Advertisement

ಎಲ್ಲೆಡೆಗೂ ನೀರು ಕೊಡುವ ಇಲ್ಲಿಯೇ ಶಾಶ್ವತ ನೀರಿನ ಯೋಜನೆಯಿಲ್ಲ

11:20 AM Mar 22, 2020 | mahesh |

ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿರುವುದರಿಂದ ಸಜೀಪಮುನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಅದನ್ನು ಈಡೇರಿಸುವುದು ಅಸಾಧ್ಯ. ಹೀಗಾಗಿ ಪ್ರತಿ ಬಾರಿಯೂ ಶಾಶ್ವತ ಯೋಜನೆಯೊಂದನ್ನು ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ವಾದ.

Advertisement

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತ ಸರಣಿ ಇದು.

ಬಂಟ್ವಾಳ: ನೇತ್ರಾವತಿ ತಟದಲ್ಲಿರುವ ಸಜೀಪಮುನ್ನೂರು ಗ್ರಾ.ಪಂ.ವ್ಯಾಪ್ತಿಯಿಂದಲೇ ಮಂಗಳೂರು ವಿವಿ, ಇನ್ಫೋಸಿಸ್‌, ಏತ ನೀರಾವರಿ ಹಾಗೂ ಕರೋಪಾಡಿ ಬಹುಗ್ರಾಮ ಯೋಜನೆಗೆ ನೀರನ್ನು ಕೊಂಡುಹೋಗುತ್ತಿದ್ದರೂ ಈ ಗ್ರಾ.ಪಂ. ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಹಾಲಿ ಕೊಳವೆಬಾವಿಗಳ ಮೂಲಕ ಜನರ ನೀರಿನ ದಾಹವನ್ನು ಈಡೇರಿಸುವ ಕೆಲಸಗಳನ್ನು ಮಾಡಲಾಗುತ್ತಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಲನಿಗಳಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆಯೇ ಹೆಚ್ಚಿದ್ದು, ಹೀಗಾಗಿ ಎಲ್ಲರೂ ಗ್ರಾ.ಪಂ.ನ ನೀರನ್ನೇ ಅವಲಂಬಿತರಾಗಿದ್ದಾರೆ. ಹಾಲಿ ಎಲ್ಲರಿಗೂ ಕೊಳವೆಬಾವಿಯ ಮೂಲಕ ನೀರು ಕೊಡುತ್ತಿರುವುದರಿಂದ ಪದೇ ಪದೇ ಕೊಳವೆಬಾವಿ ಕೈಕೊಟ್ಟಾಗ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಿರುವುದರಿಂದ ಗ್ರಾ.ಪಂ.ನ ವ್ಯಾಪ್ತಿಯಲ್ಲಿ ಅದನ್ನು ಈಡೇರಿಸುವುದು ಅಸಾಧ್ಯ. ಹೀಗಾಗಿ ಪ್ರತಿ ಬಾರಿಯೂ ಶಾಶ್ವತ ಯೋಜನೆಯೊಂದನ್ನು ನೀಡುವಂತೆ ಆಗ್ರಹಗಳು ಕೇಳಿಬರುತ್ತಿದೆ. ಆದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ವಾದ.

Advertisement

ಏಕಾಏಕಿ ಕಡಿಮೆ
ಗ್ರಾ.ಪಂ. ವ್ಯಾಪ್ತಿಯ ಶಾಂತಿನಗರ, ಆಲಾಡಿ, ನಂದಾವರ ಮೊದಲಾದ ಪ್ರದೇಶಗಳಿಗೆ ಗ್ರಾ.ಪಂ.ನಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಕೆಲವು ಸಮಯಗಳ ಹಿಂದೆ ಸುಮಾರು 400 ಮನೆಗಳಿಗೆ ನೀರು ಪೂರೈಕೆ ಮಾಡುವ ಆಲಾಡಿಯಲ್ಲಿ ನದಿ ತೀರದಲ್ಲಿರುವ ಕೊಳವೆಬಾವಿಯ ನೀರು ಏಕಾಏಕಿ ಕಡಿಮೆಯಾಗಿ ಬಳಿಕ ಸ್ಥಳೀಯ ಖಾಸಗಿಯವರ ಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಹಿನ್ನೀರ ವ್ಯಾಪ್ತಿಯಲ್ಲೇ ಇದೆ
ಸಜೀಪಮುನ್ನೂರು ಗ್ರಾ.ಪಂ. ನೇತ್ರಾವತಿ ನದಿಯ ಬದಿಯಲ್ಲೇ ಇದೆ ಎನ್ನುವುದಕ್ಕಿಂತಲೂ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನ ಹಿನ್ನೀರ ವ್ಯಾಪ್ತಿಯಲ್ಲಿದೆ. ಕಳೆದ ಬಾರಿ ಡ್ಯಾಂನಲ್ಲಿ ನೀರನ್ನು 6 ಮೀ.ಗೆ ಏರಿಸಿದ ಬಳಿಕ ಗ್ರಾಮ ವ್ಯಾಪ್ತಿಯ ನದಿಯಲ್ಲಿ ಹೇರಳವಾಗಿ ನೀರಿದೆ. ಹಿನ್ನೀರಿನಿಂದಾಗಿ ಗ್ರಾಮದ ಕೆಲವು ಭಾಗ ಮುಳುಗಡೆಯೂ ಆಗಿದೆ. ಆದರೆ ಗ್ರಾಮಕ್ಕೆ ನೀರಿನ ಬರ ಇನ್ನೂ ಇದೆ.

ನದಿಯಿಂದ ನೇರವಾಗಿ ನೀರು ಪೂರೈಕೆ ಮಾಡುಡುವುದು ಕಷ್ಟವೇನಿಲ್ಲ. ಆದರೆ ನದಿಯಿಂದ ನೇರವಾಗಿ ತೆಗೆದ ನೀರನ್ನು ಜನತೆಗೆ ಕುಡಿಯುವುದಕ್ಕೆ ಕೊಡಲು ಅವಕಾಶವಿಲ್ಲ. ಆದರೆ ನೀರಿನ ಶುದ್ಧೀಕರಣ ಘಟಕದ ಮೂಲಕ ಶುದ್ಧೀಕರಿಸಿ ಕೊಡುವುದು ಅಸಾಧ್ಯದ ಮಾತು. ಹೀಗಾಗಿ ಕೊಳವೆಬಾವಿಯನ್ನೇ ನಂಬಬೇಕಾದ ಪರಿಸ್ಥಿತಿ ಇದೆ. ಮಾರ್ಚ್‌ ತಿಂಗಳು ಬತ್ತೆಂದರೆ ಸಾಕು ಯಾವ ಸಮಯದಲ್ಲಿ ಕೊಳವೆಬಾವಿ ಕೈ ಕೊಡುತ್ತದೆ ಎಂದು ಹೇಳತೀರದು. ಎಪ್ರಿಲ್‌ ಅಂತ್ಯಕ್ಕೆ ಯಾವ ಕೊಳವೆಬಾವಿಯಲ್ಲೂ ನೀರಿರುವುದಿಲ್ಲ. ಕಳೆದ ವರ್ಷ ಬೇಸಗೆಯಲ್ಲಿ ಟ್ಯಾಂಕರ್‌ ನೀರೇ ಗತಿಯಾಗಿತ್ತು. ಈ ಬಾರಿ ಸ್ಥಿತಿ ಹೇಗಾಗಬಹುದು ಎಂದು ಹೇಳಲು ಕಷ್ಟಸಾಧ್ಯಎನ್ನುತ್ತಾರೆ ಗ್ರಾ.ಪಂ. ಆಡಳಿತ ಮಂಡಳಿಯವರು.

2021ರ ಡಿಸೆಂಬರ್‌ಗೆ ನೀರು: ಅಧಿಕಾರಿಗಳ ಭರವಸೆ
ಆಲಾಡಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ಉಳ್ಳಾಲಕ್ಕೆ ಬಹುಗ್ರಾಮ ಯೋಜನೆಯ ಮೂಲಕ ಕುಡಿಯುವ ನೀರನ್ನು ಪೂರೈಕೆ ಕಾಮಗಾರಿಗೆ ಸಿದ್ಧತೆ ನಡೆಸಲಾಗುತ್ತಿದ್ದು, ಅದರಿಂದ ಬಂಟ್ವಾಳದ 5 ಗ್ರಾಮಗಳಿಗೆ ನೀರನ್ನು ನೀಡಲಾಗುತ್ತದೆ ಎಂದು ಹೇಳಿದರೂ ಅದರ ಕುರಿತು ಗ್ರಾ.ಪಂ. ಅಧ್ಯಕ್ಷರು ಸಹಿತ ಗ್ರಾಮಸ್ಥರಿಗೆ ಇನ್ನೂ ಭರವಸೆ ಸಿಕ್ಕಿಲ್ಲ. ಇದು ಅನುಷ್ಠಾನಗೊಂಡು ಗ್ರಾಮಕ್ಕೆ ನೀರು ಕೊಡುವುದೇ ಆದಲ್ಲಿ, 2021ರ ಡಿಸೆಂಬರ್‌ನಲ್ಲಿ ಗ್ರಾಮಕ್ಕೆ ನೀರು ಸಿಗುತ್ತದೆ ಎಂದು ಈಗಾಗಲೇ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದರಿಂದ ನೀರು ಲಭಿಸಿದರೆ ಇಡೀ ಗ್ರಾಮದ ಬಹುತೇಕ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರತಿ ಕಡೆಗೂ ಇಲ್ಲಿಂದಲೇ ನೀರು
ಪ್ರತಿ ಕಡೆಗೂ ನೀರಿನ ಆವಶ್ಯಕತೆಗಳು ಬೇಕಾದಾಗ ಇಲ್ಲಿಂದಲೇ ನೀರನ್ನು ಕೊಂಡು ಹೋಗಲಾಗುತ್ತಿದೆ. ಆದರೆ ನಮ್ಮ ಗ್ರಾ.ಪಂ.ನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಾಲಿ ಉಳ್ಳಾಲದ ಬಹುಗ್ರಾಮದ ಯೋಜ ನೆಗೂ ಇಲ್ಲಿಂದಲೇ ನೀರನ್ನು ಕೊಂಡು ಹೋಗುವ ಯೋಜನೆ ಹಾಕಲಾ ಗಿದ್ದು, ಆದರೆ ನಮಗೆ ನೀರು ಕೊಡುವ ಕುರಿತು ಖಚಿತವಿಲ್ಲ. ಈ ಕುರಿತು ಶಾಸಕರು ಸಹಿತ ಎಲ್ಲರನ್ನೂ ಸೇರಿಸಿ ಸಭೆ ನಡೆಸುವ ಯೋಚನೆ ಇದೆ.
-ಶರೀಫ್‌ ನಂದಾವರ , ಗ್ರಾ.ಪಂ. ಅಧ್ಯಕ್ಷರು

ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ
ಸದ್ಯದ ಪರಿಸ್ಥಿತಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದ್ದು, ಆಗ ಟ್ಯಾಂಕರ್‌ ಮೂಲಕ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ದಿನಗಳ ಹಿಂದೆ ಆಲಾಡಿಯಲ್ಲಿ ನೀರಿನ ಅಭಾವ ತಲೆದೋರಿದಾಗ ಖಾಸಗಿಯವರ ಕೆರೆಯಿಂದ ನೀರನ್ನು ತೆಗೆದು ಪೂರೈಕೆ ಮಾಡಲಾಗುತ್ತಿದೆ.
-ಡಾ| ಪ್ರಕಾಶ್‌ ಎಸ್‌.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next