Advertisement

ಕರೋಪಾಡಿ: ಮೊಬೈಲ್‌ ಸಿಗ್ನಲ್‌ ಇಲ್ಲ, ವಿದ್ಯುತ್‌ ಇಲ್ಲ

02:55 AM Jun 29, 2018 | Karthik A |

ಕರೋಪಾಡಿ: ಬಂಟ್ವಾಳ ತಾ|ನ ಕರೋಪಾಡಿ ಗ್ರಾಮ ದ್ವೀಪದಂತಾಗಿದೆ. ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ತೀರಾ ಹಳ್ಳಿ ಪ್ರದೇಶವಾದ ಕರೋಪಾಡಿ ಗ್ರಾಮದಲ್ಲಿ ವಿದ್ಯುತ್‌ ಮಾಯವಾಗಿದೆ. ಮೊಬೈಲ್‌ ಟವರ್‌ ಸಿಗ್ನಲ್‌ ತೋರಿಸುತ್ತಿಲ್ಲ. ದೂರವಾಣಿ ಸಂಪರ್ಕವೇ ಇಲ್ಲ. ಪರಿಣಾಮವಾಗಿ ಈ ಭಾಗದ ಜನತೆ ನಾಡಿನ ಸಂಪರ್ಕವನ್ನೇ ಕಡಿದುಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಸಮಸ್ಯೆ ಅಂದೇ ಇತ್ತು
ಗ್ರಾಮದ ಪದ್ಯಾಣ, ಮುಗುಳಿ, ಪಾದೆ ಕಲ್ಲು ಮೊದಲಾದೆಡೆ ಬೇಸಗೆಯಲ್ಲಿಯೂ ವಿದ್ಯುತ್‌ ಕಣ್ಣಾಮುಚ್ಚಾಲೆ ಯಾಡುತ್ತಲೇ ಇತ್ತು. ಮಳೆಗಾಲ ಆರಂಭವಾದ ಬಳಿಕ ವಿದ್ಯುತ್‌ ಇಲ್ಲವೇ ಇಲ್ಲ. ನಿತ್ಯವೂ ಸೀಮೆಎಣ್ಣೆ ದೀಪವೇ ಬೆಳಕು ನೀಡುತ್ತ, ಜನತೆಯ ನೆನಪು 50 ವರ್ಷ ಹಿಂದಕ್ಕೆ ಓಡುವಂತಾಗಿದೆ. ಈ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ ಎನ್ನುವ ಈ ಭಾಗದ ನಾಗರಿಕರು ಗಡಿಭಾಗದಲ್ಲಿರುವ ನಮ್ಮನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ ಸಿಗ್ನಲ್‌ ಇಲ್ಲ
BSNL ಮೊಬೈಲ್‌ ಟವರ್‌ ಇದೆ. ಸಿಗ್ನಲ್‌ ಇಲ್ಲ. ಪರಿಣಾಮವಾಗಿ ಯಾರನ್ನೂ ಸಂಪರ್ಕಿಸಲಾಗುವುದಿಲ್ಲ. ಸ್ಥಿರ ದೂರವಾಣಿ ಸಂಪರ್ಕ ಸಮರ್ಪಕವಾಗಿರಲಿಲ್ಲ. ಅದೇ ಕಾರಣಕ್ಕೆ ಮೊಬೈಲ್‌ ಪಡೆದುಕೊಂಡ ಗ್ರಾಹಕರಿಗೆ ಅದಾವ ವ್ಯವಸ್ಥೆಯೂ ಇಲ್ಲದೇ ಅರಣ್ಯರೋದನ ಮಾಡುತ್ತಿದ್ದಾರೆ.

ಕನ್ಯಾನವೂ ಹೀಗೆಯೇ!
ಕನ್ಯಾನದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಪರಿಸರದಲ್ಲಿ ಮಂಗಳವಾರ ಮಾಯವಾದ ವಿದ್ಯುತ್‌ ಬುಧವಾರ ಮಧ್ಯಾಹ್ನವೂ ಬಂದಿಲ್ಲ. ಇದು ದಿನನಿತ್ಯದ ಪರಿಸ್ಥಿತಿ. ಈ ಅವ್ಯವಸ್ಥೆಯನ್ನು ಹೋಗಲಾಡಿಸುವ ಕ್ರಮ ಅಧಿಕಾರಿಗಳಿಂದಾಗಲಿಲ್ಲ. ಬೇಸಗೆಯಲ್ಲೂ ಮಳೆಗಾಲದಲ್ಲೂ ಹಲವಾರು ಕಾರಣಗಳಿಂದ ವಿದ್ಯುತ್‌ ಇಲ್ಲ, ಫೋನ್‌ ಇಲ್ಲ. ಆದರೆ ತಿಂಗಳ ಬಾಡಿಗೆಯನ್ನು ಪಾವತಿಸುತ್ತಿರಬೇಕು. ವಿದ್ಯುತ್‌ ಅಥವಾ ಫೋನ್‌ ಸಂಪರ್ಕ ಸಿಗದೇ ಇದ್ದರೂ ಎರಡೂ ಇಲಾಖೆಗಳು ನಿಗದಿಪಡಿಸಿದ ಬಿಲ್ಲಿನಲ್ಲಿ ಯಾವ ರಿಯಾಯಿತಿಯನ್ನೂ ತೋರುವುದಿಲ್ಲ. ಗ್ರಾಹಕರ ಬಗ್ಗೆ ಕನಿಕರವನ್ನೇ ತೋರುವುದಿಲ್ಲ. ಈ ಹೀನಾಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರತಿಭಟನೆಗೂ ನಾವು ಸಿದ್ಧ
ನಮ್ಮ ಸಮಸ್ಯೆಯನ್ನು ಪರಿಹರಿಸುವವರಿಲ್ಲದೇ ಹತಾಶರಾಗಿದ್ದೇವೆ. ಇಲಾಖೆಗಳು ತೀವ್ರ ನಿರಾಶಾದಾಯಕವಾಗಿ ಉತ್ತರಿಸುತ್ತಾರೆ. ಗಾಳಿ, ಮಳೆಗೆ ಹಾನಿಯಾಗುವುದುಂಟು. ಆದರೆ ಕಳೆದ ಕೆಲವು ತಿಂಗಳುಗಳಿಂದ ಈ ರೀತಿಯಲ್ಲಿ ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸುತ್ತಿರುವುದು, ಕಡೆಗಣಿಸುವುದು ತೀವ್ರ ಖಂಡನೀಯ. ನಮಗೆ ನ್ಯಾಯ ಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಗೂ ನಾವು ಸಿದ್ಧ.
– ಗಣಪತಿ ಭಟ್‌, ಶಿಕ್ಷಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next