Advertisement

ಅತೃಪ್ತಿಯ ಪ್ರಶ್ನೆಯೇ ಇಲ್ಲ: ಡಿಸಿಎಂ

12:28 AM Mar 08, 2020 | Sriram |

ಬೆಂಗಳೂರು: ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್‌ ಬಗ್ಗೆ ಅತೃಪ್ತಿಯ ಪ್ರಶ್ನೆಯೇ ಇಲ್ಲ. ಕೆಲವರು ಹೆಚ್ಚಿನ ಅನುದಾನ ಕೇಳಿರಬಹುದು. ಹಾಗೆಂದು ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಒಡಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಶನಿವಾರ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಆಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಲಾಖಾವಾರು ಅನುದಾನದ ಜತೆಗೆ ನೀರಾವರಿ ಕ್ಷೇತ್ರಕ್ಕೂ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಈ ಬಗ್ಗೆ ಬೇಸರವಿದ್ದವರು ಮುಖ್ಯಮಂತ್ರಿಗಳೊಂದಿಗೆ ಮತ್ತು ಪಕ್ಷದ ಚೌಕಟ್ಟಿನೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಕೆಲವರು ಪಕ್ಷದಲ್ಲಿದ್ದುಕೊಂಡೇ ಸರಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೆಲ್ಲ ಊಹಾಪೋಹ. ಪಕ್ಷದಲ್ಲಿ ಯಾರೂ ಇಂಥ ಸಾಹಸಕ್ಕೆ ಕೈಹಾಕಿಲ್ಲ. ಒಂದು ಮನೆ ಎಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಅವೆಲ್ಲಾ ಸರಿಯಾಗುತ್ತವೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಅಂದರೆ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಶಿಲಾನ್ಯಾಸ ನೆರವೇರಿಸಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಯಾವುದೇ ಹೊಸ ಯೋಜನೆ ಕೈಗೆತ್ತಿಕೊಂಡಾಗ ಆಕ್ಷೇಪ ಸಹಜ. ಅದೇ ರೀತಿ ಎತ್ತಿನಹೊಳೆ ಯೋಜನೆಗೂ ವಿರೋಧ ವ್ಯಕ್ತವಾಗಿದೆ. ಆದರೆ ಬಯಲುಸೀಮೆ ಜನರಿಗೆ ಎತ್ತಿನಹೊಳೆ ನೀರು ತಲುಪಿದಾಗ ಸಂತೋಷಪಡುತ್ತಾರೆ ಎಂದು ಹೇಳಿದರು.

ಸಂಪುಟ ವಿಸ್ತರಣೆ
ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ರಾದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಸುತ್ತಿನಲ್ಲಿ ಸಂಪುಟ ವಿಸ್ತರಿಸಲು ನಿರ್ಧರಿಸಿದ್ದಾರೆ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಖಾಲಿಯಿರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.
-ಡಾ| ಸಿ.ಎನ್‌. ಅಶ್ವತ್ಥನಾರಾಯಣ,
ಉಪ ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next