Advertisement

ಆರಕ್ಷಕ ಠಾಣೆಗೇ “ರಕ್ಷಣೆ’ಇಲ್ಲ

09:51 PM Mar 13, 2020 | Team Udayavani |

ಎಚ್‌.ಡಿ.ಕೋಟೆ: ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕ ಠಾಣೆಗೇ ರಕ್ಷಣೆ ಇಲ್ಲದಂತಾಗಿದೆ. ಪಟ್ಟಣದಲ್ಲಿರುವ ಪೊಲೀಸ್‌ ಠಾಣೆ ಶಿಥಿಲಾವಸ್ಥೆಯಲ್ಲಿದ್ದು, ಆಗಲೋ ಈಗಲೋ ಬೀಳುವಂತಿದೆ. ಓಬಿರಾಯನ ಕಾಲದ ಪೊಲೀಸ್‌ ಠಾಣೆ ಕಟ್ಟಡದ ಮೇಲ್ಛಾವಣಿ ಸೇರಿದಂತೆ ಗೋಡೆಗಳು ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಸೋರುವುದು ಸಾಮಾನ್ಯವಾಗಿದೆ. ಇಂತಹ ಅವ್ಯವಸ್ಥೆಯಲ್ಲೇ ಪೊಲೀಸ್‌ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಾಗಿದೆ.

Advertisement

ಒಂದೆಡೆ ಸಿಬ್ಬಂದಿ ಕೊರತೆಯಾದರೆ, ಮತ್ತೂಂದೆ‌ಡೆ ಇರುವ ಸಿಬ್ಬಂದಿಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸುಸಜ್ಜಿತ ಕಟ್ಟಡ ಇಲ್ಲದಂತಾಗಿದೆ. ಬೇರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಎಚ್‌.ಡಿ.ಕೋಟೆ ಮೂರು ಪಟ್ಟು ವಿಸ್ತೀರ್ಣ ಹೊಂದಿದೆ. ತಾಲೂಕಿನ ಜನತೆಗೆ ಸೂಕ್ತ ರಕ್ಷಣೆ ನೀಡುತ್ತಿರುವ ತಾಲೂಕು ಕೇಂದ್ರ ಸ್ಥಾನದ ಪೊಲೀಸರಿಗೆ ರಕ್ಷಣೆ ಇಲ್ಲದೇ ಕುಸಿದು ಬೀಳುವ ಹಂತದಲ್ಲಿರುವ ಠಾಣೆಯಲ್ಲಿ ಜೀವ ಹಂಗು ತೊರೆದು ಪ್ರತಿದಿನ ಕರ್ತವ್ಯ ನಿರ್ವಹಿಸಬೇಕಾದ ಸ್ಥಿತಿ ಇದೆ.

ಹಗಲು ಇರುಳೆನ್ನದೆ ದುಡಿಯುವ ಪೊಲೀಸ್‌ ಸಿಬ್ಬಂದಿಗೆ ಸದ್ಯ ಪೊಲೀಸ್‌ ಠಾಣೆಯಿಂದ ಹೊರಗುಳಿದು ಕರ್ತವ್ಯ ನಿವ‌ìಹಿಸಿದರೂ ಚಿಂತೆ ಇಲ್ಲ. ಪೊಲೀಸ್‌ ಠಾಣೆಯ ಒಳಗೆ ಕುಳಿತು ಕರ್ತವ್ಯ ನಿರ್ವಹಿಸುವುದು ಬೇಡ ಎಂಬ ಭಾವನೆ ಬರುವಂತಿದೆ. ಮಳೆಗಾಲದಲ್ಲಂತೂ ಇಲ್ಲಿನ ಸ್ಥಿತಿ ಕೇಳುವುದೇ ಬೇಡ. ಕಟ್ಟಡದ ಮೇಲ್ಛಾವಣೆ ಮೂಲಕ ಮಳೆ ನೀರು ಸೋರುವುದರಿಂದ ನೆಲ ಒದ್ದೆಯಾಗಿರುತ್ತದೆ.

ಭಾರೀ ಗಾಳಿ ಮಳೆ ಬೀಸಿದರೆ ಹೆಚ್ಚಿನ ನೀರು ಹರಿದು ಬಂದು ದಾಖಲೆಗಳು ನಾಶವಾಗುವ ಸಾಧ್ಯತೆ ಇದೆ. ಅಲ್ಲದೇ ಕುಸಿದು ಬೀಳುವ ಸಂಭವ ಕೂಡ ಇದೆ. ಆದರೂ ಕೂಡ ದುರಸ್ತಿಗೆ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್‌ ಠಾಣೆ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದು. ಕೂಡಲೇ ಸಂಬಂಧಿಸಿದ ಇಲಾಖೆಗಳ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಪಟ್ಟಣದಲ್ಲಿ ಸುಸಜ್ಜಿತ,

ಅತ್ಯಾಧುನಿಕ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಪೊಲೀಸರು ಠಾಣೆಯಲ್ಲಿ ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಾಗಿದೆ. ಪೊಲೀಸ್‌ ಠಾಣೆ ಆವರಣದಲ್ಲಿ ಕೈತೋಟ, ಸಾರ್ವಜನಿಕರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಓದುಗರಿಗಾಗಿ ಮಿನಿ ಗ್ರಂಥಾಲಯದ ವ್ಯವಸ್ಥೆ ಇದೆಯಾದರೂ ಸುಸಜ್ಜಿತ ಪೊಲೀಸ್‌ ಠಾಣೆ ಕಟ್ಟಡ ಇಲ್ಲದಿರುವುದು ವಿಪರ್ಯಾಸವಾಗಿದೆ.

Advertisement

ಜನರಿಂದಲೇ ಸಬ್‌ಇನ್ಸ್‌ಪೆಕ್ಟರ್‌, ಸಂದರ್ಶಕರ ಕೊಠಡಿ ನಿರ್ಮಾಣ: ಶಿಥಿಲಾವಸ್ಥೆಯಲ್ಲಿರುವ ಪೊಲೀಸ್‌ ಠಾಣೆಯಲ್ಲಿ ಇಲ್ಲಿಯ ತನಕ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ಇನ್ಸ್‌ಪೆಕ್ಟರ್‌ ಕೊಠಡಿ ಕಂಡ ತಾಲೂಕಿನ ದಾನಿಗಳು ಹಣ ನೀಡಿ, ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಮತ್ತು ಸಂದರ್ಶಕರಿಗಾಗಿ ಪೊಲೀಸ್‌ ಠಾಣೆ ಆವರಣದಲ್ಲಿದ್ದ ಖಾಲಿ ಜಾಗದಲ್ಲಿ ಸುಸಜ್ಜತಿ ಕೊಠಡಿಯನ್ನು ನಿರ್ಮಿಸಿದ್ದಾರೆ. ಸಬ್‌ಇನ್ಸ್‌ಪೆಕ್ಟರ್‌ ಮತ್ತು ಸಂದರ್ಶಕರ ಕೊಠಡಿ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮತಿ ಪಡೆಯುತ್ತಿದ್ದಂತೆಯೇ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ.

ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆ ಶಿಥಿಲಾವಸ್ಥೆಯಲ್ಲಿರುವ ಕುರಿತು ಸರ್ಕಾರ ಹಾಗೂ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕಟ್ಟಡವನ್ನು ನೆಲಸಮಗೊಳಿಸಿ, ಸುಸಜ್ಜಿತ ಕಟ್ಟಡ ನಿರ್ಮಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನಸ್ನೇಹಿ ಪೊಲೀಸ್‌ ಆಗಿ ಕಾರ್ಯನಿರ್ವಹಿಸಲು, ಠಾಣೆ ಬಗ್ಗೆ ಗೌರವ ಭಾವನ ಬರುವಂತೆ ಮಾಡಲು ಸಂದರ್ಶಕರ ಕೊಠಡಿಯನ್ನು ಸಾರ್ವಜನಿಕರ ಹಣದಿಂದ ನಿರ್ಮಿಸಲಾಗಿದೆ.
-ಎಂ. ನಾಯಕ್‌, ಸಬ್‌ಇನ್ಸ್‌ಪೆಕ್ಟರ್‌

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next