Advertisement
ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳಿಗೆ ಮಾಹಿತಿ ಏನಿದೆಯೋ ಗೊತ್ತಿಲ್ಲ. ನಾನು ಸೇರಿ ಹಲವು ಮುಖಂಡರು ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೆವು. ಒಂದೆರಡು ಕಡೆ ಒಳ್ಳೆಯ ಕೆಲಸವಾಗಿದ್ದಕ್ಕೆ ಜಿಲ್ಲಾಧಿಕಾರಿಗಳಿಗೆ “ಒಳ್ಳೆಯ ಕೆಲಸ ಮಾಡಿದ್ದೀರಿ, ಮುಂದುವರಿಸಿ ಚೆನ್ನಾಗಿ ಕೆಲಸ ಮಾಡಿ’ ಎಂದು ಹೇಳಿದ್ದೆ. ಎಲ್ಲಿ ಸರಿಯಾಗಿ ಕೆಲಸ ನಡೆದಿಲ್ಲವೋ ಅಲ್ಲಿನ ಅಧಿಕಾರಿಗಳಿಗೆ ಪ್ರತಿಪಕ್ಷ ನಾಯಕನಾಗಿ ಛೀಮಾರಿ ಹಾಕಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದೆ. ಮುಖ್ಯಮಂತ್ರಿಗಳಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತಿದ್ದೇನೆ’ ಎಂದು ಹೇಳಿದರು.
Related Articles
Advertisement
ಗ್ರಾಮ ವಾಸ್ತವ್ಯಕ್ಕೆ ವಿರೋಧವಿಲ್ಲ: ಗ್ರಾಮ ವಾಸ್ತವ್ಯಕ್ಕೆ ವಿರೋಧವಿಲ್ಲ. ಆದರೆ, ಈ ಹಿಂದೆ ಅವರು ವಾಸ್ತವ್ಯ ಹೂಡಿದ್ದ ಗ್ರಾಮಗಳ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಹಳ್ಳಿಗಳ ವಾಸ್ತವ ಸ್ಥಿತಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ. ಈಗಲಾದರೂ ಮುಖ್ಯಮಂತ್ರಿಗಳು, ಸಚಿವರು ಜನರ ಸಮಸ್ಯೆಗೆ ಸ್ಪಂದಿಸಲಿ. ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಗೆ ಆಗ್ರಹ: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಕಾರಣ ರೈತರು ಬೀದಿ ಪಾಲಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಶೇ.6ರ ಬಡ್ಡಿ ದರದಲ್ಲಿ 6,000 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದೆ. ಶೇ. 90ರಷ್ಟು ಕಾರ್ಖಾನೆಗಳು ಈ ಸೌಲಭ್ಯ ಪಡೆದಿದ್ದರೂ ರೈತರಿಗೆ ಬಾಕಿ ಪಾವತಿಸಿಲ್ಲ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಮುಖ್ಯಮಂತ್ರಿಗಳು ಕಣ್ಣು ಮುಚ್ಚಿ ಕುಳಿತು ಕೇವಲ ಭರವಸೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸೌಲಭ್ಯ ಪಡೆದ ಹಾಗೂ ಪಡೆಯಬೇಕಾದ ಕಾರ್ಖಾನೆಗಳು ಕೂಡಲೇ ರೈತರಿಗೆ ಬಾಕಿ ಪಾವತಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ಡಿಪಿಆರ್ ಕೈಬಿಡಿ: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಹರಿಸುವ ಸಂಬಂಧ ಸರ್ಕಾರ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಯತ್ನ ಆರಂಭಿಸಿದ್ದು, ಇದಕ್ಕೆ ಆ ಭಾಗದ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅವೈಜ್ಞಾನಿಕ. ಕಾರ್ಯಸಾಧುವಲ್ಲದ ಸುಳ್ಳು ಭರವಸೆಗಳನ್ನು ನೀಡಿ ಸಾವಿರಾರು ಕೋಟಿ ರೂ.ಖರ್ಚು ಮಾಡುವ ಬದಲಿಗೆ ವಾಸ್ತವ ಅರ್ಥ ಮಾಡಿಕೊಂಡು ಡಿಪಿಆರ್ ಸಿದ್ಧಪಡಿಸುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು. ಇದು ಆ ಭಾಗದ ಜನರ ಹೋರಾಟ. ಇದನ್ನು ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ಶಾಶ್ವತ ವ್ಯವಸ್ಥೆ ರೂಪಿಸಬೇಕು ಎಂದು ಯಡಿಯೂರಪ್ಪ ಹೇಳಿದರು.
ಪರಮೇಶ್ವರ್ ಜತೆ ಮಾತನಾಡ್ತೇನೆ: ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂಚರಿಸುತ್ತಿದ್ದ ಮಾರ್ಗದಲ್ಲಿ ಕಟ್ಟಡದ ಮೇಲಿದ್ದ ಬಿಜೆಪಿ ಧ್ವಜ ತೆರವಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಪಕ್ಷದ ಧ್ವಜ ಹಾರಿಸಬಾರದು ಎಂಬುದಾಗಿ ಅನುಭವಿ ರಾಜಕಾರಣಿಯಾದ ಪರಮೇಶ್ವರ್ ಅವರು ಹೇಳಿರುವುದಕ್ಕೆ ಸಾಧ್ಯವಿಲ್ಲ. ವಾಸ್ತವ ಸ್ಥಿತಿ ತಿಳಿದು ಅವರೊಂದಿಗೆ ಮಾತನಾಡುತ್ತೇನೆ ಎಂದರು.