Advertisement

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕರ ದೃಢ ಮಾತು

04:37 AM Jul 14, 2019 | Lakshmi GovindaRaj |

ಯಲಹಂಕ: ಬಿಜೆಪಿಯ ಕೆಲ ಶಾಸಕರು ಮೈತ್ರಿ ಸರ್ಕಾರದ ಉಳಿವಿಗೆ ನೆರವಾಗಲಿದ್ದಾರೆಂಬ ಮಾತುಗಳನ್ನು ಬಿಜೆಪಿ ಶಾಸಕರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

Advertisement

ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚಿಸುವುದಾಗಿ ಪ್ರಕಟಿಸುತ್ತಿದ್ದಂತೆ ಬಿಜೆಪಿಯ ಕೆಲ ಶಾಸಕರು ಸೂಕ್ತ ಸಂದರ್ಭದಲ್ಲಿ ಸದನಕ್ಕೆ ಗೈರಾಗಿ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸಲು ನೆರವಾಗಲಿದ್ದಾರೆಂಬ ಮಾತುಗಳು ಕೇಳಿ ಬಂದಿವೆ. ಆದರೆ, ರಮಡಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರು ಇದನ್ನು ಅಲ್ಲಗಳೆದಿದ್ದಾರೆ.

ಯಾರೂ ಸಂಪರ್ಕಿಸಿಲ್ಲ: ಯಾವ ಪಕ್ಷದ ಮುಖಂಡರೂ ನನ್ನನ್ನು ಸಂಪರ್ಕಿಸಿಲ್ಲ. ಇಂತಹ ರಾಜಕೀಯ ಸನ್ನಿವೇಶವಿದ್ದಾಗ ಗೊಂದಲ ಸೃಷ್ಟಿಸಲು ಅನ್ಯ ಪಕ್ಷದವರು ಈ ರೀತಿ ಹುನ್ನಾರ ಮಾಡುತ್ತಾರೆ. ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಈ ರೀತಿಯ ಗೊಂದಲ ಏಕೆ ಸೃಷ್ಟಿಯಾಗುತ್ತಿದೆಯೋ ಗೊತ್ತಿಲ್ಲ.
-ಗುಂಡ್ಲುಪೇಟೆ ಶಾಸಕ ನಿರಂಜನ್‌ ಕುಮಾರ್‌

ಗೊಂದಲಕ್ಕೀಡು ಮಾಡುವ ಪ್ರಯತ್ನ: ಮೈತ್ರಿ ಪಕ್ಷದವರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸುತ್ತಿದ್ದು, ಕ್ಷೇತ್ರದ ಮತದಾರರು ಮತ್ತು ನಾಯಕರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನ ನಡೆದಿದೆ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಎರಡು ಭಾರಿ ಸ್ವತಂತ್ರವಾಗಿ ಗೆದ್ದು ಬಂದಿದ್ದೇನೆ. ಈ ಬಾರಿ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪನವರು ನನಗೆ ಟಿಕೆಟ್‌ ನೀಡಿ ಗೆಲ್ಲಿಸಿದ್ದಾರೆ. ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ.
-ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌

ಕಾನೂನಿನ ಮೊರೆ ಹೋಗುವೆ: ಯಾವುದೇ ಪಕ್ಷದವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಅದಕ್ಕೆ ಅವಕಾಶ ಕೂಡ ನೀಡುವುದಿಲ್ಲ. ನಮ್ಮ ತಂದೆ 40 ವರ್ಷ ಕಾಂಗ್ರೆಸ್‌ನಲ್ಲಿ ದುಡಿದರೂ ಆ ಪಕ್ಷದವರು ಅವರಿಗೆ ಟಿಕೆಟ್‌ ನೀಡಲಿಲ್ಲ. ಹೀಗಿರುವಾಗ ನಾನು ಆ ಪಕ್ಷ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾರೋ ವದಂತಿ ಹಬ್ಬಿಸಿದ್ದಾರೆ. ವಿನಾಕಾರಣ ನನ್ನ ಹೆಸರನ್ನು ಪ್ರಸ್ತಾಪಿಸಿದರೆ ಕಾನೂನಿನ ಮೊರೆ ಹೋಗುತ್ತೇನೆ.
-ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌

ಭವಿಷ್ಯದೊಂದಿಗೆ ಆಟವಾಡಬೇಡಿ: ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ನಂಬಿಕೆ ಇದೆ. ನನಗೆ ಕಾರ್ಯಕರ್ತರಲ್ಲಿ ವಿಶ್ವಾಸವಿದೆ. ಪಕ್ಷ ಬಿಡುವ ಪ್ರಶ್ನೆ ಇಲ್ಲ. ಸುಳ್ಳು ಸುದ್ದಿ ಹಬ್ಬಿಸಿ ನನ್ನ ಭವಿಷ್ಯದೊಂದಿಗೆ ಆಟವಾಡಬೇಡಿ.
-ಸುರಪುರ ಶಾಸಕ ರಾಜೂಗೌಡ

Advertisement

ಬಿಎಸ್‌ವೈ ಜತೆಗಿರುವೆ: ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು ನನ್ನ, ನನ್ನ ಪಕ್ಷ ಹಾಗೂ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರ ಹೆಸರು ಕೆಡಿಸಲು ಇಂತಹ ಕೆಲಸ ಮಾಡುತ್ತಿದ್ದಾರೆ. ಪ್ರಪಂಚ ಮುಳುಗಿದರೂ ಬಿಜೆಪಿ ಮತ್ತು ಯಡಿಯೂರಪ್ಪನವರ ಜತೆಯಲ್ಲೇ ಇರುತ್ತೇನೆ.
-ಕನಕಗಿರಿ ಶಾಸಕ ಬಸವರಾಜ ದಡೇಸಗೂರ್‌

ಬಿಎಸ್‌ವೈ ನಮ್ಮ ನಾಯಕರು: ಮುಳುಗುವ ದೋಣಿಯೊಳಗೆ ನಾವೇಕೆ ಕಾಲಿಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷರಾದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗುತ್ತದೆ. ಪಕ್ಷಾಂತರದ ಬಗ್ಗೆ ನಾನೆಂದೂ ಯೋಚಿಸಿಲ್ಲ. ಯಡಿಯೂರಪ್ಪನವರೇ ನಮ್ಮ ನಾಯಕರು.
-ಕಡೂರು ಶಾಸಕ ಮಸಾಲೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next