Advertisement

ಕಡಲ್ಕೊರೆತಕ್ಕಿಲ್ಲ ಸಮರ್ಪಕ ಯೋಜನೆ

11:57 AM Jun 20, 2019 | Team Udayavani |

ಕುಮಟಾ: ಸಮುದ್ರ ತೀರದ ಪ್ರದೇಶಗಳು ಹಿಂದಿನಿಂದಲೂ ಕಡಲ ಕೊರೆತಕ್ಕೆ ಸಿಲುಕಿ ವರ್ಷದಿಂದ ವರ್ಷಕ್ಕೂ ರೂಪಾಂತರಗೊಳ್ಳುತ್ತಿದೆ. ಇದರಿಂದಾಗಿ ಅನೇಕ ಕೃಷಿ ಭೂಮಿಗಳು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿವೆ. ಈ ಕುರಿತು ಪ್ರತಿವರ್ಷವೂ ಜನರ ಕೂಗು ಮಾರ್ಧನಿಸುತ್ತದೆ. ಆದರೆ ಕಡಲ ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಸಮರ್ಪಕ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಸಮುದ್ರ ತೀರದ ಅಸಂಖ್ಯಾತ ಮೀನುಗಾರರ, ರೈತರ, ಕೂಲಿಕಾರರ ತೊಂದರೆ ನೀಗಿಸುವಲ್ಲಿ ಸಂಬಂಧಪಟ್ಟವರು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ.

Advertisement

ತಾಲೂಕಿನಾದ್ಯಂತ ಸಾಮಾನ್ಯ ಎಲ್ಲ ಸಮುದ್ರ ತೀರದ ಪ್ರದೇಶಗಳು ಪ್ರತಿ ವರ್ಷವೂ ಕಡಲ ಕೊರೆತದಿಂದ ನುಲುಗುತ್ತಲಿದೆ. ಕಡ್ಲೆ, ಹೊಲನಗದ್ದೆ, ಬಾಡ, ವನ್ನಳ್ಳಿ, ಹೆಡಬಂದರ್‌, ಹಂದಿಗೋಣ, ಅಳ್ವೇಕೋಡಿ, ಧಾರೇಶ್ವರ ಮುಂತಾದ ಪ್ರದೇಶಗಳು ಈ ಹಿಂದೆ ಕಡಲ ಕೊರೆತಕ್ಕೊಳಗಾಗಿ ಸಾವಿರಾರು ಎಕರೆ ಕೃಷಿ ಭೂಮಿಗಳು ತನ್ನ ಫಲವತ್ತೆ ಕಳೆದುಕೊಂಡಿವೆ. 1868ರಲ್ಲಿ ಬ್ರಿಟಿಷರಿಂದಲೇ ಗುರುತಿಸಲ್ಪಟ್ಟ ಅರ್ಧಚಂದ್ರಾಕಾರದ ಮುಂಗೊಡ್ಲ ಸಮುದ್ರವಂತೂ ತೀವ್ರ ಸಮುದ್ರ ಕೊರೆತಕ್ಕೊಳಗಾಗಿ ತನ್ನ ಸೌಂದರ್ಯ ಕಳೆದುಕೊಂಡಿರುವುದಲ್ಲದೇ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ನಿರ್ಲಕ್ಷಕ್ಕೊಳಗಾಗಿದೆ.

ಕಡಲ ಕೊರೆತವನ್ನು ತಡೆಯುವ ನಿಟ್ಟಿನಲ್ಲಿ ಈವರೆಗೆ ಅನೇಕ ಭರವಸೆಗಳು ಬಂದಿವೆ. ಆದರೆ ಯಾವುದೂ ಕಾರ್ಯಗತಗೊಂಡಿಲ್ಲ. 2002ರ ಅವಧಿಯಲ್ಲಿ ಆಗಿನ ಬಂದರು ಸಚಿವ ವಸಂತ ಸಾಲಿಯಾನ ಸಮುದ್ರ ತಡೆಗೋಡೆಯ ಕುರಿತು ಕುಮಟಾಕ್ಕೆ ಬಂದಾಗ ಭರವಸೆಗಳನ್ನು ನಿಡಿದ್ದರು. ಜಾಗತಿಕ ಬ್ಯಾಂಕಿನಿಂದ ನೂರು ಕೋಟಿ ಮಂಜೂರಿಯಾಗಿದೆ. ಕಾರವಾರದಿಂದ ಮಂಗಳೂರಿನವರೆಗೆ ಜಪಾನ್‌ ಮಾದರಿಯ ಶಾಶ್ವತ ತಡೆಗೋಡೆ ನಿರ್ಮಿಸಲಾಗುತ್ತದೆ ಎನ್ನುವ ಮುಕ್ತ ಘೋಷಣೆ ಮಾಡಿದ್ದರು. 2005ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಡೆನಿಶ್‌ ಮಾದರಿಯಲ್ಲಿ ಸಮುದ್ರ ಕೊರೆತ ನಿಲ್ಲಿಸುತ್ತೇವೆ ಎಂದಿದ್ದರು.

2006ರಲ್ಲಿ ಮಾಜಿ ಸಂಸದೆ ಇಲ್ಲಿನ ನಾಮಧಾರಿ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡಿ, ಉ.ಕ. ಕರಾಳಿಯ ಬಗ್ಗೆ ವೈಜ್ಞಾನಿಕ ಚರ್ಚೆ ನಡೆದಿದೆ. ಸಂಸತ್ತಿನಲ್ಲಿ ಕುಮಟಾ ಹೊನ್ನಾವರ ಸಮುದ್ರ ಕೊರೆತದ ಕುರಿತು ವಿವರಿಸಿದ್ದೇನೆ. ಸದ್ಯದಲ್ಲಿಯೇ ಶಾಶ್ವತ ಪರಿಹಾರ ನಿಡುತ್ತೇವೆ ಎಂದಿದ್ದರು. 2007ರ ಸೆಪ್ಟೆಂಬರ್‌ನ‌ಲ್ಲಿ ಈಗಿನ ಸಂಸದ ಅನಂತಕುಮಾರ ಹೆಗಡೆಯವರೂ ಈ ಕುರಿತು ಭರವಸೆ ನೀಡಿದ್ದರು. ಅಷ್ಟಲ್ಲದೇ, ಕರ್ನಾಟಕದ ಇಂಜಿನಿಯರ್‌ಗಳಿಗೆ ಈ ಕುರಿತು ಪ್ರಾಥಮಿಕ ಜ್ಞಾನವೂ ಇಲ್ಲ. ಕೇಂದ್ರವು ಸಮುದ್ರ ಕೊರೆತ ನಿರ್ವಹಣೆಗೆ 50 ಲಕ್ಷ ಮಂಜೂರು ಮಾಡಿತ್ತು. ಆಗಿನ ರಾಜ್ಯ ಸರಕಾರದ ನಿರ್ಲಕ್ಷ್ಯ ಹಾಗೂ ಇಂಜಿನಿಯರ್‌ಗಳ ದಡ್ಡತನದಿಂದಾಗಿ ಬಂದ ಹಣ ಕೇಂದ್ರಕ್ಕೆ ವಾಪಸ್ಸಾಗಿದೆ ಎಂದು ದೂರಿದ್ದರು. ಎಲ್ಲವೂ ಭರವಸೆಯಾಗಿಯೇ ಉಳಿಯಿತೇ ವಿನಃ ಜಿಲ್ಲೆಗೆ ಯಾವ ಪ್ರಯೋಜನವೂ ಆಗಿಲ್ಲ. ಕೆಲ ಕಡೆಗಳಲ್ಲಿ ಕಡಲ ಕೊರೆತ ಮಾತ್ರ ಹಾಗೆಯೇ ಮುಂದುವರೆಯುತ್ತಿದೆ.

Advertisement

ಸಮುದ್ರ ಕೊರೆತದಿಂದಾಗುವ ಅನಾಹುತ: ಸಮುದ್ರದಂಚಿನ ಅನೇಕ ಕೃಷಿಭೂಮಿಗಳು ನುಗ್ಗುತ್ತಿರುವ ಉಪ್ಪು ನೀರಿನಿಂದಾಗಿ ಬಂಜರಾಗುತ್ತಿದೆ. ತೋಟ, ಗದ್ದೆಗಳು ಕೊರೆತದಿಂದಾಗಿ ನಾಶಹೊಂದುತ್ತಿದೆ. ಹಲವು ಕೆರೆ ಬಾವಿಗಳು ಉಪ್ಪು ನೀರು ನುಗ್ಗಿ ಹಾಳಾಗುತ್ತಿದೆ. ಫ‌ಲವತ್ತಾದ ಭೂ ಪ್ರದೇಶಗಳು ಉಪ್ಪು ನೀರಿನಿಂದಾಗಿ ತನ್ನ ಫಲವತ್ತತೆ ಕಳೆದುಕೊಂಡು ಯಾವುದೇ ಕೃಷಿಗೂ ಬಾರದಂತಾಗುತ್ತಿದೆ. ಇನ್ನು ಕೆಲವೆಡೆಗಳಲ್ಲಿ ಸಮುಂದ್ರದಂಚಿಗೆ ಅನೇಕ ಮನೆಗಳಿವೆ. ಮಳೆಗಾಲದಲ್ಲಿ ಬೃಹತ್‌ ಪ್ರಮಾಣದ ಅಲೆಗಳು ಬಂದರೆ ಮನೆಗೆ ಉಪ್ಪು ನೀರು ನುಗ್ಗುವುದರಲ್ಲಿ ಸಂಶಯವಿಲ್ಲ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅತೀ ಶೀಘ್ರದಲ್ಲಿ ಕಡಲ ಕೊರೆತದ ಕುರಿತು ಸಮಗ್ರವಾಗಿ ಚಿಂತನೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬರುವ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ.

1868ರಲ್ಲಿ ಬ್ರಿಟಿಷರಿಂದಲೇ ಗುರುತಿಸಲ್ಪಟ್ಟ ಅರ್ಧಚಂದ್ರಾಕಾರದ ಮುಂಗೊಡ್ಲ ಸಮುದ್ರವಂತೂ ತೀವ್ರ ಸಮುದ್ರ ಕೊರೆತಕ್ಕೊಳಗಾಗಿ ತನ್ನ ಸೌಂದರ್ಯ ಕಳೆದುಕೊಂಡಿರುವುದಲ್ಲದೇ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ನಿರ್ಲಕ್ಷಕ್ಕೊಳಗಾಗಿದೆ.
ಸಮುದ್ರ ಕೊರೆತಕ್ಕೆ ಕಾರಣ:

ಪ್ರಮುಖವಾಗಿ ಅವೈಜ್ಞಾನಿಕ ಹಾಗೂ ಅನುಭವದ ಕೊರತೆಯಿಂದಾಗಿ ಈ ಹಿಂದೆ ನಿರ್ಮಾಣವಾದ ತಡೆಗೋಡೆಗಳು ಸಮುದ್ರ ಕೊರೆತಕ್ಕೆ ಕಾರಣ. ಹಿಂದೆಲ್ಲ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಸಮುದ್ರದಂಚಿನ ಭೂ ಪ್ರದೇಶಗಳ ಕುರಿತು ಸಮಗ್ರವಾಗಿ ಅರಿಯದೇ ಆ ಕುರಿತು ಚಿಂತನೆ ನಡೆಸದೇ ಹೊಗೆ ಎದ್ದಲ್ಲಿ ಬಡಿಯೋ ಎಂಬಂತೆ ಬೇಜವಾಬ್ದಾರಿಯ ಕಾಮಗಾರಿಗಳಿಂದಾಗಿ ಕಡಲಕೊರೆತಗಳು ಹೆಚ್ಚಾಗ ತೊಡಗಿವೆ. ಇತ್ತೀಚೆಗೆ ನಿರ್ಮಿಸಿದ ತಡೆಗೋಡೆಗಳು ಸಮರ್ಪಕವಾಗಿದ್ದರೂ ಅನುದಾನದ ಕೊರತೆಯಿಂದ ಅವಶ್ಯಕತೆಯಿರುವ ಕೆಲವೆಡೆಗಳಲ್ಲಿ ಇನ್ನೂ ನಿರ್ಮಾಣಗೊಂಡಿಲ್ಲ.
• ಕೆ. ದಿನೇಶ ಗಾಂವ್ಕರ
Advertisement

Udayavani is now on Telegram. Click here to join our channel and stay updated with the latest news.

Next