ಯಲಬುರ್ಗಾ: ತಾಲೂಕಿನಲ್ಲಿ ಅರ್ಧದಷ್ಟು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮೈದಾನವೇ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳ ಕ್ರೀಡಾ ಆಸಕ್ತಿ ಕುಂದಿದೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಒಟ್ಟು 239 ಶಾಲೆಗಳಿದ್ದು, ಅದರಲ್ಲಿ ಪ್ರಾಥಮಿಕ 126, 68 ಕಿರಿಯ ಪ್ರಾಥಮಿಕ ಹಾಗೂ 45 ಪ್ರೌಢಶಾಲೆಗಳಿವೆ. ಈ ಪೈಕಿ 56 ಶಾಲೆಗಳಿಗೆ ಆಟದ ಮೈದಾನವಿಲ್ಲ. ಇದು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುವಂತೆ ಮಾಡಿದೆ.
ವಲಯ ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಮೈದಾನದ ಸಮಸ್ಯೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಸಮಸ್ಯೆಯಾಗಿದೆ. ತಾಲೂಕಿನ ಹಳೆಯ ಶಾಲೆಗಳು ಈವರೆಗೂ ಮೈದಾನ ಕಂಡಿಲ್ಲ. ಕೆಲ ಶಾಲೆಗಳಲ್ಲಿ ಪ್ರತಿದಿನ ಪ್ರಾರ್ಥನೆಗೆ ನಿಲ್ಲಲ್ಲು ಜಾಗವಿಲ್ಲ. ಇಕ್ಕಟ್ಟಿನ ಪ್ರದೇಶದಲ್ಲಿ ಆಟ-ಪಾಠ ನಡೆಯುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ತಾಲೂಕಿನಾದ್ಯಂತ ಆಟದ ಮೈದಾನಗಳು ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಾಗದ ಸ್ಥಿತಿ ಇದೆ.
ಕ್ರೀಡಾಕೂಟ ಆರಂಭ: ಈಗಾಗಲೇ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಹಾಗೂ ದೈಹಿಕ ಶಿಕ್ಷಣ ಅಧಿಕಾರಿಗಳು ಜೊತೆಗೂಡಿ ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರನ್ನು ಹಾಗೂ ದೈಹಿಕ ಶಿಕ್ಷಕರನ್ನು ಕರೆದು ವಲಯ ಮಟ್ಟದ ಕ್ರೀಡಾಕೂಟ ಆಯೋಜನೆಗೆ ಸಭೆ ನಡೆಸಿದ್ದಾರೆ. ಮೈದಾನ ಇಲ್ಲದ ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೈದಾನವಿಲ್ಲದೇ ಪೂರ್ವ ಸಿದ್ಧತೆ, ಕೂಟಕ್ಕೆ ತಯಾರಿ ಮಾಡಿಕೊಳ್ಳದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂಜರಿಯುತ್ತಿರುವುದನ್ನು ಶಾಲೆಯ ಶಿಕ್ಷಕರೇ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೈದಾನವಿಲ್ಲದ ಶಾಲೆಗಳ ವಿದ್ಯಾರ್ಥಿಗಳು ಶಾಲೆಯ ಹತ್ತಿರದ ಖಾಸಗಿ ವ್ಯಕ್ತಿಗಳ ಹೊಲಕ್ಕೆ ಹೋಗಿ ಆಟವಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೈದಾನ ಇಲ್ಲದ ಶಾಲೆಗಳ ವ್ಯಾಪ್ತಿಯ ಗ್ರಾಪಂ ಆಡಳಿತ ಮಂಡಳಿ ಮೈದಾನ ನಿರ್ಮಾಣಕ್ಕೆ ಮುಂದಾಗಬೇಕಿದೆ. ಶಾಲೆಯ ಮುಖ್ಯಶಿಕ್ಷಕರು, ಪಿಡಿಒ, ಗ್ರಾಪಂ ಆಡಳಿತ ಮಂಡಳಿಯವರು ಜೊತೆಗೂಡಿ ಮೈದಾನಗಳ ನಿರ್ಮಾಣಕ್ಕೆ ಕಾಳಜಿ ವಹಿಸಬೇಕಿದೆ.
ಇನ್ನಾದರೂ ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಸೂಕ್ತ ಆಟದ ಮೈದಾನ ಒದಗಿಸಿ ಮಕ್ಕಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸಬೇಕಿದೆ.
ತಾಲೂಕಿನ ಬಹುತೇಕ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಇದರಿಂದ ಕ್ರೀಡಾ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಪಾಠದ ಜೊತೆಗೆ ಆಟೋಟಗಳಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಮೈದಾನದ ಅವಶ್ಯಕತೆ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲಾ ಶಾಲೆಗಳಿಗೆ ಮೈದಾನ ನಿರ್ಮಾಣ ಮಾಡಿಸಬೇಕು.
•ಹುಚ್ಚಪ್ಪ ಬೊಮ್ಮನಾಳ, ಕಟಗಿಹಳ್ಳಿ ಗ್ರಾಮಸ್ಥ
ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳ ಅನೂಕೂಲಕ್ಕೆ ಆಟದ ಮೈದಾನಗಳು ಅವಶ್ಯ. ಶಾಲೆಗಳಿಗೆ ಆಯಾ ಗ್ರಾಪಂ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಆಟದ ಮೈದಾನ ಒದಗಿಸಿಕೊಡುವಂತೆ ತಾಪಂ ಇಒ ಅವರಿಗೆ ಮನವಿ ಮಾಡಲಾಗಿದೆ. ಮೈದಾನ ಇಲ್ಲದೇ ಇರುವ ಶಾಲೆಗಳಿಗೆ ಭೇಟಿ ನೀಡಿ ಆಯಾ ಗ್ರಾಪಂ ಪಿಡಿಒಗಳ ಜೊತೆ ಸಹ ಚರ್ಚೆ ಮಾಡುತ್ತೇನೆ. ಮೈದಾನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.
•ಶರಣಪ್ಪ ವಟಗಲ್, ಬಿಇಒ
•ಮಲ್ಲಪ್ಪ ಮಾಟರಂಗಿ