ಬೆಂಗಳೂರು: ಶಿಕ್ಷಣವಿದ್ದರೆ ಮಾತ್ರ ಸ್ವಾಭಿಮಾನದಿಂದ ಬದುಕಲು ಸಾಧ್ಯ. ಜ್ಞಾನದ ಬೆಳವಣಿಗೆಗೆ ಶಿಕ್ಷಣ ಆವಶ್ಯಕ. ಶಿಕ್ಷಣ ಅಂದರೆ ಕೇವಲ ಓದು, ಬರಹ ಕಲಿಸುವುದಲ್ಲ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ವೈಚಾರಿಕ ಶಿಕ್ಷಣದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮಕ್ಕೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ದೇವರ ಪೂಜೆ ಮಾಡಬೇಡಿ ಎನ್ನುವುದಿಲ್ಲ. ಆದರೆ ಮೌಡ್ಯ, ಕಂದಾಚಾರಗಳನ್ನು ಅನುಸರಿಸಬೇಡಿ. ಉನ್ನತ ಶಿಕ್ಷಣ ಪಡೆದ ವೈದ್ಯರು, ಎಂಜಿನಿಯರ್ ಗಳೂ ಈಗ ಮೌಡ್ಯಕ್ಕೆ ಜೋತು ಬಿದ್ದಿದ್ದಾರೆ. ಬಸವಾದಿ ಶರಣರು ಮೌಡ್ಯಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಹಿಂದಿನ ಜನ್ಮದಲ್ಲಿ ಏನಾಗಿದ್ದೆವು, ಮುಂದಿನ ಜನ್ಮದಲ್ಲಿ ಏನಾಗುತ್ತೇವೆ ಎಂಬುದು ಮುಖ್ಯವಲ್ಲ. ಈ ಜನ್ಮದಲ್ಲಿ ಮನುಷ್ಯ ರಾಗಿರುವುದು ಮುಖ್ಯ ಎಂದರು.
ಮಕ್ಕಳಿಗೆ ರಕ್ತಹೀನತೆ ಬರಲೇ ಬಾರದು. ಪೌಷ್ಟಿಕಾಂಶ ಕೊರತೆ ಆಗಲೇ ಬಾರದು. ಆಗ ಮಾತ್ರ ಮಕ್ಕಳು ಮಾನಸಿಕವಾಗಿ ಸದೃಢವಾಗಿ ಓದಿನಲ್ಲಿ ಚುರುಕಾಗು ತ್ತಾರೆ. ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಾವು ಮಕ್ಕಳಿಗೆ ರಾಗಿ ಮಾಲ್ಟ… ಕೊಡುವ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಿಕ್ಸ್ ನೀಡುವ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ್ದೇವೆ. ಮಕ್ಕಳ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಭಾವಿಸಿದ್ದೇವೆ ಎಂದರು.
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನ ಸ್ಥಾಪಕ ಮತ್ತು ರಾಗಿ ಮಿಕ್ಸ್‌ನ ಪೂರೈಕೆದಾರ ಸದ್ಗುರು ಮಧುಸೂದನ ಸಾಯಿ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮುಂತಾದವರಿದ್ದರು.