ಶ್ರೀನಿವಾಸಪುರ: ತಾಲೂಕಿನಲ್ಲಿ ವರುಣನ ಆರ್ಭಟಕ್ಕೆ ಮಾವು ನೆಲಕಚ್ಚಿದ್ದು, ಬೆಳೆಗಾರರು ಹತಾಶರಾಗಿದ್ದಾರೆ.
ಯಲ್ದೂರು, ಕಸಬಾ ಹೋಬಳಿಗಳಲ್ಲಿ ಹೆಚ್ಚಿನ ನಷ್ಟವಾಗಿದ್ದು, ಹಿಂದಿನ ವರ್ಷ ಬೆಲೆಯಿಲ್ಲದೆ ಕಂಗಾಲಾಗಿದ್ದ ಬೆಳೆಗಾರ, ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ನಷ್ಟಕ್ಕೆ ಒಳಗಾಗುವಂತಾಗಿದೆ. ಬಿರು ಬಿಸಿಲಿಗೆ ಉದುರಿ ಉಳಿದಿದ್ದ ಮಾವು ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲೆಕಚ್ಚಿದೆ. ಕಸಬಾ ಹೋಬಳಿಯಲ್ಲಿ ನೂರಾರು ಎಕರೆಯಲ್ಲಿದ್ದ ಮಾವು ಅರ್ಧ ಭೂಮಿ ಪಾಲಾಗಿದೆ.
ಮಳೆ ಅಭಾವದಿಂದ ಬಾಯಾರಿದ್ದ ನೆಲದಲ್ಲಿ ಮಾವಿನ ಹೂವು ಶೇ.30 ಭಾಗ ಮಾತ್ರ ಕಾಯಿ ಕಟ್ಟಿತ್ತು. ತಿಂಗಳಿಂದ ಮಳೆ ಇಲ್ಲದೆ ಬಿಸಿಲಿನ ಹಬೆಗೆ ಬಾಡಿದ್ದ ಮಾವು ವಾರದ ಹಿಂದೆ ಸುರಿದ ಆಲಿಕಲ್ಲು ಮಳೆಗೆ ನೆಲಕಚ್ಚಿದೆ. ತೋಟಗಳಲ್ಲಿ ಬಿಟ್ಟಿದ್ದ ಶೇ.50ರಿಂದ ಶೇ.65 ಭಾಗದಷ್ಟು ಮಾವಿನ ಪೀಚು ಉದುರಿದೆ. ಅದನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಕೇಳುವವರಿಲ್ಲ. ಟನ್‌ಗೆ ಕೇವಲ 2 ರಿಂದ 3 ಸಾವಿರ ರೂ. ಇದೆ ಎಂದು ರೈತರು ನೋವು ತೋಡಿಕೊಂಡರು. ಮಾವಿನ ನಗರಿಯೆಂದೇ ಖ್ಯಾತಿಗಳಿಸಿರುವ ಶ್ರೀನಿವಾಸಪುರ ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಕೃಷಿ ಹೊಂದಿದ್ದು, 15 ವರ್ಷಗಳಿಂದ ಸಮರ್ಪಕ ಮಳೆಯಾಗದೆ ಫಸಲು ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ವರುಣ ಕೃಪೆಗಾಗಿ ಜನರು ತವಕಿಸುತ್ತಿದ್ದರು. ಇದೀಗ ವಿಪರೀತವಾಗಿ ಬೀಸಿದ ಗಾಳಿ ಮಳೆಗೆ ಕಟ್ಟಿದ ಫಸಲು ನಾಶವಾಗಿದೆ.
ಪರಿಹಾರಕ್ಕೆ ಒತ್ತಾಯ: ಅಕಾಲಿಕ ಮಳೆಗೆ ಮಾವು ಉದುರಿ ನಷ್ಟಕೊಳ್ಳಗಾಗಿರುವ ರೈತ ರಿಗೆ ತಾಲೂಕು ಆಡಳಿತದಿಂದ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ಕೊಡಬೇಕೆಂದು ಮಾವು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯ ದರ್ಶಿ ನೀಲಟೂರು ಚಿನ್ನಪ್ಪರೆಡ್ಡಿ ಒತ್ತಾಯಿಸಿ ದ್ದಾರೆ. ಕಸಬಾ ಹೋಬಳಿ ವ್ಯಾಪ್ತಿಯ ನಂಬಿಹಳ್ಳಿ, ಜೆ. ತಿಮ್ಮಸಂದ್ರ, ಆರಿಕುಂಟೆ ಗ್ರಾಪಂ ವ್ಯಾಪ್ತಿ ಯಲ್ಲಿ ಎರಡು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಈ ಭಾಗದ ಆರಮಾಹಕಹಳ್ಳಿ, ಶೆಟ್ಟಿಹಳ್ಳಿ, ವೈ.ಹೊಸಕೋಟೆ, ಆಗ್ರಹಾರ, ಎಲವಕುಂಟೆ ಭಾಗದಲ್ಲಿ ಆಲಿಕಲ್ಲು ಮಳೆಗೆ ಬಹುತೇಕ ಗ್ರಾಮಗಳ ಮಾವಿನ ಕಾಯಿ ಮರಗಳಿಂದ ಅರ್ಧಭಾಗ ಕಳಚಿ ಮಣ್ಣುಪಾಲಾಗಿವೆ.