ಹುಬ್ಬಳ್ಳಿ: ನನ್ನ ಕ್ಷೇತ್ರದಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ಯಾವುದೇ ಅಡ್ಡಿ ಮಾಡಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಯಾವುದೇ ಧಾರ್ಮಿಕ ಕೇಂದ್ರಗಳಿದ್ದರೂ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಲಿಡ್ಕರ್ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿಕ್ರಮಣಕ್ಕೆ ನಾನೆಂದೂ ಬೆಂಬಲ ನೀಡಿಲ್ಲ. ಜನರಿಗೆ ಅನಾನುಕೂಲವಾಗುತ್ತಿದ್ದರೆ ಯಾವುದೇ ಹಿತಾಸಕ್ತಿ ನೋಡದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸುಪ್ರೀಂ ಕೋರ್ಟ್ ಆದೇಶ ಇರುವಾಗ ಅಧಿಕಾರಿಗಳು ನನ್ನ ಸೂಚನೆ ಪಾಲನೆ ಮಾಡುತ್ತಾರೆಯೇ. ಆದೇಶ ಮುಂದಿಟ್ಟುಕೊಂಡು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಲಿ. ಅಬ್ಬಯ್ಯ ಅತಿಕ್ರಮಣದಾರರ ಪರವಾಗಿ ನಿಂತಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ನನ್ನ ಕ್ಷೇತ್ರದ ಮತದಾರರು ಎನ್ನುವ ಕಾರಣಕ್ಕೆ ಅತಿಕ್ರಮಣದ ಪರವಾಗಿ ನಿಂತಿಲ್ಲ. ಹಿಂದೆ ಬಂಕಾಪುರ ಬಳಿಯ ದರ್ಗಾ ತೆರವಿನ ವಿಚಾರದಲ್ಲಿ ಹಲವು ಸಭೆ ಮಾಡಿ ಒಪ್ಪಿಸಿದ್ದೇನೆ. ಅಲ್ಲಲ್ಲಿ ಒಂದಿಷ್ಟು ಮಾಲೀಕತ್ವದ ಜಾಗ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕೆ ಸುಮಾರು 50 ಕೋಟಿ ರೂ. ತಗುಲಬಹುದು ಎಂದು ಅಂದಾಜಿಸಲಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಭಾಗದಲ್ಲಿ ಆಗಿರುವ ಒತ್ತುವರಿಯಿಂದ ಮಳೆಗಾಲದಲ್ಲಿ ಇಂತಹ ಸಮಸ್ಯೆಗಳು ಆಗುತ್ತಿರಬಹುದು. ಇಂತಹವುಗಳನ್ನು ಗುರುತಿಸಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಹು-ಧಾ ಜನಪ್ರತಿನಿಧಿಗಳು ಸಭೆಗೆ ಮಾತ್ರ ಸೀಮಿತ ಎನ್ನುವ ಮನಸ್ಥಿತಿ ಅಧಿಕಾರಿಗಳಲ್ಲಿದೆ. ಪ್ರತೀ ವರ್ಷವೂ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವಾಗಬೇಕಿದೆ ಎಂದು ಪ್ರಸಾದ ಹೇಳಿದರು. ಇದೀಗ ಕ್ರಮ ಕೈಗೊಳ್ಳುವುದಾದರೆ ಎಲ್ಲ ವಲಯ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ಪಾಲಿಕೆ ಆಡಳಿತ ವೈಫಲ್ಯ ಪ್ರಸ್ತಾಪಿಸಿದರು.