Advertisement

ವರ್ಗಾವಣೆಗೆ ಹಣ ತಗೋಳಲ್ಲ: ಭೂ ಮಾಫಿಯಾಗೆ ಹೆದರೋಲ್ಲ

12:41 PM Oct 02, 2018 | Team Udayavani |

ಬೆಂಗಳೂರು: ವರ್ಗಾವಣೆಗೆ ಯಾರಿಂದಲೂ ಹಣ ತೆಗೆದುಕೊಳ್ಳುವುದಿಲ್ಲ. ಖಡಕ್‌ ಅಧಿಕಾರಿಗಳನ್ನು ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಿದ್ದೇನೆ. ಇಲ್ಲಿನ ಕಾನೂನು ಬಾಹಿರ ಚುಟವಟಿಕೆಗೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾನು ವರ್ಗಾವಣೆ ವಿಚಾರದಲ್ಲಿ ಎಲ್ಲೂ ರಾಜಿ ಆಗುವುದಿಲ್ಲ. ಯಾವ ಭೂಗಳ್ಳರು ನನ್ನನ್ನು ಕೊಂಡುಕೊಳ್ಳಲು ಆಗಲ್ಲ. ಬೆಂಗಳೂರಿಗೆ ಕೆಲ ಕಠಿಣ ನಿರ್ಧಾರ ತೆಗೆದುಕೊಂಡು ಒಂದೆರಡು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇನೆ ಎಂದರು.

ಭೂಗಳ್ಳರು ಮತ್ತು ಇಸ್ಪೀಟ್‌ ಮಾಫಿಯಾಕ್ಕೆ ಬಗ್ಗುವ, ಜಗ್ಗುವ ಪ್ರಶ್ನೆಯೇ ಇಲ್ಲ. ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರಿನ ಪ್ರತಿಷ್ಠಿತ ಶಾಲಾ ಕಾಲೇಜುಗಳ ಮುಂದೆ ಗಾಂಜಾ ಮಾರಾಟ ನಿಯಂತ್ರಣಕ್ಕೂ ಆದೇಶಿಸಿದ್ದೇನೆ ಎಂದು ಹೇಳಿದರು.

ಸರಗಳ್ಳತನ ಸೇರಿದಂತೆ ಮಹಿಳೆಯರ ರಕ್ಷಣೆಗಾಗಿ ಬೆಂಗಳೂರು ಸಹಿತವಾಗಿ ರಾಜ್ಯದ ಎಲ್ಲ ನಗರದ ಬೀದಿಗಳಲ್ಲೂ ಸಿಸಿಟಿವಿ ಅಳವಡಿಸಲಿದ್ದೇವೆ. ಇದಕ್ಕೆ ಎಷ್ಟೇ ಕೋಟಿ ಖರ್ಚಾದರೂ ಪರವಾಗಿಲ್ಲ. ಸಿಸಿಕ್ಯಾಮೆರಾ ಅಳಡಿಸುತ್ತೇವೆ. ಹಾಗೆಯೇ ಈಗಾಗಲೇ ಅಳವಡಿಸಿ ಕೆಟ್ಟಿರುವ ಸಿಸಿ ಕ್ಯಾಮೆರಾಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಹೀಗೆ ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆ ಮಾಡುವುದಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಸಮ್ಮಿಶ್ರ ಸರ್ಕಾರ ಬಿದ್ದೆ ಹೋಯಿತು ಎಂದು ಹದಿನೈದು ದಿನದ ಹಿಂದೆ ಎಡೆಬಿಡದೆ ಸುದ್ದಿ ಮಾಡಿದರು. ಆದರೆ, ರಾಜ್ಯದ ಜನರ ಆಶೀರ್ವಾದದಿಂದ ಏನೂ ಆಗಿಲ್ಲ.

Advertisement

ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ರೈತರ ಸಾಲಮನ್ನಾ ಮಾತ್ರವಲ್ಲ ಮೂರು ತಿಂಗಳಲ್ಲಿ ಹಲವು ಕಾರ್ಯಕ್ರಮ ಹಾಗೂ ಯೋಜನೆ ಜಾರಿ ಮಾಡಿದ್ದೇವೆ. ಬೆಳಗ್ಗೆಯಿಂದ ರಾತ್ರಿವರೆಗೂ  ಜನತಾ ದರ್ಶನ ಮಾಡಿ ಜನರ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗಿದೆ ಎಂದು ಸರ್ಕಾರದ ಸಾಧನೆಯನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next