ಹುಣಸೂರು: 17 ಅನರ್ಹ ಶಾಸಕರ ಪೈಕಿ ಅತೀ ಹೆಚ್ಚು ಸುಳ್ಳು ಹೇಳಿ ಪಕ್ಷದ ಮುಖಂಡರನ್ನೇ ದಾರಿ ತಪ್ಪಿಸಿದ ಕುಖ್ಯಾತಿ ಡಾ.ಸುಧಾಕರ್‌ಗೆ ಸಲ್ಲುತ್ತದೆ. ಕೊನೆ ದಿನದವರೆಗೂ ನಿಮ್ಮ ಜೊತೆ ಇರುತ್ತೇನೆ. ಮುಂಬೈ ಹೋಗಿರುವವರನ್ನು ಕರೆತರುತ್ತೇನೆಂದು ಮೆಸೇಜ್ ಮಾಡಿ, ಕೊನೆಗೆ ತಾನೇ ಅವರೊಂದಿಗೆ ಸೇರಿದ್ದ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸಿದ್ದರಾಮಯ್ಯಗೆ ಮೋಸ ಮಾಡಿದ ಆಸಾಮಿ: ಉಪ ಚುನಾವಣೆ ಸಂಬಂಧ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯವಾಗಿ ಬೆಳೆಸಿದ್ದ ಸಿದ್ದರಾಮಯ್ಯರಿಗೆ ಮೋಸ ಮಾಡಿದ ಆಸಾಮಿ ಸುಧಾಕರ್. ಇಂತಹ ಸುಳ್ಳುಗಾರ ಮತ್ತೊಬ್ಬರಿಲ್ಲ. ಚುನಾವಣೆ ಎದುರಿಸುತ್ತಿರು ಸುಧಾಕರ್, ನಾನು ವಸೂಲಿ ರಾಜಕಾರಣ ಮಾಡುತ್ತೇನೆ ಎಂದು ದೂರಿದ್ದಾರೆ. ಆದರೆ ಅವರ ಕ್ಷೇತ್ರದಲ್ಲಿ ಯಾರು ಬೇಕಾದರೂ ಹೋಗಿ ನೋಡಿ, ಯಾರು ವಸೂಲಿ ರಾಜಕಾರಣ ಮಾಡುತ್ತಾರೆ ಎಂದು ಗೊತ್ತಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಣ ನೀಡಿರುವ ಆರೋಪ ಸುಳ್ಳು: ಇನ್ನು ಕಳೆದ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಪಕ್ಷಕ್ಕೆ ಸಾಕಷ್ಟು ಹಣ ನೀಡಿದ್ದೇನೆಂದು ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ದಿನೇಶ್, ದುಡ್ಡು ಹೆಚ್ಚಾಗಿ ಎಲ್ಲವನ್ನೂ ನಾನೇ ಮಾಡಿದೆ. ಎಲ್ಲವೂ ನನ್ನಿಂದಲೇ ಆಯಿತು ಎನ್ನುವ ಇವರ ಮಾತು ಒಳಿತಲ್ಲ. ಇಂತಹ ದುರಹಂಕಾರದ ಹೇಳಿಕೆ ಕೊಟ್ಟರೆ ಅಧಃಪತನಕ್ಕಿಳಿಯುತ್ತಾರೆ. ಈಗಾಗಲೆ ಅವರು ಮೂರನೇ ಸ್ಥಾನದಲ್ಲಿದ್ದು, ಸೋಲಿನ ಭಯದಿಣಂದ ಏನೇನೋ ಬಡಬಡಿಸುತ್ತಿದ್ದಾರೆ. ಪಕ್ಷಕ್ಕೆ ಅಥವಾ ಮುಖಂಡರಿಗೆ ಸಾಲ ಕೊಟ್ಟಿದ್ದರೆ, ಅಫಿಡೆವಿಟ್‌ನಲ್ಲಿ ಮಾಹಿತಿಯನ್ನೆಕ್ಕೇ ಉಲ್ಲೇಖೀಸಿಲ್ಲ. ಅವರ ಹೇಳಿಕೆ ಬಗ್ಗೆ ಪಕ್ಷ ಈಗಾಗಲೇ ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದೆ ಎಂದು ಹೇಳಿದರು.
ರಾಜ್ಯದಲ್ಲಿ ನ.9ರ ನಂತರ ಬದಲಾವಣೆ: ದೇಶದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಎಲ್ಲ ಪಕ್ಷಾಂತರಿಗಳಿಗೂ ಸೋಲುಂಟಾಗಿದೆ. ಅದೇರೀತಿ ಡಿ.5ರ ಉಪಚುನಾವಣೆಯಲ್ಲೂ ಪಕ್ಷಾಂತರಿಗಳಿಗೆ ಜನತೆ ಸರಿಯಾದ ಬುದ್ಧಿಕಲಿಸಲಿದ್ದಾರೆ. ಡಿ.9ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಒಡೆದ ಮನೆ, ಸಿದ್ಧರಾಮಯ್ಯ ಏಕಾಂಗಿ ಎಂಬಿತ್ಯಾದಿ ಹೇಳಿಕೆಗಳನ್ನು ಬಿಜೆಪಿ ನೀಡುತ್ತಿರುವುದು ಆ ಪಕ್ಷದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಪಕ್ಷದ ಕುರಿತು ಬಿಜೆಪಿಗೆ ಹೇಳಲು ಏನೂ ಇಲ್ಲ.
ನಿಜಾಂಶವೆಂದರೆ ಬಿಜೆಪಿ ಪಕ್ಷವೇ ಇಬ್ಬಾಗವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಲು ಉಪಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿ, ನೈತಿಕತೆಯಿಲ್ಲದ ರಾಜಕಾರಣಿಯೆಂದರೆ ಅದು ವಿಶ್ವನಾಥ್ ಎಂದು ಕಟುವಾಗಿ ಟೀಕಿಸಿದರು. ಇದು ಸ್ವಾಭಿಮಾನದ ಚುನಾವಣೆಯಾಗಿದ್ದು, ಹುಣಸೂರು ಸೇರಿದಂತೆ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಗ್ಯಾರಂಟಿ. ಹೀಗಾಗಿ ಪಕ್ಷದ ಕಾರ್ಯಕರ್ತರು ಸಕ್ರೀಯವಾಗಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಪ್ರಾಮಾಣಿಕವಾಗಿ ದುಡಿಯಬೇಕೆಂದು ಮನವಿ ಮಾಡಿದರು.
ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ತಾಲೂಕಿನ ಗಾವಡಗೆರೆ, ಚಲ್ಲಹಳ್ಳಿ, ಬೆಂಕಿಪುರ ಮತ್ತಿತರೆಡೆ ಪ್ರಚಾರ ಕಾರ್ಯ ನಡೆಸಿದರು. ಮಾಜಿ ಸಚಿವ ಯು.ಟಿ.ಖಾದರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥನ್, ಶಾಸಕ ಧರ್ಮಸೇನ, ಮಾಜಿ ಶಾಸಕರಾದ ವೆಂಕಟೇಶ್, ಎ.ಆರ್.ಕೃಷ್ಣಮೂರ್ತಿ, ಮುಖಂಡರಾದ ಸೂರಜ್‌ಹೆಗ್ಗಡೆ, ಮರೀಗೌಡ, ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ಮಂಜುಳಾ ಮಾನಸ, ತಾಲೂಕು ಅಧ್ಯಕ್ಷ ನಾರಾಯಣ್ ಇತರರಿದ್ದರು.