ಬೆಳಗಾವಿ: ಮಟನ್ ಎಂದರೆ ಮಾಂಸ ಪ್ರಿಯರ ಬಾಯಲ್ಲಿ ನೀರು ಬರುವುದು ಖಚಿತ. ಇಂಥದರಲ್ಲಿ ಮಟನ್ ದರ ಗಗನಕ್ಕೇರುತ್ತಿದೆ ಎಂಬ ಆತಂಕದಲ್ಲಿದ್ದ ಮಾಂಸ ಪ್ರಿಯರಿಗೆ ಸಿಹಿ ಸುದ್ದಿಯೊಂದು ಬಂದಿದೆ.
ಕೆ.ಜಿ. ಮಟನ್ ಗೆ 600 ರೂ. ದರ ನಿರ್ಧರಿಸಿದ್ದ ಮಟನ್ ವ್ಯಾಪಾರಸ್ಥರು ಈ ನಿರ್ಣಯದಿಂದ ಹಿಂದಕ್ಕೆ ಸರಿದು 540 ರೂ. ದರ ನಿಗದಿಗೊಳಿಸಿದ್ದಾರೆ. ನಗರದಲ್ಲಿರುವ ಸುಮಾರು 175 ಅಂಗಡಿಗಳಲ್ಲಿ ಕೆ.ಜಿ. ಮಟನ್ ದರ 600 ರೂ.ಗೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಮಾಂಸ ಪ್ರಿಯರು ಇದರಿಂದ ಆಂತಕಕ್ಕೀಡಾಗಿದ್ದರು. ಗ್ರಾಹಕರ ಹಿತಾಸಕ್ತಿ ಗಣನೆಗೆ ತೆಗೆದುಕೊಂಡ ವ್ಯಾಪಾರಸ್ಥರು 540 ರೂ. ದರ ನಿಗದಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಟನ್ ದರ ಎಷ್ಟೆಷ್ಟು?: ಬೆಳಗಾವಿಯಲ್ಲಿ ನಿತ್ಯ ನೂರಾರು ಕ್ವಿಂಟಲ್‌ಗಳಷ್ಟು ಮಟನ್ ವ್ಯಾಪಾರ ಆಗುತ್ತದೆ. ಮಟನ್ ತಿನ್ನುವವರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಿದೆ. ರವಿವಾರ, ಬುಧವಾರವಂತೂ ಗ್ರಾಹಕರ ಸಂಖ್ಯೆ ದ್ವಿಗುಣವಾಗುತ್ತದೆ. ಬೆಳಗಾವಿಯಲ್ಲಿ ಕೆ.ಜಿ.ಗೆ 460, 480ರ ಆಸುಪಾಸಿನಲ್ಲಿಯೇ ಮಟನ್ ದರ ಇತ್ತು. ಇತ್ತೀಚಿನ ಕೆಲವು ದಿನಗಳಿಂದ ಈ ದರ 500ರ ಗಡಿ ದಾಟಿತ್ತು. ಈಗ 540 ರೂ. ದರ ನಿಗದಿಪಡಿಸಿದ್ದು, ಕೊಬ್ಬು(ಫ್ಯಾಟ್) ಹಾಗೂ ಲಿವರ್ ಇಲ್ಲದ ಮಟನ್‌ಗೆ 600 ರೂ. ದರ ನಿಗದಿಗೊಳಿಸಿದೆ. ಬೆಳಗಾವಿ ನಗರದ ಮಟನ್ ವ್ಯಾಪಾರಸ್ಥರು ಕುರಿ, ಮೇಕೆಗಳನ್ನು ಖರೀದಿಸಲು ನಿತ್ಯ ಅನೇಕ ಸಂತೆಗಳನ್ನು ಸಂಚರಿಸುತ್ತಾರೆ. ಮುಧೋಳ, ಬಸವನ ಬಾಗೇವಾಡಿ, ಬದಾಮಿ, ಕೇರೂರ, ಅಮ್ಮಿನಬಾವಿ, ಯರಗಟ್ಟಿ, ಗೋಕಾಕ, ಕಿತ್ತೂರು, ಗೋಕಾಕ ಸೇರಿ ಅನೇಕ ಸಂತೆಗಳಿಗೆ ಹೋಗಿ ಕುರಿ, ಮೇಕೆಗಳನ್ನು ಖರೀದಿಸುತ್ತಾರೆ. ಈ ಸಂತೆಗಳಲ್ಲಿ ಬೆಳಗಾವಿ ಜಿಲ್ಲೆಯಯವರಷ್ಟೇ ಅಲ್ಲದೇ ವಿವಿಧ ರಾಜ್ಯಗಳ ವ್ಯಾಪಾರಸ್ಥರು ಬಂದು ಖರೀದಿ ಮಾಡುತ್ತಿರುವುದರಿಂದ ಬೆಳಗಾವಿ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ.
ಸ್ಥಳೀಯ ವ್ಯಾಪಾರಸ್ಥರಿಗೆ ಸಮಸ್ಯೆ: ಗೋವಾ, ಚೆನ್ನೈ, ಬೆಂಗಳೂರು, ಮೈಸೂರು, ಹಾಸನ, ಮಡಿಕೇರಿ, ರಾಮನಗರ ಭಾಗದ ವ್ಯಾಪಾರಸ್ಥರು ಕುರಿ, ಮೇಕೆ ಖರೀದಿಸಲು ನಮ್ಮ ಭಾಗಕ್ಕೆ ಬರುತ್ತಿರುತ್ತಾರೆ. ಅಲ್ಲಿ ಕೆ.ಜಿ. ಮಟನ್ ದರ 600-650ರ ವರೆಗೂ ಇದೆ. ಹೀಗಾಗಿ ಅವರ ದರಕ್ಕೆ ತಕ್ಕಂತೆ ಇಲ್ಲಿ ಕುರಿ, ಮೇಕೆಗಳನ್ನು ಖರೀದಿ ಮಾಡುತ್ತಿರುವುದರಿಂದ
ಇಲ್ಲಿಯ ಮಟನ್ ದರಕ್ಕೆ ಮೇಕೆಗಳು ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಳವಾಗುತ್ತಿದೆ. ಈ ಸಲ ರಾಜ್ಯಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಬಂದು ಎಷ್ಟೋ ಕುರಿ, ಮೇಕೆಗಳು ಮೃತಪಟ್ಟಿವೆ. ಇದ್ದ ಜಾನುವಾರುಗಳಿಗೂ ಮೇವು ಇಲ್ಲದಂತಾಗಿದೆ. ಕೇವಲ ನೀರು ಕುಡಿದು ಕುರಿ, ಮೇಕೆಗಳು ಬದುಕಲು ಸಾಧ್ಯವಿಲ್ಲ.
ಹೀಗಾಗಿ ಕುರಿಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದರಿಂದ ಸಂತೆಗಳಲ್ಲಿ ಪ್ರಮಾಣ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಿಂತೆಲ್ಲ ದರ ಮುಗಿಲು ಮುಟ್ಟಿದೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಕುರಿ, ಮೇಕೆಗಳ ಚರ್ಮದ ದರದಿಂದ ಮಟನ್ ವ್ಯಾಪಾರಸ್ಥರು ಖುಷಿ ಆಗಿದ್ದರು. ಜಿಎಸ್‌ಟಿ ಹೊಡೆತದಿಂದಾಗಿ ಚರ್ಮದ ವ್ಯಾಪಾರ ನೆಲ ಕಚ್ಚಿದೆ. ಹೀಗಾಗಿ ಈಗ ಚರ್ಮವೊಂದಕ್ಕೆ ಕೇವಲ 10-20 ರೂ. ದರ ಆಗಿದ್ದರಿಂದ ಇದು ಕೂಡ ಮಟನ್ ದರ ಹೆಚ್ಚಲು ಪ್ರಮುಖ ಕಾರಣವಾಗಿದೆ.
ಬೆಳಗಾವಿಯಲ್ಲಿ ಗುಣಮಟ್ಟದ ಮಟನ್ ಸಿಗುತ್ತಿದೆ. ಇಲ್ಲಿಯ ಮಟನ್ ತಿನ್ನಲು ಬಹಳ ಜನ ಬರುತ್ತಾರೆ. ದಿನದಿನಕ್ಕೂ ಕುರಿ, ಮೇಕೆಗಳ ದರ ಹೆಚ್ಚಾಗುತ್ತಿರುವುದರಿಂದ ಅನಿವಾರ್ಯವಾಗಿ ಈಗ ದರವನ್ನು 540 ರೂ. ಮಾಡಲಾಗಿದೆ. ಗ್ರಾಹಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಮಟನ್ ಖರೀದಿಸಬೇಕು. –
ಖಾಜಾ ದರ್ಗಾವಾಲೆ, ಸಂಘದ ಪದಾಧಿಕಾರಿ.
-ಭೈರೋಬಾ ಕಾಂಬಳೆ