ಜಮಖಂಡಿ/ಮಂಡ್ಯ: ಚುನಾವಣಾ ಪೂರ್ವದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಬೊಬ್ಬೆ ಹೊಡೆದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ, ಅಧಿಕಾರಕ್ಕೆ ಬಂದ ನಂತರದಲ್ಲಿ ಬ್ಯಾಂಕುಗಳಿಗೆ ಹಣ ಕಟ್ಟಲು ಬೊಕ್ಕಸದಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.
ಮಂಡ್ಯದಲ್ಲಿ ಮಂಗಳವಾರ ಮಂಡ್ಯ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯನವರ ಪರ ಚುನಾವಣಾ ಪ್ರಚಾರ ನಡೆಸಿದರು. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಅಡ್ಡಗಾಲಾಗಿದ್ದಾರೆಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಬ್ಯಾಂಕುಗಳಿಗೆ ಸಾಲ ಮನ್ನಾದ ಹಣ ಕಟ್ಟಿದರೆ ಅದನ್ನು ತಡೆಯುವುದಕ್ಕೆ ಯಾರಿಂದ ಸಾಧ್ಯವಾಗುತ್ತದೆ. ಸಾಲ ಮನ್ನಾ ಮಾಡಲು ಬೊಕ್ಕಸದಲ್ಲಿ ಹಣವಿಲ್ಲದ ಕಾರಣ ಮೋದಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
ಬಳಿಕ, ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಪರ ಪ್ರಚಾರ ನಡೆಸಿದ ಬಿಎಸ್‌ವೈ, ರಾಜ್ಯಕ್ಕೆ ಕುಮಾರಸ್ವಾಮಿ ಅವರ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು. ಜಮಖಂಡಿ ಉಪ ಚುನಾವಣೆಯಲ್ಲಿಶ್ರೀಕಾಂತಕುಲಕರ್ಣಿಅವರನ್ನು ಗೆಲ್ಲಿಸುವುದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ನಾಂದಿ ಹಾಡಬೇಕು ಎಂದರು.
ರಾಜ್ಯದಲ್ಲಿ 80 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಒಬ್ಬ ಅಭ್ಯರ್ಥಿ ಸಿಗಲಿಲ್ಲವೇ?. 80 ಸ್ಥಾನದಲ್ಲಿ ಗೆದ್ದರೂ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಎದುರು ಮಂಡಿಯೂರಿ ಅಧಿಕಾರ ನೀಡಿದ್ದಾರೆ.
● ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.
ವಿಧಾನಸಭೆಯೊಳಗೆ ದೋಸ್ತಿ ಪಕ್ಷಗಳು ಅಧಿಕಾರ ನಡೆಸುತ್ತಿದ್ದರೆ, ಮಂಡ್ಯ, ರಾಮನಗರ, ಬಳ್ಳಾರಿ, ಶಿವಮೊಗ್ಗದಲ್ಲಿ ದೋಸ್ತಿಗಳ ಕುಸ್ತಿ ನಡೆಯುತ್ತಿದೆ. ಆ ಪಕ್ಷಗಳಲ್ಲೇ ಮೈತ್ರಿಗೆ ವಿರೋಧ ಇದೆ. ಹೊಡೆದಾಡಿಕೊಂಡು ಆಸ್ಪತ್ರೆ ಸೇರಿರುವ ಕಾರ್ಯಕರ್ತರು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ಇಂತಹ ಸ್ಥಿತಿಯೊಳಗೆ ಚುನಾವಣೆಯಲ್ಲಿ ದೋಸ್ತಿ ಹೇಗೆ ಆಗುತ್ತೆ, ಇದೆಲ್ಲವೂ ಬಿಜೆಪಿಗೆ ವರವಾಗಲಿದೆ.
ಶೋಭಾ ಕರಂದ್ಲಾಜೆ ಮಾಜಿ ಸಚಿವೆ.