Advertisement

ಹೊಸ ರಾಜ್ಯ ರಚನೆ ಇಲ್ಲ

11:57 PM Aug 03, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಹೊಸ ರಾಜ್ಯ ರಚಿಸುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ. ಪ್ರಶ್ನೋತ್ತರ ವೇಳೆಯಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ  ನಿತ್ಯಾನಂದ ರಾಯ್‌ ಅವರು ಈ ಮಾಹಿತಿ ನೀಡಿದ್ದಾರೆ.

Advertisement

ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಕೊಂಗು ಪ್ರದೇಶವನ್ನು ಪ್ರತ್ಯೇಕವಾಗಿ ರಾಜ್ಯ ಮಾಡಬೇಕು ಎಂಬ ಬಗ್ಗೆ ಚರ್ಚೆಗಳು ಎದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಉತ್ತರ ಮಹತ್ವ ಪಡೆದಿದೆ. “ದೇಶದ ವಿವಿಧ ಭಾಗಗಳಿಂದ ಹೊಸ ರಾಜ್ಯ ರಚನೆ ಮಾಡಬೇಕು ಎಂಬ ಬಗ್ಗೆ ವಿವಿಧ ಸಂಘಟನೆ ಗಳಿಂದ ಮತ್ತು ಪ್ರಮುಖರಿಂದ ಕೇಂದ್ರ ಸರಕಾರಕ್ಕೆ ಮನವಿಗಳು ಸಲ್ಲಿಕೆಯಾಗುತ್ತಿವೆ. ಹೊಸ ರಾಜ್ಯ ರಚನೆ ಮಾಡಿದರೆ ಅದರಿಂದ ದೂರಗಾಮಿ ಪರಿಣಾಮ ಎದುರಿಸಬೇಕಾಗುತ್ತದೆ. ಜತೆಗೆ ಹೆಚ್ಚು ರಾಜ್ಯಗಳಿಂದಾಗಿ ಒಕ್ಕೂಟ ವ್ಯವಸ್ಥೆಗೇ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಿ ಕಾಡಬಹುದು’ ಎಂದು ತಮಿಳುನಾಡಿನ ಸಂಸದರಾಗಿರುವ ಟಿ.ಆರ್‌. ಪಾರಿವೇಂದರ್‌ ಮತ್ತು ಎಸ್‌.ರಾಮಲಿಂಗಂ ಕೇಳಿದ ಪ್ರಶ್ನೆಗೆ ರಾಯ್‌ ಉತ್ತರಿಸಿದ್ದಾರೆ. ಆಂಧ್ರಪ್ರದೇಶವನ್ನು ವಿಭಜಿಸಿ 2014ರಲ್ಲಿ ಆ ಸಂದರ್ಭದ ಕೇಂದ್ರ ಸರಕಾರ ತೆಲಂಗಾಣ ಎಂಬ ಹೊಸ ರಾಜ್ಯ ರಚನೆ ಮಾಡಿತ್ತು. ಅನಂತರ ಯಾವುದೇ ಹೊಸ ರಾಜ್ಯಗಳು ರಚನೆಯಾಗಿಲ್ಲ. ಆ ಸಂದರ್ಭದಲ್ಲಿಯೇ ಹಲವಾರು ಹೊಸ ರಾಜ್ಯಗಳ ಬೇಡಿಕೆಗೆ ಅರ್ಜಿ ಸಲ್ಲಿಕೆಯಾಗಿತ್ತು.

ನಾಯ್ಡು ಚರ್ಚೆ:

ಸಂಸತ್‌ನಲ್ಲಿ ಕಲಾಪ ನಡೆಯದೇ ಇರುವ ಬಗ್ಗೆ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಆತಂಕ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟು ಪರಿಹಾರಕ್ಕಾಗಿ ಮೇಲ್ಮನೆಯಲ್ಲಿನ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾಗಿರುವ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಪ್ರಹ್ಲಾದ್‌ ಜೋಶಿ, ಸದನ ನಾಯಕ ಪಿಯೂಷ್‌ ಗೋಯಲ್‌ ಜತೆಗೆ ಉಪರಾಷ್ಟ್ರಪತಿ ಸಭೆಯನ್ನೂ ನಡೆಸಿದ್ದಾರೆ.

ಎರಡು ಮಸೂದೆಗಳಿಗೆ ಅಂಗೀಕಾರ :

Advertisement

ಪೆಗಾಸಸ್‌, ಕೃಷಿ ಕಾಯ್ದೆ ವಿಚಾರಕ್ಕಾಗಿ ಲೋಕ ಸಭೆಯಲ್ಲಿ ಮಂಗಳವಾರವೂ ಕಲಾಪ ನಡೆಸಲು ಅಡ್ಡಿಯಾಯಿತು. ವಿಪಕ್ಷಗಳ ಕೋಲಾಹಲ, ಗಲಾಟೆ ನಡುವೆಯೇ ನ್ಯಾಯಮಂಡಳಿಗಳ ಸುಧಾರಣೆ ಮಸೂದೆ ಮತ್ತು ಅಗತ್ಯ ರಕ್ಷಣ ಸೇವೆಗಳ ಮಸೂದೆ 2021ಕ್ಕೆ ಕೇಂದ್ರ ಸರಕಾರ ಸದನದ ಅನು ಮೋದನೆ ಪಡೆದುಕೊಂಡಿದೆ. 12 ಗಂಟೆಗೆ ಪ್ರಶ್ನೋತ್ತರ ವೇಳೆ ಮುಕ್ತಾಯವಾಗು ತ್ತಿದ್ದಂತೆಯೇ ಸ್ಪೀಕರ್‌ ಓಂ ಬಿರ್ಲಾ ಕೃಷಿಕರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾ ಗುತ್ತದೆ. ವಿಪಕ್ಷಗಳ ಸಂಸದರು ತಮ್ಮ ಆಸನಕ್ಕೆ ವಾಪಸಾಗಬೇಕು ಎಂದು ಮನವಿ ಮಾಡಿದರೂ, ವ್ಯರ್ಥವಾಯಿತು. ಸಂಜೆ 4 ಗಂಟೆಗೆ ಕಲಾಪವನ್ನು ಬುಧವಾರಕ್ಕೆ ಮುಂದೂಡ ಲಾಯಿತು.

ರಾಜ್ಯಸಭೆ ಯಲ್ಲಿ ಕೂಡ ಕೋಲಾಹಲದ ನಡುವೆಯೇ ದಿವಾಳಿ ಸಂಹಿತೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸ ಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ “ವಿಪಕ್ಷಗಳ ಅನುಚಿತ ವರ್ತನೆ ಹೊಸ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ’ ಎಂದು ಟೀಕಿಸಿದರು.

ಸಂಸತ್‌ ಅಧಿವೇಶನ ಸುಗಮವಾಗಿ ನಡೆಯುವುದರ ಬಗ್ಗೆ ಸರಕಾರ ಮತ್ತು ವಿಪಕ್ಷಗಳು ಒಟ್ಟಾಗಿ ಕುಳಿತು ಸಮಾಲೋಚನೆ ನಡೆಸಬೇಕು. ಅಲ್ಲಿ ಬಿಕ್ಕಟ್ಟು ಪರಿಹಾರ ಮಾಡಿ, ಕಲಾಪ ನಡೆಯುವಂತೆ ಮಾಡಬೇಕು.-ಎಂ.ವೆಂಕಯ್ಯ ನಾಯ್ಡು, ರಾಜ್ಯಸಭೆ ಸಭಾಪತಿ

 

Advertisement

Udayavani is now on Telegram. Click here to join our channel and stay updated with the latest news.

Next