ಬೆಂಗಳೂರು: ಟಿಪ್ಪು ಜಯಂತಿ ರದ್ದು ಅಥವಾ ಬೇರೆ ಯಾವುದೇ ರೀತಿಯ ಬದಲಾವಣೆ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಜಯಂತಿ ಅಂಗವಾಗಿ ವಿಧಾನಸೌಧ ಆವರಣದಲ್ಲಿರುವ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು,ಟಿಪ್ಪು ಜಯಂತಿ ರದ್ದು ಪ್ರಸ್ತಾಪವೇ ಇಲ್ಲ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯೇ ಭಾಗಿಯಾಗಲೇಬೇಕು ಅಂತ ಏನಿಲ್ಲ. ಸರ್ಕಾರದ ಪ್ರತಿನಿಧಿಯಿದ್ದಾಗ ಕಾರ್ಯಕ್ರಮ ನಡೆಯುತ್ತದೆ. ಆದರೆ, ಯಾಕಾಗಿ ಗೊಂದಲ ಉಂಟು ಮಾಡುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.
ಟಿಪ್ಪು ಜಯಂತಿ ವಿಚಾರವಾಗಿ ಹೇಳಿಕೆ ಸಂಬಂಧ ಸಂತೋಷ್ ತಮ್ಮಯ್ಯ ಬಂಧನ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನಾರ್ದನರೆಡ್ಡಿ ವಿಚಾರದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅಧಿಕಾರ ದುರ್ಬಳಕೆ ಸಹ ಮಾಡಿಕೊಳ್ಳುತ್ತಿಲ್ಲ. ರೆಡ್ಡಿ ಆಪ್ತರೊಬ್ಬರು 18 ಕೋಟಿ ರೂ. ಹಣ ತಿರುಪತಿ ಹುಂಡಿಗೆ ಹಾಕಿದ್ದೇವೆ ಎನ್ನುತ್ತಾರೆ. ಇದು ಹಾಸ್ಯವೋ ಅಥವಾ ಗಂಭೀರವೋ ನನಗೆ ಅರ್ಥವಾಗುತ್ತಿಲ್ಲ. ಇದರ ಅರ್ಥವೇನು? ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಹೇಳುತ್ತಿದ್ದೇನೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ರೈತರ ಸಾಲ ಮನ್ನಾ ವಿಷಯದಲ್ಲಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೆನೆ. ಅರ್ಹ ರೈತರ ಸಾಲ ಮನ್ನಾ ಮಾಡಿ ಅವರು ನಿಶ್ಚಿಂತೆಯಿಂದ ಇರುವಂತೆ ಮಾಡುತ್ತೇನೆ. ಕೃಷಿ ಸಾಲ ಅಲ್ಲದ ಪ್ರಕರಣಗಳೇ ಹೆಚ್ಚು ಬರುತ್ತಿದೆ. ಮನೆ ಸಾಲದಂತಹ ಪ್ರಕರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ನಾನು ರೈತರಿಗೆ ಮನವಿ ಮಾಡುತ್ತೇನೆ. ಸರ್ಕಾರ ನಿಮ್ಮ ಪರವಾಗಿದೆ, ದಯವಿಟ್ಟು ನನ್ನನ್ನು ನಂಬಿ ಎಂದು ಹೇಳಿದರು.