Advertisement
ಹೌದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹುದ್ದೆ ಪ್ರಮುಖವಾಗಿದೆ. ಅಂಗನವಾಡಿ ಕೇಂದ್ರಗಳು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ವಿವಿಧ ಸಾಂತ್ವನ, ಸ್ವಾಧಾರ ಕೇಂದ್ರಗಳು ಸೇರಿದಂತೆ ಮಹಿಳೆ, ಮಕ್ಕಳ ಕಲ್ಯಾಣದ ಎಲ್ಲ ಯೋಜನೆಗಳ ಅನುಷ್ಠಾನಾಧಿಕಾರಿಯ ಜವಾಬ್ದಾರಿಯ ಜತೆಗೆ ಹಲವು ಜವಾಬ್ದಾರಿ ಅವರ ಮೇಲಿರುತ್ತವೆ. ಆದರೆ, ಕಳೆದ 8 ವರ್ಷದಿಂದ ಈ ಇಲಾಖೆಗೆ ಕಾಯಂ ಅಧಿಕಾರಿ ಇಲ್ಲ. ಆದರೆ, ಬೇರೆ ಬೇರೆ ಇಲಾಖೆಯ ಅಧಿಕಾರಿಗಳು, ಹುದ್ದೆಗೆ ಬರಲು ಭಾರಿ ಪೈಪೋಟಿ ನಡೆಸುವ ಪ್ರಸಂಗ ಹಲವು ಬಾರಿ ನಡೆದಿವೆ.
Related Articles
Advertisement
ಈ ಹುದ್ದೆಗೆ ಇಂತಹದ್ದೇ ಸಮಾನ ಹುದ್ದೆಯಲ್ಲಿದ್ದ ಕೋರವಾರ ಎಂಬುವವರಿಗೆ ಹಿಂದೆ ನಿಯೋಜನೆ ಮಾಡಲಾಗಿತ್ತು. ಅವರು ಇಲಾಖೆಯ ನಿಯಮಾನುಸಾರ, ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಅರ್ಹರರಲ್ಲ ಎಂದು ಆ ಹುದ್ದೆಗೆ ತೆಗೆಯಲಾಗಿತ್ತು.
ಈ ವರೆಗೆ ಬೀಳಗಿಯ ಸಿಡಿಪಿಒ ಎಂ.ಎಂ. ಇರಸನಾಳ ನಿರ್ವಹಿಸುತ್ತಿದ್ದ ಹಿರಿಯ ಸಹಾಯಕ ನಿರ್ದೇಶಕ ಹುದ್ದೆಗೆ ಬಾಲಕಿಯರ ಬಾಲ ಭವನದ ಪರಿವೀಕ್ಷಣಾಧಿಕಾರಿ ಜಯಮಾಲಾ ದೊಡ್ಡಮನಿ ಅವರಿಗೆ ಪ್ರಭಾರ ವಹಿಸಲಾಗಿದೆ. ಅದೂ ಈವರೆಗೆ ಉಪನಿರ್ದೇಶಕ ಹುದ್ದೆಯಲ್ಲಿದ್ದ ಬಿ.ಸಿ. ಶಿವಲಿಂಗಪ್ಪ ಸೇವಾ ನಿವೃತ್ತಿ ಹೊಂದಿದ ಡಿಸೆಂಬರ್ 31ರಂದು ಈ ಆದೇಶ ಮಾಡಿದ್ದು, ಇದು ಇಲಾಖೆಯ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಒಟ್ಟಾರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಭಾರ ಹುದ್ದೆಗಳಲ್ಲೇ ಮುನ್ನಡೆಯುತ್ತಿದೆ. ಅದರಲ್ಲೂ ಕೆಲವು ಆಯಕಟ್ಟಿನ ಹುದ್ದೆಗಳಿದ್ದು, ಅವುಗಳ ನಿಯೋಜನೆಯಲ್ಲಿ ಸರ್ಕಾರದ ನಿಯಮಪಾಲನೆಯಾಗುತ್ತಿಲ್ಲ. ಪ್ರಭಾರ ಹುದ್ದೆಗಳಿಗೆ ನಿಯೋಜನೆ ಮಾಡುವಾಗ, ಕರ್ನಾಟಕ ನಾಗರಿಕ ಸೇವಾ ನಿಯಮದ 68 ಅನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ನಿಯಮ ಜಿಲ್ಲೆಯ ಮಟ್ಟಿಗೆ ಪ್ರತಿ ಕಾರ್ಯಭಾರದ ವೇಳೆಯೂ ಗಾಳಿಗೆ ತೂರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಬಾಲಕಿಯರ ಬಾಲ ಮಂದಿರದ ಪರಿವೀಕ್ಷಣಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಈ ನಿಯೋಜನೆ ನಾನು ಮಾಡಿಲ್ಲ. ಕಳೆದ ವಾರ ನಿವೃತ್ತಿಯಾದ ಹಿಂದಿನ ಉಪ ನಿರ್ದೇಶಕರು ಮಾಡಿದ್ದಾರೆ. ನಿಯಮಾನುಸಾರ ನಿಯೋಜನೆ ಮಾಡಲು ಅವಕಾಶವಿಲ್ಲ. ಆದರೆ, ಹೇಗೆ ಮಾಡಿದ್ದಾರೆ ಗೊತ್ತಿಲ್ಲ. – ಅಶೋಕ ಬಸಣ್ಣವರ, ಪ್ರಭಾರಿ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
–ಶ್ರೀಶೈಲ ಕೆ. ಬಿರಾದಾರ