ದೇವದುರ್ಗ: ಇಲ್ಲಿನ ಸಹಾಯಕ ಕೃಷಿ ನಿರ್ದೇಶಕಿ ಡಾ| ಎಸ್. ಪ್ರಿಯಾಂಕ್ ವರ್ಗಾವಣೆಗೊಂಡು ತಿಂಗಳು ಗತಿಸಿದರೂ ಇಲ್ಲಿವರೆಗೆ ಒಬ್ಬ ಕಾಯಂ ಅಧಿಕಾರಿ ಕಚೇರಿಗೆ ಬಾರದ್ದರಿಂದ ಕಡತಗಳು ವಿಲೇವಾರಿಯಾಗಿಲ್ಲ.
ರಾಯಚೂರು ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗೆ ತಾತ್ಕಾಲಿಕ ಪ್ರಭಾರ ನೀಡಲಾಗಿದೆ. ಕಚೇರಿ ನಿರ್ವಹಣೆ ಬಿಲ್, ವಿವಿಧ ಯೋಜನೆ ಕಡತಗಳು ವಿಲೇವಾರಿಗೆ ಅಧಿಕಾರಿಗಳು ರಾಯಚೂರಿಗೆ ಹೋಗಬೇಕಿದೆ.
ದೇವದುರ್ಗ, ಗಬ್ಬೂರು, ಅರಕೇರಾ, ಜಾಲಹಳ್ಳಿ ಸೇರಿ ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಹಲವು ಸಮಸ್ಯೆಗಳು ಅಧಿಕಾರಿಗಳ ಜೀವ ಹಿಂಡುತ್ತಿದೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಡಾ| ಎಸ್. ಪ್ರಿಯಾಂಕ್ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 100 ಅಧಿಕ ರಸಗೂಬ್ಬರ ಮಾರಾಟ ಅಂಗಡಿಗಳ ಮೇಲೆ ಆಗಾಗ ಭೇಟಿ ನೀಡಿ ರೈತರ ದೂರುಗಳಿಗೆ ಸ್ಪಂದಿಸಿದ್ದರು. ಆದರೀಗ ತಿಂಗಳಿಂದ ಸಹಾಯಕ ಕೃಷಿ ಇಲಾಖೆಯಲ್ಲಿ ಕಾಯಂ ಅಧಿಕಾರಿ ಇಲ್ಲದ ಹಿನ್ನೆಲೆ ಅಂಗಡಿಗಳ ಮಾಲೀಕರು ಆಡಿದ್ದೇ ಆಟ ಎಂಬಂತಾಗಿದೆ.
ಸರ್ಕಾರ ಕೃಷಿ ಇಲಾಖೆಯಿಂದ ಹಲವು ಯೋಜನೆ ಜಾರಿಗೆ ತಂದಿದೆ. ಸಮರ್ಪಕವಾಗಿ ರೈತರಿಗೆ ಪೂರೈಸಲು ಕಾಯಂ ಅಧಿಕಾರಿ ಇಲ್ಲದ ಕಾರಣ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಅಧಿಕಾರಿಗೆ ನೀಡಿದ ವಾಹನ ತಿಂಗಳಿಂದ ಸದ್ಬಳಕೆ ಆಗದೇ ಮೂಲೆಗೆ ಸೇರಿದೆ.
ನಾಲ್ಕು ಹೋಬಳಿ ವ್ಯಾಪ್ತಿಯ ಒಂದೊಂದು ರೈತ ಸಂಪರ್ಕ ಕೇಂದ್ರಕ್ಕೆ 40ರಿಂದ 50 ಹಳ್ಳಿಗಳು ಬರುತ್ತವೆ. ದಿನವಿಡೀ ಹಲವು ರೈತರು ಕಚೇರಿಗೆ ಬಂದು ಪೂರಕ ಮಾಹಿತಿ ಪಡೆಯದೇ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಿಸಿದ ಮೇಲಕಾರಿಗಳು ಕಚೇರಿಗೆ ಕಾಯಂ ಅಧಿಕಾರಿ ನಿಯೋಜಿಸುವ ಮೂಲಕ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಅಧಿಕಾರಿ ಕಚೇರಿಗೆ ಬೀಗ ಜಡಿಯಲಾಗಿದೆ. ರಾಯಚೂರು ತಾಲೂಕು ಸಹಾಯಕ ಕೃಷಿ ಅಧಿಕಾರಿಗೆ ಪ್ರಭಾರ ವಹಿಸಿದ ಹಿನ್ನೆಲೆ ಪ್ರತಿಯೊಂದು ಕಡತಗಳು ವಿಲೇವಾರಿಗಾಗಿ ಇಲ್ಲಿನ ಅಧಿಕಾರಿಗಳು ರಾಯಚೂರಿಗೆ ಅಲೆಯಬೇಕಿದೆ. ಯಾವುದೇ ಬಿಲ್‌ಗಳು ಕೆಟೂ ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಆದರೀಗ ಕಚೇರಿಯಲ್ಲಿ ಅಧಿಕಾರಿ ಇಲ್ಲದ್ದರಿಂದ ಸಕಾಲಕ್ಕೆ ಬಿಲ್‌ಗಳು ಪಾವತಿ ಆಗುತ್ತಿಲ್ಲ.
-ಹೆಸರು ಹೇಳಲಿಚ್ಛಿಸದ ಸಿಬ್ಬಂದಿ