Advertisement

ಖರೀದಿ ಕೇಂದ್ರವೂ ಇಲ್ಲ , ಬೆಂಬಲ ಬೆಲೆಯೂ ಇಲ್ಲ

01:49 AM Nov 11, 2021 | Team Udayavani |

ಕೋಟ: ಕರಾವಳಿಯಲ್ಲಿ ಭತ್ತದ ಕಟಾವು ಶೇ.40 ರಷ್ಟು ಮುಗಿದಿದ್ದು, ಇನ್ನೂ ಬೆಂಬಲ ಬೆಲೆ ಘೋಷಣೆ ಯಾಗದಿರುವುದು ಮತ್ತು ಭತ್ತ ಖರೀದಿ ಕೇಂದ್ರ ಸ್ಥಾಪನೆ ಯಾಗದಿರುವುದು ರೈತರ ಕಟು ಟೀಕೆಗೆ ಗುರಿಯಾಗಿದೆ.

Advertisement

ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳ ಆಶ್ವಾಸನೆ ಈಡೇರದಿರುವುದು, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ಕಾದು ನೋಡುವ ನೀತಿಯ ಪರಿಣಾಮ ಈ ಬಾರಿಯೂ ಕರಾವಳಿಯ ರೈತರು ಕಡಿಮೆ ಬೆಲೆಗೆ ಭತ್ತವನ್ನು ಖಾಸಗಿ ಗಿರಣಿಗಳಿಗೆ ಮಾರಿ ಕೈಸುಟ್ಟುಕೊಳ್ಳುವಂತಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಬೆಂಬಲ ಬೆಲೆ ಕುರಿತು ಮುಖ್ಯ ಮಂತ್ರಿ ಯೊಂದಿಗೆ ಸಭೆ ನಡೆಸುವ ಬಗ್ಗೆ ಇನ್ನೂ ಆಲೋಚಿಸುತ್ತಿದ್ದಾರೆ. ಕೃಷಿ ಇಲಾಖೆ ಭತ್ತ ಖರೀದಿ ಕೇಂದ್ರದ ಪ್ರಸ್ತಾವನೆ ಕಳುಹಿಸಿ ಸುಮ್ಮನಿದೆ. ಭೂಮಿ ಹಡಿಲು ಬಿಟ್ಟರೆ ವಶಪಡಿಸಿಕೊಳ್ಳಬೇಕಾದೀತು ಎಂದು ಆದೇಶಿಸುವ ಜಿಲ್ಲಾಡಳಿತ ಈ ವಿಷಯದಲ್ಲಿ ತಣ್ಣಗೆ ಕುಳಿತಿದೆ.

ವಾರದಲ್ಲಿ ಶೇ. 60ಕ್ಕೂ ಹೆಚ್ಚು ಕಟಾವು ಮುಗಿಯಲಿದೆ. ಅಕಾಲಿಕ ಮಳೆ ಯಿಂದ ತತ್ತರಿಸಿರುವ ರೈತರು 2 ದಿನ ಮಳೆ ಬಿಟ್ಟ ಪರಿಣಾಮ ಹೆಚ್ಚಿನ ಬಾಡಿಗೆಯಾದರೂ ಪರವಾಗಿಲ್ಲ; ಸಿಕ್ಕಷ್ಟು ಬೆಳೆ ಸಿಗಲೆಂದು ಖಾಸಗಿ ಯಂತ್ರಗಳ ಮೂಲಕ ಕಟಾವು ಮುಗಿಸುತ್ತಿದ್ದಾರೆ.

ಹಾಗಾಗಿ ಬೆಳೆ ಕಟಾವಿಗೆ ಹೆಚ್ಚಿನ ಬಾಡಿಗೆ ದರನೀಡಿದ್ದಲ್ಲದೇ ಕಡಿಮೆ ಬೆಲೆಗೆ ಭತ್ತವನ್ನು ಮಾರುವಂತಾಗಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಖರೀದಿ ಕೇಂದ್ರ ವಿಫ‌ಲ
ಸರಕಾರದ ವಿಳಂಬ ನೀತಿಯಿಂದಾಗಿ ಪ್ರತೀ ವರ್ಷ ಜಿಲ್ಲೆಯ ಖರೀದಿ ಕೇಂದ್ರ ವಿಫಲ ವಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕ ಸಣ್ಣ ಬೇಸಾಯಗಾರರು ಮತ್ತು ಭತ್ತ ಬೆಳೆಯುವುದು ಗ್ರಾಮೀಣ ಭಾಗದಲ್ಲಿ. ಆದರೆ ಮತ್ತೆ ಸಾವಿರಾರು ರೂ. ಸಾಗಣೆ ವೆಚ್ಚ ನೀಡಿ ನಗರದಲ್ಲಿರುವ ಖರೀದಿ ಕೇಂದ್ರಕ್ಕೆ ಕೊಂಡೊಯ್ಯಬೇಕು. ಇದರಿಂದ ಮತ್ತಷ್ಟು ನಷ್ಟ ಎಂದು ರೈತರು ಖರೀದಿ ಕೇಂದ್ರಗಳಿಗೆ ತೆರಳುವುದಿಲ್ಲ. ಜತೆಗೆ ಖರೀದಿ ಕೇಂದ್ರದಲ್ಲಿ ಖರೀದಿಸಲೂ ಹಲವು ಷರತ್ತುಗಳಿರುವುದರಿಂದ ರೈತರನ್ನು ಅತ್ತ ಸುಳಿಯದಂತೆ ಮಾಡಿದೆ.

Advertisement

ಹೀಗಾಗಿ ಜಿಲ್ಲೆಯಲ್ಲಿ ಹೆಕ್ಟೇರ್‌ಗೆ 40 ಕ್ವಿಂಟಾಲ್‌ನಂತೆ 1.44 ಲಕ್ಷ ಟನ್‌ ಭತ್ತ ಬೆಳೆಯುತ್ತಿದ್ದರೂ 2017ರಿಂದ 2020ರ ವರೆಗೆ ಒಂದೇ ಒಂದು ಕೆಜಿ ಭತ್ತ ಬೆಂಬಲ ಬೆಲೆ ಖರೀದಿ ಕೇಂದ್ರ ತಲುಪಿಲ್ಲ.

ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳದಲ್ಲಿ ಪ್ರತೀ ವರ್ಷ ಭತ್ತ ಖರೀದಿ ಕೇಂದ್ರ ಸ್ಥಾಪಿ ಸಲಾಗುತ್ತದೆ. ಈ ವರ್ಷವೂ ಈ ಮೂರು ಇಲ್ಲಿ ಮಾತ್ರ ಕೇಂದ್ರ ತೆರೆಯಲುಕೃಷಿ ಇಲಾಖೆ ಮತ್ತು ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದಾಗಿ ಭತ್ತ ಭತ್ತ ಹಳ್ಳಿಯಲ್ಲಿ ಬೆಳೆದರೂ ಅದನ್ನು ಮಾರಲು ನಗರಕ್ಕೆ ಬರಲೇಬೇಕಾದ ಅನಿವಾರ್ಯತೆ ರೈತರಿಗೆ ಸೃಷ್ಟಿಯಾಗಿದೆ.

ಇದನ್ನೂ ಓದಿ:ಗ್ರಾಮೀಣ ಪ್ರದೇಶದಲ್ಲಿ 5ಜಿ ಸೌಲಭ್ಯ : ವಿಐ-ನೋಕಿಯಾ ಯಶಸ್ವಿ ಪ್ರಯೋಗ

ಜಿಲ್ಲೆಯಲ್ಲಿ 1.44 ಲಕ್ಷ ಟನ್‌ ಬೆಳೆ
ಕೃಷಿ ಇಲಾಖೆ ಅಂಕಿಅಂಶದ ಪ್ರಕಾರ ಜಿಲ್ಲೆಯಲ್ಲಿ ಹೆಕ್ಟೇರ್‌ಗೆ 40 ಕ್ವಿಂಟಾಲ್‌ನಂತೆ ಸುಮಾರು 1.44 ಲಕ್ಷ ಟನ್‌ ಭತ್ತ ಉತ್ಪಾದನೆಯಾಗುತ್ತದೆ.

ಹೆಚ್ಚು ಬೆಳೆಯುವಲ್ಲೇ ಖರೀದಿ ಕೇಂದ್ರವಿಲ್ಲ
ಜಿಲ್ಲೆಯಲ್ಲಿ ಸುಮಾರು 36,000 ಹೆಕ್ಟೇರ್‌ ಭತ್ತ ಬೆಳೆಯುವ ಪ್ರದೇಶ ಇದ್ದು, ತಾಲೂಕುವಾರು ಬ್ರಹ್ಮಾವರ ಪ್ರಥಮ ಸ್ಥಾನದಲ್ಲಿದೆ. ಇಲ್ಲಿನ 9,400 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕುಂದಾ ಪುರ ತಾಲೂಕು 9,250 ಹೆ.ನೊಂದಿಗೆ ದ್ವಿತೀಯ, 5,400 ಹೆ.ನೊಂದಿಗೆ ಕಾರ್ಕಳ ತೃತೀಯ ಸ್ಥಾನ, ಬೈಂದೂರಿನಲ್ಲಿ 4,400 ಹೆ., ಕಾಪುವಿನಲ್ಲಿ 3,150, ಉಡುಪಿಯಲ್ಲಿ 2,950, ಹೆಬ್ರಿಯಲ್ಲಿ 1,450 ಹೆ.ನಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ ಹೆಚ್ಚು ಭತ್ತ ಬೆಳೆಯುವ ತಾಲೂಕಿನವರು 20-30 ಕಿ.ಮೀ ಕ್ರಮಿಸಿ ಭತ್ತ ಮಾರಬೇಕಿದೆ. ಬ್ರಹ್ಮಾವರದಲ್ಲೂ ಕೇಂದ್ರ ತೆರೆದರೆ ರೈತರಿಗೆ ಅನುಕೂಲವಾಗಲಿದೆ.

ಕರಾವಳಿಯ ರೈತರ ಸಮಸ್ಯೆಗಳ ಪರಿಹಾರ ಮತ್ತು ಕೃಷಿಗೆ ಪೂರಕವಾದ ಬೇಡಿಕೆಗಳ ಈಡೇರಿಕೆಗಾಗಿ ರೈತ ಮುಖಂಡರನ್ನು ಒಳಗೊಂಡ ನಿಯೋಗದೊಂದಿಗೆ ಸಿಎಂ, ಕೃಷಿ ಸಚಿವರನ್ನು ಶೀಘ್ರ ಭೇಟಿಯಾಗಿ ಕೂಲಂಕಷವಾಗಿ ಚರ್ಚಿಸಲಾಗುವುದು.
-ಸುನಿಲ್‌ ಕುಮಾರ್‌, ಸಚಿವರು

ಈ ಹಿಂದೆ ಕುಂದಾಪುರ, ಉಡುಪಿ, ಕಾರ್ಕಳದಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿತ್ತು. ಈ ಬಾರಿಯೂ ಹಾಗೆಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚುವರಿ ಕೇಂದ್ರ ತೆರೆಯಲು ಸೂಚಿಸಿದರೆ ಕ್ರಮ ಕೈಗೊಳ್ಳಲಾಗುವುದು.
-ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಉಡುಪಿ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next