ಜೋಯಿಡಾ: ಕಾತೇಲಿ ಗ್ರಾಪಂ ವ್ಯಾಪ್ತಿಯ ಡೇರಿಯಾ ಗ್ರಾಮಕ್ಕೆ ರಾಜ್ಯ ಕೃಷಿ ಇಲಾಖೆ ಆಯುಕ್ತ ಬ್ರಿಜೇಷಕುಮಾರ ದೀಕ್ಷಿತ ಭೇಟಿ ನೀಡಿ ಅಲ್ಲಿನ ರೈತರಿಗೆ ಕೃಷಿ ಸನ್ಮಾನ ಯೋಜನೆಯ ಮಾಹಿತಿ ನೀಡಿದರು.
ನಂತರ ಇಲ್ಲಿನ ರೈತರ ಶೂನ್ಯ ಬಂಡವಾಳ ಕೃಷಿ ಪದ್ಧತಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಡಿನ ಮಧ್ಯದ ಗ್ರಾಮವಾದ ಡೇರಿಯಾದ ಕಾಡಿನಲ್ಲಿ ವಾಸಿಸುವ ಜನರಿಗೆ ಪ್ರಧಾನ ಮಂತ್ರಿ ಕೃಷಿ ಸನ್ಮಾನ ಯೋಜನೆ ಬಗ್ಗೆ ಅರಿವು ಇದೆಯೋಇಲ್ಲವೋ ಎನ್ನುವ ಕುರಿತು ಹಾಗೂ ಕೃಷಿಯಲ್ಲಿನ ಹೊಸತನ ಪರಿಶೀಲಿಸುವ ಸಲುವಾಗಿ ವಿಶೇಷತಃ ಡೇರಿಯಾಕೆ ಭೇಟಿ ನೀಡಿದ್ದರೆ ಎನ್ನಲಾಗಿದೆ. ಇಲ್ಲಿಯೂ ರೈತರೊಂದಿಗೆ ಚರ್ಚಿಸಿದ ಅವರು ಪಿ.ಎಂ. ಕಿಸಾನ್ ಸಮ್ಮಾನ ಯೋಜನೆಯ ಲಾಭ ಪಡೆದುಕೊಳ್ಳಲು ಕರೆನೀಡಿದರು.
ರೈತರು ಪ್ರಧಾನ ಮಂತ್ರಿ ಕೃಷಿ ಸನ್ಮಾನ ಯೋಜನೆ ಲಾಭ ಒಂದೆರಡು ರೈತರನ್ನು ಹೊರತುಪಡಿಸಿ ಬಹುತೇಕರಿಗೆ ದೊರೆತಿರುವ ಬಗ್ಗೆ ಮಾಹಿತಿ ನೀಡಿದರು. ಆಗ ರೈತರಿಗೆ ಪ್ರತಿಕ್ರಿಯಿಸಿದಆಯುಕ್ತರು, ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಇಲ್ಲದಿರುವ ಕೆಲವರಿಗೆ ಈ ಯೋಜನೆಯ ಅನುದಾನ ಖಾತೆಗೆ ಸೇರ್ಪಡೆಗೊಂಡಿಲ್ಲ. ಆದರೆ ಇಂತಹ ರೈತರು ಯಾವುದೇ ಚಿಂತೆ ಮಾಡ ಬೇಕಾದ ಅಗತ್ಯವಿಲ್ಲ. ನಿಮ್ಮ ಖಾತೆಗೆ ಆಧಾರ ಲಿಂಕ್ ಸರಿಯಾಗಿ ಜೋಡಣೆಯಾದ ನಂತರ ನಿಮಗೆ ಇದರ ಸಂಪೂರ್ಣ ಲಾಭ ದೊರೆಯಲಿದೆ. ಹಿಂದಿನ ಕಂತಿನ ಬಾಕಿ ಸಹಿತ ಖಾತೆಗೆ ಜಮಾವಣೆಗೊಳ್ಳಲಿದೆ ಎಂದರು. ಪಾರಂಪರಿಕ ಕೃಷಿ ಪದ್ಧತಿಯನ್ನು ಇನ್ನೂ ಜೀವಂತವಾಗಿಡುವ ಇಲ್ಲಿನ ರೈತರ ಪ್ರಯತ್ನ ಶ್ಲಾಘಿಸಿದರು.
ನಂದಿಗದ್ದೆ ಗ್ರಾ.ಪಂ.ಗೆ ಭೇಟಿ: ನಂತರ ತಾಲೂಕಿನ ನಂದಿಗದ್ದಾ ಗ್ರಾ.ಪಂ.ಗೆ ಭೇಟಿ ನೀಡಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ ಸನ್ಮಾನ ಯೋಜನೆಯಡಿ ರೈತರ ಖಾತೆಗೆ ಜಮಾ ಆಗಬೇಕಾಗಿದ್ದ ಮೊತ್ತದ ಪರಿಶೀಲನೆ ನಡೆಸಿದರು. ಅಲ್ಲಿ ನೆರೆದ ರೈತರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಿದರು. ರಾಜ್ಯದಲ್ಲಿ ಬಹಳಷ್ಟು ಜಿಲ್ಲೆಗಳಲ್ಲಿ ರೈತರಿಗೆ ಈ ಯೋಜನೆಯಿಂದ ಹಣ ದೊರೆತಿಲ್ಲ, ರೈತರ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಇಲ್ಲದ ಕಾರಣ ಹಣ ಜಮಾವಣೆ ಆಗಿಲ್ಲ ಎಂದರು. ಇಂತಹ ಸಮಸ್ಯೆಗಳ ಬಗ್ಗೆ ರೈತರಿಗೆ ತಿಳಿಹೇಳಿ, ಆಧಾರಕಾರ್ಡ್ ಲಿಂಕ್ ಸರಿಯಾಗಿ ಮಾಡುವ ಮೂಲಕ ಯಾರಿಗೂ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕಿದೆ. ಎಲ್ಲಾ ರೈತರಿಗೂ ಯೋಜನೆಯ ಲಾಭ ದೊರೆಯುವಂತಾಗಬೇಕು ಎಂದರು.
ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಹೊನ್ನಪ್ಪ ಗೌಡ, ಪ್ರಮುಖರಾದ ಶಿವಕುಮಾರ, ಜೋಯಿಡಾ ಕೃಷಿ ಅಧಿಕಾರಿ ಪಿ.ಐ. ಮಾನೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತೋಡ್ಕರ್, ಡೇರಿಯಾದ ಡಾ|ಜಯಾನಂದ ಡೇರೆಕರ್ ಹಾಗೂ ಡೇರಿಯಾ ವಾಗ್ಬಂದ, ನಂದಿಗದ್ದೆ ಪಂಚಾಯತ್ ವ್ಯಾಪ್ತಿ ಕೃಷಿಕರು ಉಪಸ್ಥಿತರಿದ್ದರು.