ಮೈಸೂರು: ರಾಜ್ಯಸಭೆ, ಪರಿಷತ್ ಚುನಾವಣೆ ಇರುವುದರಿಂದ ಶಾಸಕರು ಅವರ ಭಾಗಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಡ ಹೇರುವುಸು ಸಾಮಾನ್ಯ. ಇದರ ಹೊರತಾಗಿ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಅಲ್ಲದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ 5 ನಾಮ ನಿರ್ದೇಶನ ಸ್ಥಾನ ಸೇರಿದಂತೆ 16 ವಿಧಾನ ಪರಿಷತ್ ಸ್ಥಾನಗಳು ಖಾಲಿಯಾಗಲಿವೆ. 4 ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷದ ಶಾಸಕರು, ಸಂಸದರು ಸಭೆ ಮಾಡಿ ತಮ್ಮ ಭಾಗಕ್ಕೆ ಮತ್ತು ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನನ್ನ ಮೇಲೂ ಇಂತಹ ಒತ್ತಡ ಬರುತ್ತಿದೆ.
ಹೀಗೆ ಅವರವರ ಭಾಗಕ್ಕೆ ಅವಕಾಶ ಕೇಳುತ್ತಿದ್ದಾರೆಯೇ ಹೊರತು ಪಕ್ಷ ವಿರೋಧಿ ಸಭೆ ಮಾಡಿಲ್ಲ ಎಂದರು. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 5 ನಾಮ ನಿರ್ದೇಶನ ಸ್ಥಾನಕ್ಕೆ ನಾಮಕರಣ ಮಾಡುವ ಪರಮಾಧಿಕಾರವನ್ನು ಸಿಎಂಗೆ ಬಿಡಲಾಗಿದೆ. ನಮ್ಮೊಂದಿಗೆ ಬಂದವರಲ್ಲಿ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜು, ನಾಗೇಶ್, ಮುನಿರತ್ನ, ಪ್ರಕಾಶ್ ಗೌಡ ಪಾಟೀಲ್ ಇದ್ದಾರೆ.
ಈ ಪೈಕಿ ಮುನಿರತ್ಮ ಅವರ ಸಮಸ್ಯೆ ಚುನಾವಣಾ ಆಯೋಗದಲ್ಲಿ ಬಗೆಹರಿದಿದೆ. ಪ್ರತಾಪ ಗೌಡ ಪಾಟೀಲ್ ವಿರುದದ ಪ್ರಕರಣ ಕೂಡ ಇತ್ಯರ್ಥವಾಗಿದೆ. ಇವರಿಬ್ಬರೂ ಚುನಾವಣೆಯಲ್ಲಿ ಗೆದ್ದು ಬರುತ್ತಾರೆ. ಇನ್ನುಳಿದ ಮೂರು ಮಂದಿಯ ನೇಮಕ ನಡೆಯಬೇಕಿದೆ. ಆ ಮೂವರೊಂದಿಗೆ ನಾವೂ ಇದ್ದೇವೆ. ಅವರ ಪರವಾಗಿ ನಿಲ್ಲುವುದರಲ್ಲಿ ತಪ್ಪಿಲ್ಲ, ಅವರಿಗೂ ಅಧಿಕಾರ ಸಿಗಬೇಕು. ನಮ್ಮದು ಶಿಸ್ತಿನ ಪಕ್ಷ, ಸಭೆ ನಡೆಸಿದ್ದನ್ನು ಭಿನ್ನಮತ ಎಂದು ಹೇಳಲು ಆಗುವುದಿಲ್ಲ ಎಂದರು.
ಬಿಜೆಪಿ ಪಕ್ಷ ಸುಭದ್ರ: ನಮ್ಮ ಪಕ್ಷಕ್ಕೆ ಬಹುಮತ ಇದೆ. ಬಿಎಸ್‌ವೈ ಅವರೇ ನಮ್ಮ ಸಿಎಂ. ಬಿಜೆಪಿ ಬಹುಮತ ಹೊಂದಿದ್ದು, ಸುಭದ್ರವಾಗಿದೆ. ಈ ವೇಳೆ ಬೇರೆ ಪಕ್ಷದಿಂದ ಕರೆತರುವ ಅವಶ್ಯವಿಲ್ಲ. ಎಲ್ಲದಕ್ಕಿಂತಲೂ ಮಿಗಿಲಾಗಿ ಈ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.