗೆ ನಿಮ್ಮಲ್ಲಿ ಯಾರಾದರೂ ಒಳಗಡೆ ಹೋಗಿದ್ರಾ…? ನೀವ್ಯಾರಾದರೂ ಹೋಗಿದ್ದರೆ. ಪೋಲೀಸ್ ನಾಯಿ ನಿಮ್ಮನ್ನೇ ಬಂದು ಹಿಡಿದುಕೊಂಡು ಬಿಡುತ್ತೆ. ಆಗ ನೀವೇ ಕಳ್ಳರಾಗಿ ಬಿಡ್ತೀರಿ’ ಎಂದರು. ಭಯಗೊಂಡ ನಾವು ಊರಿಗೆ ಹೋಗಲು ನಿರ್ಧರಿಸಿದೆವು. ಆದರೆ, ವಾರ್ಡನ್ ಬಿಡಲಿಲ್ಲ.
ಬೆಳಗ್ಗೆ 8 ಗಂಟೆಗೆ ಪೊಲೀಸ್ ಜೀಪ್ ಬಂದೇ ಬಿಟ್ಟಿತು. ವಾರ್ಡನ್ ಹೇಳಿದಂತೆ ಚಿರತೆಯಂಥ ನಾಯಿಯನ್ನ ಇಬ್ಬರು ಪೊಲೀಸರು ಹಿಡಿದುಕೊಂಡು ಒಳ ಹೊಕ್ಕರು. ಪೊಲೀಸ್ ನಾಯಿ ನಮ್ಮ ಬಳಿ ಬರಬಾರದೆಂದು ಮೊದಲೇ ಯೋಚಿಸಿ, ಒಂದು ಕಲ್ಲಿನ ಗುಡ್ಡೆಯ ಮೇಲೆ ನಿಂತು ಎಲ್ಲವನ್ನೂ ನೋಡುತ್ತಿದ್ದೆವು. ನಮ್ಮ ವಾಸನೆ ಕಂಡು ಹಿಡಿದಂತೆ ಅದು ನಮ್ಮ ಕಡೆ ಚಿರತೆಯಂತೆ ಹಾರಿ, ನಮ್ಮ ಮುಂದೆ ನಿಂತು ಬಿಡುವುದೇ! ಜೋರಾಗಿ ಅಳಲು ಶುರು ಮಾಡಿದೆವು. ಇನ್ನೇನು ನಮ್ಮನ್ನು ಹಿಡಿದೇಬಿಟ್ಟಿತು ಎನ್ನುವಷ್ಟರಲ್ಲೇ ನಮ್ಮನ್ನ ದಾಟಿ ಮುಂದೆ ಹೋಯಿತು. ಪಾಪ, ಅದಕ್ಕೂ ಸಹ ನಮ್ಮ ಬಗ್ಗೆ ಕನಿಕರ ಉಂಟಾಗಿರಬೇಕು. ಜೀವ ಅಂಗೈಗೆ ಬಂದಂತಾಯಿತು. ಆದಿನ ನಡೆದ ಘಟನೆಯಿಂದ ಜ್ವರ ಅಮರಿಕೊಂಡಿತು. ಒಂದು ವಾರವಾದರೂ ಬಿಟ್ಟಿರಲಿಲ್ಲ. ಅವತ್ತೇ ಕೊನೆ, ಆ ಬ್ಯಾಂಕ್‌ನ ಸಹವಾಸಕ್ಕೆ ಹೋಗಲೇ ಇಲ್ಲ.
ವೀರೇಶ್ ಮಾಡ್ಲಾಕನಹಳ್ಳಿ