Advertisement

ಅನುದಾನ ಕೊಟ್ಟರೂ ಬಳಸುವವರೇ ಇಲ್ಲ!

06:18 AM Jun 30, 2020 | Lakshmi GovindaRaj |

ಬೆಂಗಳೂರು: ಕಾಡಿ ಬೇಡಿ ಅನುದಾನ ಗಿಟ್ಟಿಸಿಕೊಂಡರು. ಆದರೆ, ಈಗ ಆ ಅನುದಾನ ಬಳಸಿಕೊಳ್ಳುವವರೂ ಗತಿ ಇಲ್ಲ…! ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೂ ಕೋವಿಡ್‌ 19 ಸೋಂಕು ನಿಯಂತ್ರಣಕ್ಕೆ 20 ಲಕ್ಷ ರೂ. ಮೀಸಲಿಡಲಾಗಿದೆ.  ಆದರೆ, ಈ ಮೊತ್ತವನ್ನು ಬಳಸಿಕೊಳ್ಳಲು ಬೆರಳೆಣಿಕೆಯ ಪಾಲಿಕೆ ಸದಸ್ಯರಷ್ಟೇ ಮುಂದೆ ಬಂದಿದ್ದಾರೆ. ನಗರದಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

Advertisement

ಪ್ರತಿ ವಾರ್ಡ್‌ನಲ್ಲೂ ಕಂಟೈನ್ಮೆಂಟ್‌  ವಲಯಗಳು ತಲೆ ಎತ್ತುತ್ತಿವೆ. ಆದರೆ, ಆಡಳಿತ ಯಂತ್ರದ ಪ್ರಮುಖ ಭಾಗವಾಗಿರುವ ಪಾಲಿಕೆ ಸದಸ್ಯರು, ಯಾವುದೇ ಕ್ರಿಯಾ ಯೋಜನೆ ರೂಪಿಸಿಕೊಂಡು ಕೆಲಸ ಮಾಡುತ್ತಿರುವುದು ಕಂಡು ಬರುತ್ತಿಲ್ಲ. ಕೆಲವೇ ಕೆಲವು ಸದಸ್ಯರು ವಾರ್ಡ್‌  ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯಲ್ಲಿ ಚರ್ಚೆ ಮಾಡಿ ಅನುದಾನ ಬಳಕೆಗೆ ಮುಂದಾಗಿದ್ದಾರೆ. ಪಾಲಿಕೆ ಸದಸ್ಯರ ಅಧಿಕಾರ ಅವಧಿ ಇನ್ನು ಕೇವಲ ಎರಡು ತಿಂಗಳು ಇದೆ.

ಅದರಲ್ಲೂ ಸರ್ಕಾರಿ ರಜೆ ಹೊರತು ಪಡಿಸಿದರೆ 45 ದಿನ  ಸಿಗಲಿವೆ. ಇಂತಹ ಸಂದರ್ಭದಲ್ಲೂ ಪಾಲಿಕೆ ಸದಸ್ಯರು, ಸಕ್ರಿಯವಾಗಿ ಕೆಲಸ ಮಾಡದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಮೇ 1ಕ್ಕೆ ಪಾಲಿಕೆಯ 198 ವಾರ್ಡ್‌ಗಳಲ್ಲಿಯೂ ಅಧಿಕಾರಿಗಳನ್ನು ಒಳಗೊಂಡ ವಿಪತ್ತು  ನಿರ್ವಹಣಾ ಕೋಶ ರಚನೆ ಮಾಡಲಾಗಿತ್ತು. ಇದರಲ್ಲಿ ಆಯಾ ವಾರ್ಡ್‌ನ ಪಾಲಿಕೆ ಸದಸ್ಯರನ್ನೇ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ದೂರುತ್ತಿದ್ದ  ಪಾಲಿಕೆ ಸದಸ್ಯರಿಗೇ ಸಂಪೂರ್ಣ ಅಧಿಕಾರ ನೀಡಿದರೂ, ಬಹುತೇಕರು ಕೋವಿಡ್‌ 19 ಸೋಂಕು ತಡೆಯುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಪಾಲಿಕೆ ವ್ಯಾಪ್ತಿಯ  ವಾರ್ಡ್‌ಗಳಿಗೂ ತಲಾ 20 ಲಕ್ಷ ರೂ.ನಂತೆ ಒಟ್ಟು 3,960 ಲಕ್ಷ ರೂ. ಅನ್ನು ಮೇ 22ಕ್ಕೆ ಮೀಸಲಿಡಲಾಗಿತ್ತು.

“ಅನುದಾನ ನಮಗೆ ಸಿಗುತ್ತಿಲ್ಲ. ಜಾಬ್‌ಕೋಡ್‌ ತೆಗೆದುಕೊಳ್ಳುವಷ್ಟು ಕಾಲಾವಕಾಶ ಇಲ್ಲ’ ಎಂದು ಪಾಲಿಕೆ ಸದಸ್ಯರು ಕೌನ್ಸಿಲ್‌  ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಜಾಬ್‌ ಕೋಡ್‌ ಇಲ್ಲದೆಯೇ ಅನುದಾನ ಬಳಸಿಕೊಳ್ಳಲು ಮೇ 28ಕ್ಕೆ ಆಯುಕ್ತರು ಮತ್ತೂಂದು ಆದೇಶ ಮಾಡಿದರು. ಇಷ್ಟಾದರೂ, ಈ ಅನುದಾನ ಶೀಘ್ರ ಬಳಸಿಕೊಳ್ಳಲು ಪಾಲಿಕೆ  ಸದಸ್ಯರು ಮನಸ್ಸು ಮಾಡುತ್ತಿಲ್ಲ.

Advertisement

ಬಳಕೆ ಬಗ್ಗೆ ಸ್ಪಷ್ಟನೆಯೇ ಇಲ್ಲ: ಅನುದಾನವನ್ನು ಕೇವಲ ಕೋವಿಡ್‌ 19 ಸೋಂಕು ತಡೆಗೆ ಮಾತ್ರ ಬಳಸಿಕೊಳ್ಳಲು ಆಯುಕ್ತರು ನಿರ್ದೇಶನ ನೀಡಿದ್ದಾರೆ. ಹೀಗಾಗಿ, ಅನುದಾನವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳಬೇಕು ಎನ್ನುವ  ಬಗ್ಗೆ ಪಾಲಿಕೆ ಸದಸ್ಯರಲ್ಲಿ ಗೊಂದಲವಿದೆ. ಈಗ ಆಹಾರದ ಕಿಟ್‌ ನೀಡುತ್ತೇವೆ ಎನ್ನುತ್ತಾರೆ. ಇದಕ್ಕಿಂತ ತುರ್ತು ಕೆಲಸಗಳಿಗೆ ಅನುದಾನ ಬಳಸಿಕೊಳ್ಳಬಹುದು ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು  ಅಭಿಪ್ರಾಯಪಟ್ಟರು.

ಜಾಬ್‌ಕೋಡ್‌ ಬೇಕಾಗಿಲ್ಲ: ಪ್ರತಿ ವಾರ್ಡ್‌ಗೆ ಮೀಸಲಿಟ್ಟಿರುವ 20 ಲಕ್ಷ ರೂ.ಬಳಕೆಗೆ ಜಾಬ್‌ಕೋಡ್‌ ಪಡೆದುಕೊಳ್ಳುವುದು ಕಷ್ಟ ಎಂದು ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ ಮೇಲೆ ಈ ಅನುದಾನ ಬಳಕೆಗೆ ಜಾಬ್‌ಕೋಡ್‌ನ‌  ಅವಶ್ಯಕತೆ ಇಲ್ಲ ಎಂದು ಆಯುಕ್ತರು ಪರಿಷ್ಕೃತ ಆದೇಶದಲ್ಲಿ ತಿಳಿಸಿದ್ದಾರೆ. ಇಷ್ಟಾದರೂ ಯಾವ ವಾರ್ಡ್‌ನಲ್ಲಿ ಎಷ್ಟು ಸಭೆ ನಡೆದಿವೆ?. ಎಷ್ಟು ಅನುದಾನ ಬಳಕೆ ಆಗಿದೆ? ಎನ್ನುವ ಬಗ್ಗೆ ಯಾವ ಅಧಿಕಾರಿಗಳ ಬಳಿಯೂ ಮಾಹಿತಿ ಇಲ್ಲ.  “ಮಾಹಿತಿ ಕೇಳಿದ್ದೇವೆ ಇನ್ನು ಚರ್ಚೆ ಹಂತದಲ್ಲಿದೆ’ ಎಂದು ಪಾಲಿಕೆ ಸದಸ್ಯರು ಹೇಳಿದ್ದಾರೆಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ಸದಸ್ಯರು ಚರ್ಚೆ ಮಾಡಿದ್ದಾರೆ?: ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು, ಮಾಜಿ ಮೇಯರ್‌ ಗಂಗಾಂಬಿಕೆ, ಪದ್ಮಾವತಿ, ಜೆಡಿಎಸ್‌ ನಾಯಕಿ ನೇತ್ರಾ, ಪಾಲಿಕೆ  ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌, ಆಡಳಿತ ಪಕ್ಷದ ನಾಯಕ ಮುನಿಂದ್ರ ಕುಮಾರ್‌ ಸೇರಿದಂತೆ ಹಲವು ಸದಸ್ಯರು, ಈ ಅನುದಾನ ಬಳಸಿಕೊಳ್ಳುವ ನಿಟ್ಟಿನಲ್ಲಿ ವಾರ್ಡ್‌ ಮಟ್ಟದಲ್ಲಿ ಸಭೆ ನಡೆಸಿದ್ದಾರೆ. ಆದರೆ, ಯಾವ ವಾರ್ಡ್‌  ನಲ್ಲೂ ಅನುದಾನ ಖರ್ಚು ಮಾಡಿರುವ ಬಗ್ಗೆ ವರದಿಯಾಗಿಲ್ಲ.

ಅನುದಾನ ಬಳಕೆ ಮಾಡುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರೇ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಿದ್ದಾರೆ. ಅನುದಾನ ಬಳಕೆಯ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗಿದೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತರು

ಅನುದಾನ ಬಳಕೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಇನ್ನೂ ಯಾವುದೇ ವಾರ್ಡ್‌ನಲ್ಲೂ ಕಾರ್ಯರೂಪಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ಚರ್ಚೆ ಮಾಡಿ ಅನುದಾನ ಬಳಕೆಗೆ ಒತ್ತು ನೀಡಲಾಗುವುದು.
-ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕರು

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next