ಸಾಗರ: ಎಲ್‌ಬಿ ಕಾಲೇಜಿನ ಆವರಣದಲ್ಲಿ ನಡೆದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ೫೬ನೇ ಸರ್ವಸದಸ್ಯರ ಸಭೆಯಲ್ಲಿ ನಡೆದ ಗಲಾಟೆಗೂ ಶಾಸಕ ಹಾಲಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಲೇಜಿಗೆ ಜಮೀನು ನೀಡಿದ ಕುಟುಂಬದ ಎಚ್.ಎಂ.ಬಸವರಾಜ್‌ಗೌಡ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸ್ರಾಣಿ ನಡೆಸುತ್ತಿದ್ದ ಆಡಳಿತ ವಿರೋಧಿ ನಿಲುವಿನ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಪ್ರತಿಷ್ಠಾನದ ಸದಸ್ಯತ್ವದಿಂದಲೇ ವಜಾ ಮಾಡಲಾಗಿತ್ತು ಎಂದರು.
ಸರ್ವಸದಸ್ಯರ ಸಭೆ ನಡೆಯುತ್ತಿದ್ದ ಮಾ. 17ರಂದು ಬೆಳಿಗ್ಗೆ ನಾನು ಶಾಸಕ ಹಾಲಪ್ಪ ಅವರನ್ನು ಭೇಟಿ ಮಾಡಿ ನನಗೆ ಮಾಡಿರುವ ಅನ್ಯಾಯವನ್ನು ತಿಳಿಸಿ ಹೇಳಿ, ಸಭೆಯಲ್ಲಿ ಪಾಲ್ಗೊಳ್ಳದಂತೆ ನನ್ನನ್ನು ಬೆದರಿಸುತ್ತಿದ್ದು, ನನಗೆ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿ ಶಾಸಕರು ನನ್ನ ಮಾತಿಗೆ ಮತ್ತು ಅಧ್ಯಕ್ಷರಾದ ಕೆ.ಎಚ್.ಶ್ರೀನಿವಾಸ್ ಅವರ ಮಾತಿಗೆ ಮನ್ನಣೆ ನೀಡಿ ಸಭೆಗೆ ಬಂದಿದ್ದಾರೆ. ಸಭೆಯಲ್ಲಿ ಶಾಸಕರು ಯಾರ ಮೇಲೂ ಹಲ್ಲೆ ಮಾಡಿಲ್ಲ. ಆದರೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ಗೌಡ ವೇದಿಕೆಯಲ್ಲಿರುವುದು ಬಿಟ್ಟು, ಹಾಜರಾತಿ ಪುಸ್ತಕಕ್ಕೆ ತಾವ್ಯಾಕೆ ಸಹಿ ಮಾಡಿಸಲು ನಿಂತಿದ್ದರು ಎನ್ನುವುದು ನನ್ನ ಪ್ರಶ್ನೆ. ಹಾಜರಾಗಿ ಪುಸ್ತಕಕ್ಕೆ ಸಂಸ್ಥೆಯ ನೌಕರರು ಸಹಿ ಮಾಡಿಸುತ್ತಾರೆ. ಜಗದೀಶ್‌ಗೌಡ ಅಲ್ಲಿ ನಿಂತು ಸಹಿ ಮಾಡಿಸುತ್ತಿದ್ದರು ಎಂದರೆ ಇದರ ಹಿಂದೆ ಗಲಾಟೆ ತೆಗೆಯುವ ಉದ್ದೇಶ ಇರುವುದು ಸ್ಪಷ್ಟವಾಗುತ್ತದೆ ಎಂದರು.
ಸಂಸ್ಥೆ ನಿರ್ಮಾಣಕ್ಕೆ ನಮ್ಮ ತಂದೆಯವರು 12 ಎಕರೆ ಜಮೀನು ನೀಡಿದ್ದರು. ಆದರೆ ಶ್ರೀಪಾದ ಹೆಗಡೆ ಉಪಾಧ್ಯಕ್ಷರಾದ ಮೇಲೆ ನನ್ನನ್ನೇ ಸದಸ್ಯತ್ವದಿಂದ ವಜಾ ಮಾಡಿದ್ದಾರೆ. ತಮ್ಮದೇ ಕುಟುಂಬದ 23 ಜನರಿಗೆ ಸದಸ್ಯತ್ವ ನೀಡುವ ಮೂಲಕ ಸಂಸ್ಥೆಯನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪ್ರಯತ್ನ ಶ್ರೀಪಾದ ಹೆಗಡೆ ನಡೆಸಿದ್ದಾರೆ. ಹಿಂದಿನ ಕಾರ್ಯದರ್ಶಿಯಾಗಿದ್ದ ಮೋಹನ್ ಗೌಡರು ಅವರು ಇದಕ್ಕೆ ಒಪ್ಪಲಿಲ್ಲ. ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆಯಲಾಗಿದೆ. ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಶ್ರೀಪಾದ ಹೆಗಡೆ ಎಂಡಿಎಫ್ ಅಧ್ಯಕ್ಷ ಗಾದಿಯನ್ನು ತಮ್ಮ ಕೈನಲ್ಲಿ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಸಂಸ್ಥೆಯಲ್ಲಿ ಶ್ರೀಪಾದ ಹೆಗಡೆ ಉಪಾಧ್ಯಕ್ಷರಾದ ಮೇಲೆ ಮಾಡಿಕೊಂಡಿರುವ ನೇಮಕಾತಿ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ವೀರಶೈವ-ಲಿಂಗಾಯಿತ ಸಂಘಗಳ ಒಕ್ಕೂಟದ ಸಂಚಾಲಕ ರಾಜೇಂದ್ರ ಆವಿನಹಳ್ಳಿ ಮಾತನಾಡಿ, ಪ್ರಕರಣದಲ್ಲಿ ಶಾಸಕ ಹಾಲಪ್ಪ ಅವರಿಗೆ ಕೆಟ್ಟಹೆಸರು ತರುವ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ. ಜಗದೀಶ್‌ಗೌಡರ ಪರವಾಗಿ ಮಾತನಾಡುವ ಕೆಲವು ಲಿಂಗಾಯಿತ ಸಂಘಟನೆಗಳು ಬಸವರಾಜಗೌಡರನ್ನು ಸಂಸ್ಥೆಯಿಂದ ಕಿತ್ತು ಹಾಕಿದ್ದಾಗ ಮೌನ ವಹಿಸಿದ್ದು ಪ್ರಶ್ನಾರ್ಹ. ಸಂಸ್ಥೆಯ ಹಣವನ್ನು ಶ್ರೀಪಾದ ಹೆಗಡೆ ಮತ್ತು ಜಗದೀಶ್ ಗೌಡರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಶಾಸಕರ ವರ್ಚಸ್ಸಿಗೆ ದಕ್ಕೆ ತರಲು ಮತ್ತು ಲಿಂಗಾಯಿತ ಸಮುದಾಯವನ್ನು ಒಡೆಯಲು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಗಿರೀಶ್ ಗೌಡ, ಲೋಕೇಶ್, ಕಾಂತರಾಜ್, ಗುರುಮೂರ್ತಿ, ಜ್ಞಾನೇಶ್, ಶಿವಕುಮಾರ್ ಗೌಡ, ಕಾಂತೇಶ್, ಕಾಂತರಾಜ್, ಪಶುಪತಿ ಗೌಡ ಹಾಜರಿದ್ದರು.