Advertisement

ಯಾವ ಪಕ್ಷದ ಪರವೂ ಸಂಘ ಪ್ರಚಾರವಿಲ್ಲ

11:43 AM Mar 16, 2018 | Team Udayavani |

ಬೆಂಗಳೂರು: ಚುನಾವಣೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಯಾವೊಂದು ರಾಜಕೀಯ ಪಕ್ಷದ ಪರವಾಗೂ ನೇರವಾಗಿ ಕೆಲಸ ಮಾಡುವುದಿಲ್ಲ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಯಾವುದೇ ಪಕ್ಷಕ್ಕಾದರೂ ಲಾಭವಾಗಬಹುದು ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌ ಹೇಳಿದ್ದಾರೆ.

Advertisement

ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಬಿಜೆಪಿ ಪರ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ ಎಂಬ ಕುರಿತು ಪ್ರತಿಕ್ರಿಯೆ ನೀಡಿದ್ದು, ಆರ್‌ಎಸ್‌ಎಸ್‌ ಒಂದು ಜನಪರ ಸಂಘಟನೆ. ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು. ಅದಕ್ಕಾಗಿ ಎಲ್ಲರೂ ಮತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತದೆ.

ಇಂತಹದ್ದೇ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ಆದರೆ, ನಮ್ಮ ಈ ಕೆಲಸದಿಂದ ಯಾವುದೇ ಪಕ್ಷಕ್ಕಾದರೂ ಲಾಭವಾಗಬಹುದು ಎಂದರು. ತ್ರಿಪುರಾ ರಾಜ್ಯದ ಉದಾಹರಣೆ ನೀಡಿದ ಅವರು, ಕಳೆದ ಹತ್ತು ವರ್ಷಗಳಿಂದ ಅಲ್ಲಿ ಆರ್‌ಎಸ್‌ಎಸ್‌ ಉತ್ತಮ ಕೆಲಸ ಮಾಡುತ್ತಾ ಜನರೊಂದಿಗೆ ಸಂಪರ್ಕ ಗಟ್ಟಿಗೊಳಿಸಿದೆ.

ಕಳೆದ ಒಂದು ವರ್ಷದಲ್ಲಿ 25 ಸಾವಿರ ಗಣವೇಷಧಾರಿಗಳು ಲಕ್ಷಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಮತದಾನದ ಜಾಗೃತಿ ಮೂಡಿಸಿದರು. ಇದರಿಂದ ಒಳ್ಳೆಯ ಫ‌ಲಿತಾಂಶವೇ ಬಂದಿದೆ. ಅದೇ ರೀತಿ ಅರುಣಾಚಲ ಪ್ರದೇಶದಲ್ಲೂ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದರು. ಆದರೆ, ಯಾವುದೇ ಪಕ್ಷಕ್ಕೆ ಮತ ಹಾಕಿ ಎಂದು ಕೇಳಿರಲಿಲ್ಲ. ಅದೇ ರೀತಿ ರಾಜ್ಯದಲ್ಲೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿ ನಾಯಕರ ಜತೆಗೆ ಆರ್‌ಎಸ್‌ಎಸ್‌ ಮುಖಂಡರ ಸಂಬಂಧ ಹದಗೆಟ್ಟಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಬಿಜೆಪಿಯ ಎಲ್ಲ ನಾಯಕರೊಂದಿಗೆ ಒಂದೇ ರೀತಿಯ ಸಂಬಂಧ ಹೊಂದಿದ್ದೇವೆ. ಯಾವತ್ತೂ ಬಿಜೆಪಿಯ ಆಂತರಿಕ ವಿಚಾರಗಳಲ್ಲಿ ಕೈಹಾಕುತ್ತಿಲ್ಲ. ರಾಜಕೀಯವಾಗಿ ಬಿಜೆಪಿ ನಾಯಕರು ಸಮಸ್ಯೆ ಮಾಡಿಕೊಂಡಿರಬಹುದೇ ಹೊರತು ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದರು.

Advertisement

ನಾವು ಪ್ರತಿಭಟಿಸಲೇಬೇಕು: ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಮಾತ್ರ ಆರ್‌ಎಸ್‌ಎಸ್‌ ದನಿ ಎತ್ತುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಕೊಲೆಗಳಾದರೂ ಅದನ್ನು ಆರ್‌ಎಸ್‌ಎಸ್‌ ಖಂಡಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೊಲೆಯಾದ ಬಹುತೇಕರು ಆರ್‌ಎಸ್‌ಎಸ್‌ ಕಾರ್ಯಕರ್ತರು. ಹೀಗಿರುವಾಗ ನಾವು ಅದನ್ನು ಪ್ರತಿಭಟಿಸಲೇ ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಭಾರತೀಯ ಭಾಷೆಗಳ ರಕ್ಷಣೆಗೆ ನಿರ್ಣಯ: ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಬೆಳವಣಿಗೆ ನಿಟ್ಟಿನಲ್ಲಿ ಕೆಲಸ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಖೀಲ ಬಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌ ಹೇಳಿದ್ದಾರೆ.

ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭಾಷೆ ಎಂಬುದು ವ್ಯಕ್ತಿ, ಸಮಾಜ ಮತ್ತು ಸಂಸ್ಕೃತಿಯನ್ನು ಗುರುತಿಸುವ ಬಹುಮುಖ್ಯ ಅಂಶ ಎಂಬುದು ಆರ್‌ಎಸ್‌ಎಸ್‌ ನಿಲುವು. ಇತ್ತೀಚಿನ ದಿನಗಳಲ್ಲಿ ವಿದೇಶಿ ಭಾಷೆಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ಭಾರತೀಯ ಭಾಷೆಗಳಿಗೆ ಅಪಾಯ ಹೆಚ್ಚಿದೆ. ಅದಕ್ಕಾಗಿ ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಕೆಲಸ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಇಲ್ಲವೇ ಭಾರತೀಯ ಭಾಷೆಗಳಲ್ಲಿ ನೀಡಬೇಕು. ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೂ ಭಾರತೀಯ ಭಾಷೆಯ ಪುಸ್ತಕಗಳು ಬರಬೇಕು ಮತ್ತು ಪರೀಕ್ಷೆಗಳೂ ನಮ್ಮ ಭಾಷೆಯಲ್ಲೇ ಆಗಬೇಕು. ಸರ್ಕಾರ ಮತ್ತು ನ್ಯಾಯಾಂಗದಲ್ಲಿ ಭಾರತೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಮತ್ತು ದೈನಂದಿನ ಭಾರತೀಯ ಭಾಷೆ ಬಳಕೆ ಮಾಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಭಯ್ನಾಜಿ ಬದಲಾವಣೆ ಉದ್ದೇಶ ಇರಲಿಲ್ಲ: ಆರ್‌ಎಸ್‌ಎಸ್‌ ಎರಡನೇ ಹಂತದ ಸ್ಥಾನವಾಗಿರುವ ಸರಕಾರ್ಯವಾಹಕ ಹದ್ದೆಗೆ ಸುರೇಶ್‌ ಭಯ್ನಾಜಿ ಜೋಶಿ ಬದಲಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡುವ ಪ್ರಸ್ತಾಪ ನಮ್ಮ ಮುಂದೆ ಇರಲಿಲ್ಲ. ಈ ಹಿಂದೆ ಬಯ್ನಾಜಿ ಜೋಶಿ ಅವರಿಗೆ ಕಾಲು ನೋವು ಇದ್ದ ಕಾರಣ ಅವರೇ ತಮ್ಮ ಸ್ಥಾನಕ್ಕೆ ಹೊಸಬಾಳೆ ಅವರನ್ನು ನೇಮಕ ಮಾಡುವಂತೆ ಹೇಳಿದ್ದರು.

ಆದರೆ, ಕಳೆದ ನವೆಂಬರ್‌ನಲ್ಲೇ ಅವರ ಕಾಲುನೋವು ಗುಣಮುಖವಾಗಿ ಸಕ್ರಿಯವಾಗಿ ಓಡಾಡುತ್ತಿದ್ದರು. ಮೇಲಾಗಿ ಅವರ ಅವಧಿಯಲ್ಲಿ ಆರ್‌ಎಸ್‌ಎಸ್‌ ಉತ್ತಮ ಸಾಧನೆ ಮಾಡಿದೆ. ಹೀಗಾಗಿ ಅವರನ್ನೇ ಮುಂದುವರಿಸಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತು. ಈ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ವಿ.ನಾಗರಾಜ್‌  ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next