Advertisement

ಎಚ್‌ಡಿಕೆಗೆ ಸಿಎಂ ಆಗುವ ನೈತಿಕತೆಯಿಲ್ಲ: ಶೆಟ್ಟರ್‌

07:00 AM May 24, 2018 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌-ಜೆಡಿಎಸ್‌ನ ಈಗಿನ ಮೈತ್ರಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನವಾಗಿದ್ದು, ಎಚ್‌.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನೈತಿಕತೆ ಇಲ್ಲ ಎಂದು ಶಾಸಕ ಜಗದೀಶ ಶೆಟ್ಟರ ಹೇಳಿದರು.

Advertisement

ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಬುಧವಾರ ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಲವು ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಶಾಸಕರಿಗೆ ಹೋಟೆಲ್‌ನಲ್ಲಿ ಬಂಧನದಲ್ಲಿಟ್ಟಿರುವುದರಿಂದ ಅವರ ಕುಟುಂಬ ಸದಸ್ಯರೊಂದಿಗೂ ಮಾತನಾಡಲು ಸಾಧ್ಯವಾಗಿಲ್ಲ. ಬಂಧನದಿಂದ ಹೊರ ಬಂದ ನಂತರ ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಿ. ನಾವೇನು ಆಪರೇಷನ್‌ ಕಮಲ ಮಾಡಬೇಕಿಲ್ಲ. ಅಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತಿರುವ ಕೆಲ ಶಾಸಕರು ನಮಗೆ ಆಪರೇಷನ್‌ ಮಾಡಿ ಎಂದು ಪಕ್ಷಕ್ಕೆ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.

ಈಗಾಗಲೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನ ವಿರೋಧವಿರುವ ಈ ಸರಕಾರ ಬಹಳ ದಿನ ಮುಂದುವರಿಯುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆವರೆಗೂ ಕಾಯುವ ಅಗತ್ಯವಿಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷದ ಮುಂದೆ ಮಂಡೆಯೂರಿ ನಿಲ್ಲುವ ಪರಿಸ್ಥಿತಿ ಬರಬಾರದಾಗಿತ್ತು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next