ವಾಡಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನವೂ ಪಾವತಿಸಲಾಗುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬ್ಲೀಚಿಂಗ್ ಫೌಡರ್ ಸೇರಿದಂತೆ ಇತರ ಬಳಕೆ ವಸ್ತುಗಳ ಖರೀದಿ ಲೆಕ್ಕಪತ್ರ ಇದೆ. ಇನ್ನು ಪೈಪ್ ದುರಸ್ತಿ, ಯಂತ್ರಗಳ ರಿಪೇರಿ ಹೆಸರಿನಲ್ಲಿ ಬರೆದಿಡಲಾದ ಬಿಲ್ಗಳ ಕಡತ ಕಚೇರಿಯಲ್ಲಿಡಲು ಜಾಗವಿಲ್ಲದಷ್ಟಿವೆ. ಇಷ್ಟಾಗಿಯೂ ಜನರಿಗೆ ಹನಿ ಶುದ್ಧ ನೀರು ಸಿಗುವುದಿಲ್ಲ. ವಾಡಿ ಜನರ ಪಾಲಿಗೆ ರಾಡಿ ನೀರೇ ಗತಿ ಎಂಬಂತಾಗಿದೆ!
ಹೌದು, ಮಿನಿ ಮುಂಬೈ ಎಂದು ಕರೆಯಿಸಿಕೊಳ್ಳುವ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಜನರಿಗೆ ಶುದ್ಧೀಕರಿಸದ ಕಲುಷಿತ ನೀರನ್ನೇ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಜನರ ಆರೋಗ್ಯದ ಮೂಲವೇ ಕುಡಿಯುವ ನೀರು ಮತ್ತು ತಿನ್ನುವ ಆಹಾರ. ಕುಡಿಯಲು ಶುದ್ಧ ನೀರು ಕೇಳುವುದು ಜನರ ಮೂಲಭೂತ ಹಕ್ಕು. ಪ್ರತಿ ಬಡಾವಣೆಗೂ ನೀರು ಸರಬರಾಜು ಮಾಡುತ್ತಿರುವ ಸ್ಥಳೀಯ ಪುರಸಭೆ ಆಡಳಿತ, ಅಶುದ್ಧ ನೀರನ್ನೇ ಶುದ್ಧ ನೀರೆಂದು ನಂಬಿಸಿ ವಂಚಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಈ ಮೊದಲು ಮಳೆಯಿಂದ ಹರಿದು ಬಂದ ನದಿ ನೀರನ್ನೇ ನೇರವಾಗಿ ಜನರಿಗೆ ತಲುಪಿಸಲಾಗುತ್ತಿತ್ತು. ಈಗ ಬೆಣ್ಣೆತೋರಾ ಜಲಾಶಯದಲ್ಲಿ ವರ್ಷಾನುಗಟ್ಟಲೆ ನಿಂತು ಹಸಿರು ಪಾಚಿಗಟ್ಟಿದ ಕಲುಷಿತ ನೀರನ್ನೇ ಜನರಿಗೆ ಪೂರೈಸಲಾಗುತ್ತಿದೆ. ನಳಗಳಿಂದ ಬರುವ ನೀರು ವಾಸನೆ ಬರುತ್ತಿದೆ. ನೀರಿನ ಬಣ್ಣ ಬದಲಾಗಿದೆ. ಕೊಳಕು ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯಲು ನೀರು ಯೋಗ್ಯವಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಕಲುಷಿತ ರಾಡಿ ನೀರು ಸೇವಿಸಿ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ವಾರ್ಡ್ 23ರ ಇಂದ್ರಾ ನಗರದ ಸಿಂಡಿಕೇಟ್ ನಿವಾಸಿಗಳು ಕಲ್ಲು ಗಣಿಯಲ್ಲಿ ನಿಂತ ನೀರು ಹೊತ್ತು ತರುತ್ತಿದ್ದಾರೆ. ಸೂಕ್ಷ್ತ್ರ ಜೀವಿಗಳು ನೀರಿನ ಮೂಲಕ ದೇಹ ಸೇರಿಕೊಂಡು ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ. ಪುರಸಭೆ ಪೂರೈಸುವ ನಳಗಳ ನೀರನ್ನು ಬಳಕೆಗೆ ಮತ್ತು ಖಾಸಗಿ ನೀರು ಶುದ್ಧೀಕರಣ ಘಟಕಗಳಿಂದ ಕುಡಿಯಲು ನೀರು ಖರೀದಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಪುರಸಭೆಯ ನೀರು ಶುದ್ಧೀಕರಣ ಘಟಕ ಕೇವಲ ನಾಮಕೇವಾಸ್ತೆ ಎಂಬಂತಿದೆ. ಅದು ಕೇಲವ ಖರ್ಚು ಲೆಕ್ಕ ಬರೆಯಲು ಮಾತ್ರ ಚಾಲನೆಯಲ್ಲಿದೆ ಎಂದು ನಿವಾಸಿಗಳು ಶಾಪ ಹಾಕುತ್ತಿದ್ದಾರೆ.
•ಮಡಿವಾಳಪ್ಪ ಹೇರೂರ