Advertisement

7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ಇಲ್ಲ, ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಮಾತ್ರ

09:48 AM Jan 08, 2020 | sudhir |

ಬೆಂಗಳೂರು: ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ಕುರಿತಾಗಿ ಹಲವು ದಿನಗಳಿಂದ ಕಾಡುತ್ತಿದ್ದ ಗೊಂದಲಕ್ಕೆ ಸರ್ಕಾರ ಕೊನೆಗೂ ತೆರೆ ಎಳೆದಿದ್ದು, ಬದಲಾಗಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

Advertisement

ಪ್ರಸಕ್ತ ಸಾಲಿನಲ್ಲೇ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಿದ್ದೇವೆ. ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಿ ಶಾಲೆಗಳಿಗೆ ನೀಡುತ್ತೇವೆ. ಮೌಲ್ಯಮಾಪನ ಕಾರ್ಯ ಜಿಲ್ಲಾ ಮಟ್ಟದ ಡಯಟ್‌ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಂಗಳವಾರ ತಿಳಿಸಿದರು.

7ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೀತಿಯ ಮೌಲ್ಯಾಂಕನ ಪರೀಕ್ಷೆ ನಡೆಸುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷಾ ಭಯ ಕಡಿಮೆಯಾಗುತ್ತದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿರುವ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಈ ವ್ಯವಸ್ಥೆಗೆ ಸಜ್ಜುಗೊಳಿಸಲು ಶಿಕ್ಷಕರಿಗೆ ತಿಳಿಸಲಾಗಿದೆ. ಈಗಾಗಲೇ ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ. ಕಲಬುರಗಿ, ವಿಜಯಪುರದಂತಹ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತುಂಬಾ ಹಿಂದುಳಿದಿದ್ದಾರೆ. ಇವರಿಗೆ ವಿಶೇಷ ಮಾರ್ಗದರ್ಶನ ನೀಡಲು ಈ ಪರೀಕ್ಷೆ ಸಹಾಯವಾಗಲಿದೆ ಎಂದು ಹೇಳಿದರು.

ಸಮಗ್ರ ನಿರಂತರ ಮೌಲ್ಯಮಾಪನ (ಸಿಸಿಇ) ಮಾದರಿಯಲ್ಲಿ ಈಗಾಗಲೇ ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಭಾಗವಾಗಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಲ್ಪ ವಿಭಿನ್ನವಾಗಿ ಪರೀಕ್ಷೆ ನಡೆಸಲಿದ್ದೇವೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಜಿಲ್ಲಾ ಡಯಟ್‌ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ವಿದ್ಯಾರ್ಥಿಗಳ ರಿಪೋರ್ಟ್‌ ಕಾರ್ಡ್‌ ಸಿದ್ಧಮಾಡಿ, 8, 9 ಹಾಗೂ 10ನೇ ತರಗತಿಯಲ್ಲಿ ಇದರ ಆಧಾರದ ಮೇಲೆ ಪ್ರತಿ ವಿದ್ಯಾರ್ಥಿಯ ಮೇಲೂ ವಿಶೇಷ ನಿಗಾ ಇಡಲಾಗುತ್ತದೆ. ಅವರ ಕಲಿಕೆಗೂ ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ಫೇಸ್‌ ಇಲ್ಲ
ಈ ಪರೀಕ್ಷೆಯನ್ನು ಯಾರನ್ನು ಉತ್ತೀರ್ಣ ಅಥವಾ ಅನುತ್ತೀರ್ಣ ಮಾಡಲು ನಡೆಸುತ್ತಿಲ್ಲ. ವಿದ್ಯಾರ್ಥಿ ವಿಷಯಗಳ ಬಗ್ಗೆ ಎಷ್ಟರ ಮಟ್ಟಿಗೆ ಜ್ಞಾನ ಹೊಂದಿದ್ದಾನೆ ಎಂಬುದನ್ನು ಪರಿಶೀಲಿಸಲು ನಡೆಸುತ್ತಿದ್ದೇವೆ. ಈ ಪರೀಕ್ಷೆಯು ಎಷ್ಟು ಅಂಕಗಳಿಗಿರಬೇಕು? ಎಂಬ ಅಂಶವನ್ನು ಲೆಕ್ಕಚಾರ ಮಾಡುತ್ತಿದ್ದೇವೆ ಎಂದರು.

ಪಬ್ಲಿಕ್‌ ಪರೀಕ್ಷೆ ವಿವಾದ ಏನು?
7ನೇ ತರಗತಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಕ್ಟೋಬರ್‌ನಲ್ಲಿ ಹೇಳಿಕೆ ನೀಡಿದ್ದರು. ಇದಾದ ನಂತರವೂ 7ನೇ ತರಗತಿ ಪರೀಕ್ಷೆಯ ಬಗ್ಗೆ ಹಲವು ಬಾರಿ ಹೇಳಿಕೆ ನೀಡಿದ್ದರು. ಆನಂತರ ಇದಕ್ಕೆ ಪರ-ವಿರೋಧ ವ್ಯಕ್ತವಾಯಿತು. ಆನಂತರ ಆರ್‌ಟಿಇ ನಿಯಮದ ಪ್ರಕಾರ ಪಬ್ಲಿಕ್‌ ಪರೀಕ್ಷೆ ನಡೆಸುವಂತಿಲ್ಲವೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೆಸರು ಬದಲಾಯಿಸಿ ಶಾಲಾ ಹಂತದಲ್ಲಿ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಹಾಯವಾಣಿ
ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರ ಕುಂದು ಕೊರತೆ ನೀಗಿಸುವ ಉದ್ದೇಶದಿಂದ ಅವರ ಅಹವಾಲು ಸ್ವೀಕರಿಸಲು ಸಹಾಯವಾಣಿ ತೆರೆಯಲು ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.
ಮಾರ್ಚ್‌ 31ರೊಳಗೆ ಇದು ಅನುಷ್ಠಾನಕ್ಕೆ ಬರಲಿದೆ. ಬಂದ ತಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಕರೆ ಮಾಡಿ ದೂರು ದಾಖಲಿಸಬಹುದು. ಆನಂತರ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next